Karnataka news paper

ಗಡಿ ಶಾಂತಿ ಒಪ್ಪಂದಕ್ಕೆ ಚೀನಾ ಅಗೌರವ: ಕ್ವಾಡ್‌ ಸಭೆಯಲ್ಲಿ ಜೈಶಂಕರ್‌ ಪ್ರಸ್ತಾಪ


ಮೆಲ್ಬರ್ನ್‌: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಪ್ರಸಕ್ತ ಮುಂದುವರಿದಿರುವ ಗಡಿ ಬಿಕ್ಕಟ್ಟು ಸಮಸ್ಯೆಗೆ ಚೀನಾ ಸೇನೆಯ ಶಾಂತಿ ಒಪ್ಪಂದ ಉಲ್ಲಂಘನೆಯೇ ಕಾರಣ. 2020ರಲ್ಲಿನ ಲಿಖಿತ ಒಪ್ಪಂದಕ್ಕೆ ಚೀನಾ ಸೇನೆ ತೋರುತ್ತಿರುವ ಅಗೌರವದಿಂದ ಗಡಿಯಲ್ಲಿ ಉದ್ವಿಗ್ನತೆ ಹಾಗೆಯೇ ಉಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಕ್ವಾಡ್‌ ಒಕ್ಕೂಟದ ಶೃಂಗಸಭೆಗಾಗಿ ಆಸ್ಪ್ರೇಲಿಯಾಗೆ ಭೇಟಿ ನೀಡಿರುವ ಸಚಿವ ಜೈಶಂಕರ್‌ ಅವರು ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಆಸ್ಪ್ರೇಲಿಯಾದ ವಿದೇಶಾಂಗ ಸಚಿವೆ ಮರೈಸ್‌ ಪೇನ್‌ ಜೊತೆಗಿದ್ದರು.

” ಒಂದು ದೊಡ್ಡ ರಾಷ್ಟ್ರದ ಸೇನೆ ಮತ್ತು ಸರಕಾರವು ಲಿಖಿತ ಒಪ್ಪಂದಕ್ಕೆ ಕಿಮ್ಮತ್ತು ಕೊಡದೆಯೇ ತನ್ನಷ್ಟಕ್ಕೆ ತಾನು ಏಕಪಕ್ಷೀಯ ಕ್ರಮಗಳನ್ನು ಮುಂದುವರಿಸಿದರೆ ಎಲ್‌ಎಸಿಯಲ್ಲಿ ಪ್ರಸ್ತುತ ಇರುವಂಥ ಬಿಕ್ಕಟ್ಟು ಮುಂದುವರಿಯುತ್ತಲೇ ಇರಲಿದೆ. ಚೀನಾದ ಈ ನಡೆ ಆಕ್ಷೇಪಾರ್ಹ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೂಡ ಚೀನಾದ ಈ ಕುತಂತ್ರವು ಆತಂಕಕಾರಿ,” ಎಂದು ಜೈಶಂಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಗ್ರರಿಗೆ ಆತಿಥ್ಯ: ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಹರಿಹಾಯ್ದ ಭಾರತ

ಕ್ವಾಡ್‌ನಲ್ಲಿ ಚರ್ಚೆ, ಸಕಾರಾತ್ಮಕ ಕೊಡುಗೆ:
ಕ್ವಾಡ್‌ ಸಭೆಯಲ್ಲಿ 12ನೇ ವಿದೇಶಾಂಗ ಸಚಿವರ ಕಾರ್ಯತಂತ್ರ ಸಭೆ ಹಾಗೂ ವಿದೇಶಿ ಸಚಿವರ ಸೈಬರ್‌ ಕಾರ್ಯತಂತ್ರದ ಮೊದಲ ಸಮ್ಮೇಳನ ಕೂಡ ನಡೆಸಿದ್ದೇವೆ. ಆಸ್ಪ್ರೇಲಿಯಾ ವಿದೇಶಾಂಗ ಸಚಿವೆ ಜತೆಗಿನ ದ್ವಿಪಕ್ಷೀಯ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹ, ಇಂಡೋ-ಪೆಸಿಫಿಕ್‌ ಪ್ರಾಂತ್ಯದಲ್ಲಿ ಚೀನಾ ಅತಿಕ್ರಮಣಕ್ಕೆ ಅಂಕುಶದ ಬಗ್ಗೆ ಕೂಡ ಚರ್ಚೆ ನಡೆಸಿದ್ದೇವೆ.

