The New Indian Express
ಗುವಾಹಟಿ: ಅಸ್ಸಾಂನ ಚಹಾ ಮಾರಾಟಗಾರ ರಾಹುಲ್ ಕುಮಾರ್ ದಾಸ್ ಅವರು ಕಷ್ಟಪಟ್ಟು ಓದಿ ತಮ್ಮ ಮೊದಲ ಪ್ರಯತ್ನದಲ್ಲಿ ನೀಟ್ ಪಾಸ್ ಮಾಡಿ ದೆಹಲಿಯ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಮಾಡಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದಾಸ್ ಅವರ ಶಿಕ್ಷಣದ ವೆಚ್ಚವನ್ನು ತಮ್ಮ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು. ಅಲ್ಲದೆ ಅವರ ಸಂಪುಟದ ಸಚಿವರೊಬ್ಬರು ದಾಸ್ ಮನೆಗೆ ಭೇಟಿ ನೀಡಿ ಸನ್ಮಾನಿಸಿದ್ದರು.
ಆದರೆ, ಅಸ್ಸಾಂನ ಬಜಾಲಿ ಜಿಲ್ಲೆಯ 24 ವರ್ಷದ ಈ ಯುವಕ ನಕಲಿ ಪ್ರವೇಶ ಪತ್ರ ಸಿದ್ಧಪಡಿಸಿದ್ದಾನೆ ಎಂಬುದು ಈಗ ಬಹಿರಂಗವಾಗಿದೆ. ಈ ಸಂಬಂಧ ಯಾವುದೇ ದೂರು ಬಂದಿಲ್ಲ ಎಂದಿರುವ ಜಿಲ್ಲಾ ಪೊಲೀಸರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಇದನ್ನು ಓದಿ: ಅಸ್ಸಾಂ: ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡಿದ ಚಹಾ ಮಾರಾಟಗಾರ, ದೆಹಲಿಯ ಏಮ್ಸ್ ನಲ್ಲಿ ಪ್ರವೇಶ
ನೀಟ್ ಪರೀಕ್ಷೆಗೆ ಹಾಜರಾಗಿದ್ದ ರಾಜ್ಯದ ವಿದ್ಯಾರ್ಥಿಗಳ ಗುಂಪೊಂದು ಮೊದಲು ರಾಹುಲ್ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಹಲವು ಮೂಲಗಳಿಂದ ಪರಿಶೀಲನೆ ನಡೆಸಿದಾಗ ದಾಸ್ ಹರಿಯಾಣದ ವಿದ್ಯಾರ್ಥಿಯೊಬ್ಬನ ದಾಖಲೆಗಳನ್ನು ನಕಲು ಮಾಡಿರುವುದು ಬೆಳಕಿಗೆ ಬಂದಿದೆ.
ರಾಹುಲ್ ಕುಮಾರ್ ದಾಸ್ ತನ್ನ ನೀಟ್ ಪ್ರವೇಶ ಕಾರ್ಡ್ ನಲ್ಲಿ ರೋಲ್ ನಂಬರ್ ಅನ್ನು 2303001114 ಎಂದು ತೋರಿಸಿದ್ದಾರೆ. ಆದರೆ ಪರಿಶೀಲನೆಯ ಸಮಯದಲ್ಲಿ ಇದು AIR 11656 ರ್ಯಾಂಕ್ ಪಡೆದ ಹರಿಯಾಣದ ಅಭ್ಯರ್ಥಿಯೆಂದು ತಿಳಿದು ಬಂದಿದೆ.
ಕೆಲವು ವರ್ಷಗಳ ಹಿಂದೆ ರಾಹುಲ್ ತನ್ನ ತಂದೆಯನ್ನು ಕಳೆದುಕೊಂಡಿದ್ದು, ಜೀವನೋಪಾಯಕ್ಕಾಗಿ ಅವರ ತಾಯಿ ಚಹಾ ಅಂಗಡಿ ನಡೆಸುತ್ತಿದ್ದರು. ರಾಹುಲ್ ಸಹ ತಾಯಿ ಜತೆ ಚಹಾ ಮಾರಾಟ ಮಾಡುತ್ತಿದ್ದರು.
ರಾಹುಲ್ ಕುಮಾರ್ ದಾಸ್ ನೀಟ್ ಫಲಿತಾಂಶ ನಕಲಿ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ ಜಮೀನು ಮಾಲೀಕರು ಸ್ಥಳ ಖಾಲಿ ಮಾಡುವಂತೆ ಅವರ ತಾಯಿಗೆ ಸೂಚಿಸಿದ್ದಾರೆ. ಹೀಗಾಗಿ ಅಂಗಡಿ ಖಾಲಿ ಮಾಡಿರುವ ರಾಹುಲ್, ಅವರ ತಾಯಿ ಮತ್ತು ಅವರ ಕಿರಿಯ ಸಹೋದರ ಈಗ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
Read more
[wpas_products keywords=”deal of the day”]