Karnataka news paper

ಮನೆಯಲ್ಲಿ ಕುಳಿತು ರಾಜಕೀಯ ಮಾಡಲ್ಲ: ಆನಂದ್‌ ಸಿಂಗ್‌ ಭೇಟಿಗೆ ಡಿಕೆ ಶಿವಕುಮಾರ್ ಸ್ಪಷ್ಟನೆ


ಬೆಂಗಳೂರು: ಆನಂದ್ ಸಿಂಗ್ ಅವರ ಭೇಟಿ ಹಿಂದೆ ರಾಜಕೀಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸಚಿವ ಆನಂದ್ ಸಿಂಗ್ ಅವರ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಬಳ್ಳಾರಿ ಉಸ್ತುವಾರಿ ಸಚಿವನಾಗಿದ್ದಾಗ ತುಂಗಾರತಿ ಮಾಡಲಾಗಿತ್ತು. ಅದೇ ರೀತಿ ಮೇಕೆದಾಟು ಸಂಗಮದಲ್ಲಿ ಕಾವೇರಿ ಆರತಿ ಮಾಡಬೇಕು, ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯಿಂದ ಮಾಡಲು ಸಾಧ್ಯವೇ ಎಂದು ನಾನು ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಇದಕ್ಕಾಗಿ ಒಂದು ತಂಡ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದರು.

​ಮನೆಯಲ್ಲಿ ರಾಜಕಾರಣ ಮಾಡಲ್ಲ

ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇನೆ. ಅವರು ಭೇಟಿಯಾಗಿರುವುದಕ್ಕೆ ಬೇರೆ ಯಾವ ರೆಕ್ಕೆ-ಪುಕ್ಕವೂ ಬೇಡ. ಅವರು ಸಚಿವರಾಗಿದ್ದು, ರಾಜಕಾರಣ ಮಾಡಬೇಕಾದರೆ ನಮ್ಮ ಮನೆಗೆ ಬರುವ ಅಗತ್ಯವಿರಲಿಲ್ಲ ಎಂದರು. ರಾಜಕಾರಣ ಮಾಡುವುದಾದರೆ ಗೆಸ್ಟ್ ಹೌಸ್, ಹೊಟೇಲ್ ಗಳಲ್ಲಿ ಮಾಡುತ್ತೇವೆ. ಮನೆಯಲ್ಲಿ ರಾಜಕಾರಣ ಮಾಡುವುದಿಲ್ಲ. ಈ ಒಂದು ಸಾಮಾನ್ಯ ಪರಿಜ್ಞಾನ ಎಲ್ಲರಿಗೂ ಇರಬೇಕು. ಅವರು ಸಚಿವರಾಗಿದ್ದರೂ ಧೈರ್ಯವಾಗಿ ವಿರೋಧ ಪಕ್ಷದ ನಾಯಕರೊಬ್ಬರ ಮನೆಗೆ ಬರುತ್ತಾರೆ ಎಂದರೆ ಅದರಲ್ಲಿ ರಾಜಕಾರಣ ಹುಡುಕಲು ಬರುವುದಿಲ್ಲ. ನಾನು ಈ ಭಾಗದ ನಾಯಕನಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಏನೆಲ್ಲಾ ಅಗತ್ಯವಿದೆ ಎಂಬುದನ್ನು ಚರ್ಚೆ ಮಾಡಿ ತಿಳಿಯಲು ಬಂದಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್: ಜನರಿಗೆ ಯಾವ ರೀತಿ ಸಹಾಯ ಆಗಲಿದೆ