ಕ್ವಾಡ್‌ ಒಕ್ಕೂಟದ ಬಗ್ಗೆ ಕೆಲವು ರಾಷ್ಟ್ರಗಳು ಅಪಪ್ರಚಾರದಲ್ಲಿ ನಿರತವಾಗಿವೆ. ಒಕ್ಕೂಟವು ಅಂತಾರಾಷ್ಟ್ರೀಯ ಮಟ್ಟದ ಶಾಂತಿ ಮತ್ತು ಪ್ರಾದೇಶಿಕ ಮಟ್ಟದ ಸ್ಥಿರತೆ ಒದಗಿಸುವ ನಿಟ್ಟಿನಲ್ಲಿ ಭಾರತ, ಆಸ್ಪ್ರೇಲಿಯಾ, ಅಮೆರಿಕ, ಜಪಾನ್‌ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿದೆ. ಇದರಿಂದ ಯಾವಾಗಲೂ ಸಕಾರಾತ್ಮಕ ಕೊಡುಗೆ ಮಾತ್ರವೇ ವಿಶ್ವಕ್ಕೆ ಸಿಗಲಿದೆ ಎಂದು ಜೈಶಂಕರ್‌ ಅವರು ಪರೋಕ್ಷವಾಗಿ ಚೀನಾಗೆ ಕುಟುಕಿದ್ದಾರೆ.

ಮೋದಿ ಸರ್ಕಾರಕ್ಕೆ ಕಳಂಕ ತರಲು ರಾಜಕೀಯ ಪ್ರಯತ್ನ: ಅಮೆರಿಕದಲ್ಲಿ ಜೈಶಂಕರ್ ಆರೋಪ

ಚೀನಾದಿಂದ ಭಾರತಕ್ಕೆ ಸವಾಲು: ಶ್ವೇತಭವನ ಆತಂಕ
ಎಲ್‌ಎಸಿಯಲ್ಲಿ ಚೀನಾದ ಅತಿಕ್ರಮಣ ನೀತಿ ಹಾಗೂ ಸಂಧಾನ ಒಪ್ಪಂದಗಳ ಉಲ್ಲಂಘನೆ ವಿರುದ್ಧ ಅಮೆರಿಕ ಕೂಡ ಕಿಡಿಕಾರಿದೆ. ಅಮೆರಿಕದ ಇಂಡೋ-ಪೆಸಿಫಿಕ್‌ ಕಾರ್ಯತಂತ್ರದ ವರದಿಯನ್ನು ಶ್ವೇತಭವನವು ಬಿಡುಗಡೆ ಮಾಡಿದ್ದು, ಭಾರತಕ್ಕೆ ಗಡಿಯಲ್ಲಿ ಎದುರಾಗಿರುವ ಪ್ರಮುಖ ಸವಾಲುಗಳಿಗೆ ಚೀನಾವೇ ಕಾರಣ ಎಂದು ಆರೋಪಿಸಿದೆ.

ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಅಮೆರಿಕ ಸರಕಾರ ಬಯಸುತ್ತದೆ. ಭಾರತವು ಕೂಡ ಸಮಾನ ಮನಸ್ಕ ಮಿತ್ರರಾಷ್ಟ್ರವಾಗಿದೆ. ಕ್ವಾಡ್‌ನ ಚಾಲನಾ ಶಕ್ತಿ ಕೂಡ ಹೌದು. ಆರೋಗ್ಯ , ಬಾಹ್ಯಾಕಾಶ, ಸೈಬರ್‌ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಜತೆಯಾಗಿ ಕೆಲಸ ಮಾಡಲು ಅಮೆರಿಕ ಮುಂದಾಗಿದೆ. ಆದರೆ, ನಮ್ಮದೇ ರೀತಿಯಲ್ಲಿ ಪ್ರಜಾಪ್ರಭುತ್ವದ ಆಡಳಿತ ಹೊಂದಿರುವ ಭಾರತಕ್ಕೆ ನೆರೆಯ ಚೀನಾದಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಲಾಗಿದೆ.

ವಿರಾಟ್‌ ಕೊಹ್ಲಿ ಸಹಿ ಇರುವ ಬ್ಯಾಟ್‌ ಉಡುಗೊರೆ
1 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇರುವ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನಕ್ಕೆ ಸಚಿವ ಜೈಶಂಕರ್‌, ಆಸ್ಪ್ರೇಲಿಯಾ ಸಚಿವೆ ಪೇನ್‌, ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಮತ್ತು ಜಪಾನ್‌ ವಿದೇಶಾಂಗ ಸಚಿವ ಹಯಾಶಿ ಯಶಿಮಾಸ ಅವರು ಒಟ್ಟಾಗಿ ಸಭೆ ಬಳಿಕ ಭೇಟಿ ನೀಡಿದರು.

ಈ ವೇಳೆ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಸಹಿ ಹಾಕಿರುವ ಬ್ಯಾಟ್‌ವೊಂದನ್ನು ಸಚಿವೆ ಪೇನ್‌ ಅವರಿಗೆ ಜೈಶಂಕರ್‌ ಅವರು ಉಡುಗೊರೆಯಾಗಿ ನೀಡಿದರು.



Read more

[wpas_products keywords=”deal of the day sale today offer all”]