ಹೈಲೈಟ್ಸ್:
- ಅಕ್ಟೋಬರ್ ತಿಂಗಳ ಸಕ್ರಿಯ ಬಳಕೆದಾರರ ಡೇಟಾ ಬಿಡುಗಡೆ ಮಾಡಿರುವ ಟ್ರಾಯ್
- 3.1 ಮಿಲಿಯನ್ ಬಳಕೆದಾರರೊಂದಿಗೆ 358 ಮಿಲಿಯನ್‌ಗೆ ಜಿಯೋ ಬಳಕೆದಾರರು
- 0.8 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿರುವ ಭಾರ್ತಿ ಏರ್‌ಟೆಲ್ ಕಂಪೆನಿ
- ವೊಡಾಫೋನ್ ಐಡಿಯಾದಲ್ಲಿ 1.4 ಮಿಲಿಯನ್ ಸಕ್ರಿಯ ಬಳಕೆದಾರರ ಇಳಿಕೆ
ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ, 3.1 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಪಡೆದುಕೊಂಡಿದ್ದು, ಇದರಿಂದ ಅಕ್ಟೋಬರ್ ತಿಂಗಳಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆ 358 ಮಿಲಿಯನ್ ತಲುಪಿದೆ. ಇದಕ್ಕೆ ವಿರುದ್ಧವಾಗಿ ಭಾರ್ತಿ ಏರ್‌ಟೆಲ್ 0.8 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿದ್ದು, ಅದರ ಸಕ್ರಿಯ ಬಳಕೆದಾರರ ಮೂಲ 346 ಮಿಲಿಯನ್‌ಗೆ ತಗ್ಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ಇತ್ತೀಚಿನ ಚಂದಾದಾರರ ವಿಶ್ಲೇಷಣೆ ಬಹಿರಂಗಪಡಿಸಿದೆ.
ಅಲ್ಲದೆ, ಜಿಯೋ ತನ್ನ ಸಕ್ರಿಯ ಬಳಕೆದಾರರ ಮಾರುಕಟ್ಟೆ ಪಾಲಿನಲ್ಲಿ ಏರ್‌ಟೆಲ್‌ಗಿಂತ (ಶೇ 33.7) ಮುಂದಿದ್ದು, ಶೇ 36ಕ್ಕೆ ತಲುಪಿದೆ. ನಷ್ಟ ಎದುರಿಸುತ್ತಿರುವ ವೊಡಾಫೋನ್ ಐಡಿಯಾ (VI), ತನ್ನ ಸಕ್ರಿಯ ಮೊಬೈಲ್ ಬಳಕೆದಾರರನ್ನು ಕಳೆದುಕೊಳ್ಳುವುದು ಮುಂದುವರಿದಿದೆ. ಅದು ಅಕ್ಟೋಬರ್‌ನಲ್ಲಿ 1.4 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದ್ದು, ಸಕ್ರಿಯ ಬಳಕೆದಾರರು 234 ಮಿಲಿಯನ್‌ಗೆ ಹಾಗೂ ಸಕ್ರಿಯ ಬಳಕೆದಾರರ ಪಾಲು ಶೇ 23.5ಕ್ಕೆ ಕುಸಿದಿದೆ.
ಏರ್‌ಟೆಲ್ ಮತ್ತು ವಿಐ ಎರಡೂ ತಮ್ಮ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿವೆ. ಜುಲೈ ತಿಂಗಳಲ್ಲಿ ಅವು ಪ್ರೀಪೇಯ್ಡ್ ಟಾರಿಫ್ ಮೂಲ ದರವನ್ನು ಏರಿಕೆ ಮಾಡಿದ ಬಳಿಕ ಅದರ ಪರಿಣಾಮವಾಗಿ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಸಕ್ರಿಯ ಅಥವಾ ವಿಸಿಟರ್ ಲೊಕೇಷನ್ ರಿಜಿಸ್ಟರ್ (ವಿಎಲ್‌ಆರ್) ಡೇಟಾವನ್ನು ಪ್ರತಿ ತಿಂಗಳೂ TRAI ಬಿಡುಗಡೆ ಮಾಡುತ್ತದೆ. ಇದು ಮೊಬೈಲ್ ನೆಟ್‌ವರ್ಕ್ ಒಂದನ್ನು ಗ್ರಾಹಕರು ಸಕ್ರಿಯವಾಗಿ ಬಳಸುವ ವಾಸ್ತವ ಸಂಖ್ಯೆಯನ್ನು ತೋರಿಸುತ್ತದೆ.