ಮಂಗಳವಾರ ಕೇಂದ್ರ ಸರಕಾರ ಬಜೆಟ್ ಮಂಡನೆ ಮಾಡಲಿದ್ದು, ಕೋವಿಡ್‌ನಿಂದ ನರಳಿರುವ ಜನರಿಗೆ ಸರಕಾರ ಯಾವ ರೀತಿ ಸಹಾಯ ಮಾಡಲಿದೆ ಎಂದು ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಜನ ಕೋವಿಡ್ ನಿಂದ ಸತ್ತಿದ್ದು, ಅದರಲ್ಲಿ ಕೆಲವರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ನೀಡಲು ಸರಕಾರ ಮುಂದಾಗಿದೆ. ಸರಕಾರ ಈ ಹಿಂದೆ 4 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ನ್ಯಾಯಾಲಯ ಕೂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕೋವಿಡ್ನಿಂದ ಸತ್ತವರಿಗೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದು, ಸತ್ತವರ ಕುಟುಂಬಕ್ಕೆ 4 ಲಕ್ಷ ನೀಡಬೇಕು ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

ಕಬ್ಬಿಣ, ಸಿಮೆಂಟ್‌ ವ್ಯಾಪಾರಿಗಳ ಲಾಬಿಗೆ ಮಣಿದ ಕೇಂದ್ರ

ಖಾಸಗಿ ಆಸ್ಪತ್ರೆ ಸೇರಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವವರಿಗೆ ಪರಿಹಾರ ಕೊಡಬೇಕು. ರೈತರಿಗೆ, ಕಾರ್ಮಿಕರಿಗೆ ಆಗಿರುವ ನಷ್ಟ ಭರಿಸಬೇಕು. ವೃತ್ತಿ ಕಳೆದುಕೊಂಡವರಿಗೆ ಸರ್ಕಾರ ಈ ಬಜೆಟ್ ನಲ್ಲಿ ಹಣ ಒದಗಿಸುವ ನಿರೀಕ್ಷೆ ನಮ್ಮದಾಗಿದೆ ಎಂದರು.ಸಿಮೆಂಟ್ ಹಾಗೂ ಕಬ್ಬಿಣದ ಬೆಲೆಗಳು ಏರಿಕೆಯಾಗಿದ್ದು, ಕೇಂದ್ರ ಸರಕಾರ ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳ ಲಾಬಿಗೆ ಮಣಿಯುತ್ತಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಕಬ್ಬಿಣದ ಬೆಲೆ 30, 35 ಸಾವಿರಕ್ಕೆ ಇಳಿಯಬೇಕು. ಸೀಮೆಂಟ್ ಬೆಲೆ ಕೂಡ ಕಡಿಮೆ ಮಾಡಬೇಕು ಎಂದು ಡಿಕೆ ಶಿವಕುಮಾರ್‌ ಆಗ್ರಹಿಸಿದರು.

ಎಸ್ಆರ್ ಪಾಟೀಲ್-ಇಬ್ರಾಹಿಂ ಅವರದ್ದು ಸೌಜನ್ಯದ ಭೇಟಿ

ಹುಬ್ಬಳ್ಳಿಯಲ್ಲಿ ಎಸ್.ಆರ್ ಪಾಟೀಲ್ ಹಾಗೂ ಸಿ.ಎಂ. ಇಬ್ರಾಹಿಂ ಅವರ ಭೇಟಿ ವೇಳೆ ಅಲ್ಪಸಂಖ್ಯಾತ ಹಾಗೂ ಲಿಂಗಾಯತರ ಸಮಾವೇಶದ ಬಗ್ಗೆ ಚರ್ಚೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಸ್.ಆರ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ದಡ್ಡರಲ್ಲ. ಅವರು ಅಧಿಕಾರದ ಆಮಿಷಕ್ಕೆ ಒಳಗಾಗಿ ಈ ರೀತಿ ಚರ್ಚೆ ಮಾಡುವುದಿಲ್ಲ. ಇಬ್ರಾಹಿಂ ಅವರು ಹಿರಿಯ ನಾಯಕರು, ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಅವರ ಜತೆ ಮಾತನಾಡುವುದರಲ್ಲಿ ತಪ್ಪಿಲ್ಲ. ಇದನ್ನು ರಾಜಕೀಯವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ’ ಎಂದು ಡಿಕೆ ಶಿವಕುಮಾರ್‌ ಉತ್ತರಿಸಿದರು.



Read more

[wpas_products keywords=”deal of the day sale today offer all”]