Karnataka news paper

ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ನಿಧನ


ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಗ್ರಾಮದ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ (58) ಅವರು ಅನಾರೋಗ್ಯದಿಂದಾಗಿ ನಗರದ ಅಪೋಲೊ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅವರು ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನತೀರ್ಥ ಮಹಾಸ್ವಾಮಿಯವರಿಂದ 10 ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಇದಕ್ಕೂ ಮುನ್ನ ಹೃಷಿಕೇಷದ ಆರ್ಷ ವಿದ್ಯಾಗುರುಕುಲದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರ ಬಳಿ 12 ವರ್ಷ ವೇದಾಧ್ಯಯನ ನಡೆಸಿದ್ದರು. ಬಳಿಕ ಹಿಮಾಲಯದಲ್ಲಿ ಧಾರ್ಮಿಕ ವ್ರತಾಚರಣೆಯಲ್ಲಿ ತೊಡಗಿದ್ದರು. ವೇದವೇದಾಂತಾಚಾರ್ಯ ಎಂಬ ಗೌರವಕ್ಕೆ ‍ಪಾತ್ರರಾಗಿದ್ದ ಇವರು ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ದೇಶದ ವಿವಿಧ ಕಡೆ ವಿಶ್ವಕರ್ಮ ವಿಶ್ವವಿದ್ಯಾಲಯಗಳ ಸ್ಥಾಪನೆಗೂ ಮಾರ್ಗದರ್ಶನ ಮಾಡಿದ್ದರು.

ಶ್ರೀಶ್ರೀ ರವಿಶಂಕರ ಗುರೂಜಿ ಅವರ ಆರ್ಟ್ ಆಫ್‌ ಲಿವಿಂಗ್‌ ಆಶ್ರಮದಲ್ಲಿ 2016ರಲ್ಲಿ ಅಖಿಲ ಭಾರತ ಸಾಧು ಸಂತರ ಸಮಾವೇಶವು ಇವರ ನೇತೃತ್ವದಲ್ಲೇ ನಡೆದಿತ್ತು. ಬಳಿಕ ಗುಜರಾತ್‌ ಡಾಕೋರ್‌ನಲ್ಲಿ 2017ರಲ್ಲಿ ನಡೆದಿದ್ದ ಅಖಿಲ ಭಾರತ ಸಾಧು ಸಂತರ ಎರಡನೇ ಸಮಾವೇಶಕ್ಕೂ ನೇತೃತ್ವ ವಹಿಸಿದ್ದರು. ಅಲ್ಲಿ ಇವರಿಗೆ ‘ರಾಷ್ಟ್ರಸಂತ’ ಬಿರುದು ಪ್ರದಾನ ಮಾಡಲಾಗಿತ್ತು.

ಋಗ್ವೇದದ ವಿಶ್ವಕರ್ಮ ಸೂಕ್ತಗಳ ಕುರಿತ ‘ದಿ ಯುನಿವರ್ಸಲ್‌ ಟ್ರುತ್‌‘ ಎಂಬ ಕೃತಿಯನ್ನು ಇಂಗ್ಲಿಷ್‌ನಲ್ಲಿ, ‘ಸನ್ಯಾಸ ಪರಂಪರೆ’ ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದರು. ಐದು ವೇದಗಳ ಸಮಗ್ರ ವಿವರಗಳನ್ನು ಒಳಗೊಂಡ ಸಾವಿರ ಪುಟಗಳ ‘ವೇದ ಭಗವಾನ್‌’ ಕೃತಿಯು ಪ್ರಕಟಣೆಗೆ ಸಜ್ಜಾಗಿತ್ತು.  

ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಆಶ್ರಮದಲ್ಲಿ ಗುರುವಾರ (ಡಿ. 16) ಬೆಳಿಗ್ಗೆಯಿಂದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡರು ತಿಳಿಸಿದ್ದಾರೆ.



Read more from source