‘ಭಾರ್ತಿ ಮತ್ತು ವಿಐನ ಸಕ್ರಿಯ ಚಂದಾದಾರರ ಸಂಖ್ಯೆ ಇಳಿಕೆಯಾದಂತೆ ಜಿಯೋ, ಅಕ್ಟೋಬರ್‌ನಲ್ಲಿ 3.1 ಮಿಲಿಯನ್ (ಸೆಪ್ಟೆಂಬರ್ 4.7 ಮತ್ತು ಆಗಸ್ಟ್ 4.1 ಮಿಲಿಯನ್) ಕುಸಿತವಾದರೂ, ಶೇ 36ರ ಸಕ್ರಿಯ ಚಂದಾದಾರಿಕೆ ಷೇರಿನೊಂದಿಗೆ ಮುಂಚೂಣಿಯಲ್ಲಿ ಮುಂದುವರಿದಿದೆ’ ಎಂದು ದೂರಸಂಪರ್ಕ ಪ್ರಾಧಿಕಾರ ಸಂಗ್ರಹಿಸಿದ ಬಳಕೆದಾರರ ಡೇಟಾವನ್ನು ಮೋತಿಲಾಲ್ ಓಸ್ವಾಲ್ ವಿಶ್ಲೇಷಿಸಿದ್ದಾರೆ.
ಭಾರ್ತಿ ಏರ್‌ಟೆಲ್ (Bharti Airtel) ತನ್ನ ಮೂಲ ಪ್ರೀಪೇಯ್ಡ್ ಪ್ಯಾಕ್ ದರವನ್ನು ಏರಿಕೆ ಮಾಡಿದ ಬಳಿಕ ಕಳೆದ ಮೂರು ತಿಂಗಳಿನಿಂದ ಅದರ ಸಕ್ರಿಯ ಬಳಕೆದಾರರ ದುರ್ಬಲವಾಗಿ ಉಳಿದಿದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ಹೇಳಿದೆ.
ಭಾರ್ತಿಯ ಒಟ್ಟಾರೆ ಚಂದಾದಾರರು 0.5 ಮಿಲಿಯನ್ ಕಡಿಮೆಯಾಗಿದ್ದರೆ, ಸಕ್ರಿಯ ಬಳಕೆದಾರರ ನೆಲೆ 0.8 ಮಿಲಿಯನ್ ಕುಸಿತವಾಗಿದೆ. ಮೊಬೈಲ್ ಬ್ರಾಡ್‌ಬ್ಯಾಂಡ್ (MBB) ಬಳಕೆದಾರರಲ್ಲಿ ಅದು 1.3 ಮಿಲಿಯನ್ ಬಳಕೆದಾರರನ್ನು ಸೇರಿಸಿಕೊಳ್ಳುವುದರೊಂದಿಗೆ ಸುಧಾರಣೆಯಾಗಿದೆ.
ಜಿಯೋ ಅಕ್ಟೋಬರ್‌ನಲ್ಲಿ 1.8 ಮಿಲಿಯನ್ 4ಜಿ ಬಳಕೆದಾರರನ್ನು ಪಡೆದುಕೊಂಡಿದೆ. ವೊಡಾಫೋನ್ ಐಡಿಯಾ (Vodafone Idea) ಬಳಕೆದಾರರ ಮೂಲ 122 ಮಿಲಿಯನ್‌ನಲ್ಲೇ ಉಳಿದುಕೊಂಡಿದೆ. ಒಟ್ಟಾರೆಯಾಗಿ ಜಿಯೋ ಅಕ್ಟೋಬರ್ ತಿಂಗಳಲ್ಲಿ 1.76 ಮೊಬೈಲ್ ಬಳಕೆದಾರರನ್ನು ಪಡೆದುಕೊಂಡಿದೆ. ಅದರ ಒಟ್ಟು ವೈರ್‌ಲೆಸ್ ಬಳಕೆದಾರರ ಬೇಸ್ 426.59 ಮಿಲಿಯನ್‌ಗೆ ತಲುಪಿದೆ. ಏರ್‌ಟೆಲ್ 0.5 ಮಿಲಿಯನ್ ಕುಸಿತದೊಂದಿಗೆ 353.97 ಮಿಲಿಯನ್‌ಗೆ ಹಾಗೂ ವಿಐ 1 ಮಿಲಿಯನ್ ಇಳಿಕೆಯೊಂದಿಗೆ 269.02 ಮಿಲಿಯನ್‌ಗೆ ಕುಸಿದಿದೆ.