Karnataka news paper

ಬಿಜೆಪಿಯವರಿಗೆ ‘ಹಲಾಲ್‌’ ಶಬ್ದದ ಅರ್ಥ ಗೊತ್ತಾ? ಬಜೆಟ್‌ ಟೀಕೆಗೆ ಸಚಿವ ಕೆಎಚ್‌ ಮುನಿಯಪ್ಪ ತಿರುಗೇಟು


ಕುಂದಾಣ (ಬೆಂಗಳೂರು ಗ್ರಾಮಾಂತರ): ರಾಜ್ಯದ ಬಜೆಟ್‌ ಸಮತೋಲನದಿಂದ ಕೂಡಿದೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್‌ ಮುನಿಯಪ್ಪ ಹೇಳಿದರು.ದೇವನಹಳ್ಳಿ ತಾಲೂಕಿನ ಮುದ್ದನಾಯಕನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಇರುವುದೇ ವಿರೋಧಿಸಲು ಎಂದು ಹೇಳುವ ಮೂಲಕ ಬಜೆಟ್‌ ಕುರಿತು ಟೀಕೆಗೆ ತಿರುಗೇಟು ನೀಡಿದರು.

ಅರ್ಥ ತಿಳಿದುಕೊಳ್ಳಲಿ

ಬಿಜೆಪಿಯ ಕೆಲ ಮುಖಂಡರು ಬಜೆಟ್‌ ಕುರಿತು ಹಲಾಲ್‌ ಬಜೆಟ್‌ ಎಂದು ಹೇಳಿದ್ದಾರೆ. ಹಲಾಲ್‌ ಎಂದರೆ ನ್ಯಾಯಬದ್ಧ, ಸಮತೋಲನವೆಂದು ಅರ್ಥ. ಹಾಗಾಗಿ ಮೊದಲು ಹಲಾಲ್‌ ಶಬ್ದದ ಅರ್ಥ ತಿಳಿದುಕೊಳ್ಳಬೇಕು ಎಂದರು.

ಗಾಂಧೀಜಿ, ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡಬೇಕೆಂಬ ಉದ್ದೇಶದಿಂದ ರಾಷ್ಟ್ರ ಮತ್ತು ರಾಜ್ಯದ ಎಲ್ಲಾ ವರ್ಗದ ಜನರಿಗೂ ಸಹ ಸಮಾನವಾದ ಅವಕಾಶವನ್ನು ನೀಡಲಾಗಿದೆ. ಇದೊಂದು ಒಳ್ಳೆಯ ಬಜೆಟ್‌ ಆಗಿದೆ. ರಾಜ್ಯದ ಯಾವುದೇ ಜಿಲ್ಲೆಯನ್ನು ಕಡೆಗಣಿಸದೆ, ಎಲ್ಲಾ ಜಿಲ್ಲೆಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಪೂರಕ ಬಜೆಟ್‌

ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ ಮಂಡಿಸಲಾಗಿದೆ. ಉದಾಹರಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರಕ್ಕೆ ನಮ್ಮ ಮೆಟ್ರೋ ರೈಲು ವಿಸ್ತರಣೆ, ದೇವನಹಳ್ಳಿ – ವಿಜಯಪುರಕ್ಕೆ ಕಾವೇರಿ ನೀರು, ಟೆಕ್‌ಪಾರ್ಕ್, ದೊಡ್ಡಬಳ್ಳಾಪುರ ತಾಲೂಕಿಗೆ ಜಿಲ್ಲಾ ಕ್ರೀಡಾಂಗಣ ಈ ಹಿಂದೆ ಆಗಿತ್ತೇ? ಎಂದು ಪ್ರಶ್ನಿಸಿದ ಕೆಎಚ್‌ ಮುನಿಯಪ್ಪ, ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬದಲಾವಣೆ ಆಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಯಪ್ಪ ಅಧ್ಯಕ್ಷ ವಿ. ಶಾಂತ ಕುಮಾರ್‌, ನಿರ್ದೇಶಕ ಸಿ. ಪ್ರಸನ್ನ ಕುಮಾರ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಗನ್ನಾಥ್‌, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ನಾಗೇಗೌಡ, ತಹಸೀಲ್ದಾರ್‌ ಬಾಲಕೃಷ್ಣ, ತಾಪಂ ಇಒ ಶ್ರೀನಾಥ್‌ ಗೌಡ, ಮುದ್ದನಾಯಕನಹಳ್ಳಿ ಗ್ರಾಮದ ಮುನಿರಾಜು ಟಿ.ಎಂ., ಪ್ರವೀಣ್‌, ಗೋಪಾಲ, ಮುನಿರಾಜು, ಶಾಂತ ಕುಮಾರ್‌, ಆನಂದ್‌, ಉದಯ್‌, ಇನ್ನಿತರರು ಇದ್ದರು.

ಇನ್ನು ಹಲಾಲ್‌ ಬಜೆಟ್ ಆರೋಪಕ್ಕೆ ಶುಕ್ರವಾರವೇ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ 4.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ 4,500 ಕೋಟಿ ರೂ. ಕೊಟ್ಟರೆ ಹಲಾಲ್ ಬಜೆಟ್ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದರು.



Read more

[wpas_products keywords=”deal of the day sale today offer all”]