ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಅರ್ಜಿಯಲ್ಲಿ, ಕ್ರಿಪ್ಟೋ ವಹಿವಾಟಿನಿಂದ ದೊರೆಯುವ ಆದಾಯವನ್ನು ಉಲ್ಲೇಖಿಸಲು ಪ್ರತ್ಯೇಕ ಕಲಂ ಅನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ.
2022ರ ಏಪ್ರಿಲ್ 1ರಿಂದ ಕ್ರಿಪ್ಟೋ ವಹಿವಾಟಿನಿಂದ ಸಿಗುವ ಆದಾಯದ ಮೇಲೆ ಶೇ. 30 ತೆರಿಗೆ ಅನ್ವಯವಾಗಲಿದೆ. ಕುದುರೆ ಜೂಜು, ಬೆಟ್ಟಿಂಗ್ ಮೂಲಕ ದೊರೆಯುವ ಆದಾಯಕ್ಕೆ ಸಮನಾಗಿ ಕ್ರಿಪ್ಟೋ ಆದಾಯವನ್ನೂ ಪರಿಗಣಿಸಲಾಗುವುದು ಎಂದು ಸರಕಾರ ತಿಳಿಸಿದೆ. ಕ್ರಿಪ್ಟೋ ವಹಿವಾಟಿನಿಂದ ಗಳಿಸುವ 50 ಲಕ್ಷ ರೂ.ಗಿಂತ ಅಧಿಕ ಆದಾಯಕ್ಕೆ ತೆರಿಗೆ ಜತೆಗೆ ಶೇ. 15 ಸೆಸ್ ಮತ್ತು ಸರ್‌ಚಾರ್ಜ್ ಸಹ ಅನ್ವಯವಾಗಲಿದೆ.
ಸರಕಾರ ಕ್ರಿಪ್ಟೋ ಆಸ್ತಿಗಳನ್ನು ನಿಯಂತ್ರಿಸಲು ಕಾಯಿದೆ ರೂಪಿಸಲು ಚಿಂತನೆ ನಡೆಸುತ್ತಿದೆ. ಆದರೆ ಯಾವುದೇ ಕರಡನ್ನು ಇದುವರೆಗೆ ಪ್ರಕಟಿಸಿಲ್ಲ. ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ರೂಪಾಯಿ ಕರೆನ್ಸಿಯನ್ನು ಬಿಡುಗಡೆಗೊಳಿಸಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆರ್‌ಬಿಐನ ಡಿಜಿಟಲ್ ಕರೆನ್ಸಿಯು ಮತ್ತಷ್ಟು ಅಗ್ಗ ಮತ್ತು ದಕ್ಷ ನಿರ್ವಹಣೆ ವ್ಯವಸ್ಥೆಯನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
ವಹಿವಾಟು ಅಕ್ರಮವಲ್ಲ
ಕ್ರಿಪ್ಟೊ ಕರೆನ್ಸಿಯನ್ನು ಖರೀದಿಸುವುದು, ಮಾರುವುದು ಕಾನೂನುಬಾಹಿರವಲ್ಲ. ಆದರೆ, ಬಿಟ್‌ಕಾಯಿನ್, ‘ಎನ್‌ಎಫ್‌ಟಿ’ ಮುಂತಾದ ಖಾಸಗಿ ಕ್ರಿಪ್ಟೋ ಕರೆನ್ಸಿಗಳು ಅನಧಿಕೃತ. ಅವುಗಳ ಮೌಲ್ಯದ ಬಗ್ಗೆ ಹೂಡಿಕೆದಾರರಿಗೆ ಸರಕಾರ ಖಾತರಿ ನೀಡುವುದಿಲ್ಲ. ಆರ್‌ಬಿಐ ಡಿಜಿಟಲ್ ಕರೆನ್ಸಿ ಮಾತ್ರ ಭಾರತದಲ್ಲಿ ಅಧಿಕೃತ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದ್ದಾರೆ.
ಆರ್‌ಬಿಐ ಹೊರತರಲಿರುವ ಡಿಜಿಟಲ್ ರೂಪಾಯಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ-‘ಸಿಬಿಡಿಸಿ’) ಈಗಿರುವ ನಗದು ಕರೆನ್ಸಿಯ ಡಿಜಿಟಲ್ ರೂಪವಷ್ಟೇ. ಡಿಜಿಟಲ್ ಕರೆನ್ಸಿಯನ್ನು ನಗದಿನ ಜತೆ ವಿನಿಮಯ ಮಾಡಿಕೊಳ್ಳಬಹುದು. ‘ಸಿಬಿಡಿಸಿ’ಗೆ ಚಾಲನೆಯಿಂದ ಡಿಜಿಟಲ್ ಆರ್ಥಿಕತೆ ಬಲಗೊಳ್ಳಲಿದೆ. ವಹಿವಾಟಿನ ಭದ್ರತೆ ಹೆಚ್ಚಲಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Read more…
[wpas_products keywords=”deal of the day”]