Karnataka news paper

ಕೋಲ್ಕತ್ತಾ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಅಬ್ಬರ, ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಗೆದ್ದ ಬಿಜೆಪಿ!


ಹೈಲೈಟ್ಸ್‌:

  • ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಕೋಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಗೆಲುವು
  • ಕೋಲ್ಕೊತ್ತಾ ಪಾಲಿಕೆಯಲ್ಲಿ ಸತತ 3ನೇ ಬಾರಿಗೆ ಅಧಿಕಾರಕ್ಕೇರಿದ ಟಿಎಂಸಿ
  • ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಿದಿ ಬಿಜೆಪಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕೋಲ್ಕತ್ತಾ ಮಹಾನಗರ ಪಾಲಿಕೆ (ಕೆಎಂಸಿ) ಚುನಾವಣೆಯಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದೆ. ಈ ಮೂಲಕ ವಿಧಾನಸಭೆ ಚುನಾವಣೆ ಬಳಿಕ ಆರಂಭವಾಗಿರುವ ಟಿಎಂಸಿಯ ಗೆಲುವಿನ ಓಟ ಇಲ್ಲೂ ಮುಂದುವರಿದಿದೆ.

ಕೋಲ್ಕೊತ್ತಾ ಪಾಲಿಕೆಯಲ್ಲಿ ಸತತ ಮೂರನೇ ಬಾರಿಗೆ ಟಿಎಂಸಿ ಅಧಿಕಾರಕ್ಕೇರಿದ್ದು, 144ರಲ್ಲಿ 134 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಭಾನುವಾರ ಕೆಎಂಸಿ ಚುನಾವಣೆ ನಡೆದಿತ್ತು. ಸೋಮವಾರ ನಡೆದ ಮತ ಎಣಿಕೆಯಲ್ಲಿ ಟಿಎಂಸಿ ಭಾರಿ ಗೆಲುವು ದಾಖಲಿಸಿದೆ. ಬಿಜೆಪಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಗೆದ್ದ ಸಾಧನೆಗೆ ತೃಪ್ತಿಪಟ್ಟುಕೊಂಡಿದೆ. ಇದೇ ವೇಳೆ ಪಕ್ಷೇತರರು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ವಿರೋಧಿ ಪಕ್ಷಗಳು ಒಂದಂಕಿ ಸೀಟುಗಳಿಗೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಇದು ರಾಷ್ಟ್ರ ರಾಜಕಾರಣಕ್ಕೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದಾರೆ. “ಇತರ ರಾಷ್ಟ್ರೀಯ ಪಕ್ಷಗಳೂ ಈ ಚುನಾವಣೆಯಲ್ಲಿ ಸ್ಪರ್ಧಿಸಿವೆ ಮತ್ತು ಅವೆಲ್ಲವೂ ಸೋತಿವೆ. ಇದು ಜನರಿಂದ, ಜನರಿಗಾಗಿ, ಜನರ ಜನಾದೇಶ,” ಎಂದು ಅವರು ಹೇಳಿದ್ದಾರೆ.

ಗೆಲುವನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ: ಕೋವಿಡ್ ಹೋರಾಟಕ್ಕೆ ಆದ್ಯತೆ ಎಂದ ಮಮತಾ!
“ನಾನು ಮಣ್ಣಿನ ಮಗಳಾಗಿರುವುದರಿಂದ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ನಾವು ನೆಲದ ಮೇಲೆ ಕೆಲಸ ಮಾಡುತ್ತೇವೆ, ಆಕಾಶದಲ್ಲಿ ಅಲ್ಲ. ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ,” ಎಂದು ಬ್ಯಾನರ್ಜಿ ಹೇಳಿದ್ದಾರೆ. ಅವರ ಇತ್ತೀಚಿನ ರಾಜಕೀಯ ನಡೆಗಳು, ವಿರೋಧ ಪಕ್ಷಗಳೊಂದಿಗಿನ ಸಭೆಗಳ ಹಿನ್ನೆಲೆಯಲ್ಲಿ, ಅವರು 2024ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಖಾಡಕ್ಕಿಳಿಯುವ ಸೂಚನೆಗಳು ಕಾಣಿಸಿಕೊಂಡಿವೆ. ಅದರ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಸೀಟು ಹೆಚ್ಚಿಸಿಕೊಂಡ ಟಿಎಂಸಿ, ಉಳಿದವರೆಲ್ಲರಿಗೂ ನಷ್ಟ!

ಬಿಜೆಪಿಯ ತೀವ್ರ ಸ್ಪರ್ಧೆಯ ನಡುವೆಯೂ ಟಿಎಂಸಿ ಸೀಟು ಹೆಚ್ಚಿಸಿಕೊಂಡಿರುವುದು ವಿಶೇಷ. 2015ರಲ್ಲಿ 114 ಕ್ಷೇತ್ರಗಳಲ್ಲಿ ಗೆದ್ದಿದ್ದ ಟಿಎಂಸಿ ಈ ಬಾರಿ ಸ್ಥಾನ ಗಳಿಕೆಯನ್ನು 134ಕ್ಕೆ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ 7 ಕ್ಷೇತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 3ಕ್ಕೆ ಇಳಿಕೆ ಕಂಡಿದೆ. 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎಡಪಕ್ಷಗಳು 2 ಸ್ಥಾನಗಳಿಗೆ ಕುಸಿದಿವೆ. ಕಾಂಗ್ರೆಸ್‌ನದ್ದೂ ಇದೇ ಕಥೆ, 5 ರಿಂದ ಅದು 2ಕ್ಕೆ ಇಳಿದಿದೆ.
ಮೋದಿ ಮಣಿಸಲು ಕಾಂಗ್ರೆಸ್‌ ಹೊರತಾದ ಮೈತ್ರಿಯಿಂದ ಸಾಧ್ಯವೇ..? ಸಕ್ಸಸ್‌ ಆಗ್ತಾರಾ ದೀದಿ..?

ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಪಾಲಿಕೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ. ಮಮತಾ ಬ್ಯಾನರ್ಜಿ ಸೊಸೆ ಕಜಾರಿ ಬ್ಯಾನರ್ಜಿ ವಾರ್ಡ್‌ ನಂ. 73 ಭೊವನಿಪೊರ್‌ನಿಂದ ಗೆಲುವು ಸಾಧಿಸಿರುವುದು ಈ ಚುನಾವಣೆಯ ವಿಶೇಷ ಅಂಶಗಳಲ್ಲಿ ಒಂದು.

ಪಾಲಿಕೆ ಚುನಾವಣೆಯಲ್ಲಿ ಹಿಂಸಾಚಾರ ನಡೆದಿದೆ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಭಾನುವಾರ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಪಕ್ಷ, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಚುನಾವಣೆಯನ್ನು ಒಂದು ಪ್ರಹಸನ ಎಂದು ಬಣ್ಣಿಸಿದೆ. ಅಷ್ಟೇ ಅಲ್ಲ ಹಿಂಸಾಚಾರವನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದೆ.

ಇದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್, ಬಿಜೆಪಿಯು ವಾರ್ಡ್ ಒಂದರಲ್ಲಿ ಬಿರಿಯಾನಿ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಇವೆಲ್ಲದರ ನಡುವೆ ಭಾನುವಾರ ನಡೆದ ಮತದಾನ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಎರಡು ಮತದಾನ ಕೇಂದ್ರಗಳ ಮೇಲೆ ಬಾಂಬ್‌ಗಳನ್ನೂ ಎಸೆಯಲಾಗಿತ್ತು.



Read more