Karnataka news paper

ಸಿಂಧನೂರು ಜನರಿಗೆ ತಣ್ಣನೆಯ ಶರಬತ್‌ಗಿಂತ ಬಿಸಿಯಾದ ಚಹಾವೇ ಫೇವರಿಟ್‌!


ಹೈಲೈಟ್ಸ್‌:

  • ಬಿಸಿಲನಾಡಿನ ಜನಕ್ಕೆ ಬಿಸಿಯಾದ ಚಹಾವೇ ಫೇವರಿಟ್‌.
  • ಸಿಂಧನೂರಿನಲ್ಲೀಗ ಚಹಾ ಹವಾ, ಕುಡಿಯಲು ಮುಗಿಬಿದ್ದ ಜನ
  • ಬಗೆಬಗೆಯ ವಿಶಿಷ್ಟ ಬಗೆಯ ಚಹಾ, ಅಂಗಡಿ ಆರಂಭಕ್ಕೆ ಸ್ಪರ್ಧೆ


ಚಂದ್ರಶೇಖರ ಬೆನ್ನೂರು

ಸಿಂಧನೂರು: ನಗರದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಹಾ ಪ್ರಾಂಚೈಸಿ ಅಂಗಡಿಗಳು ಸದ್ದು ಮಾಡಿದ್ದು, ಜನರು ಸಹ ಬಗೆಬಗೆಯ ಚಹಾ ಸೇವನೆಗೆ ಮುಗಿ ಬೀಳುತ್ತಿದ್ದಾರೆ. ಕುಷ್ಟಗಿ ರಸ್ತೆಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಾಯ್‌ತಲಬ್‌, ಟೀ ಮಚ್ಚಾ, ಕರವೀರ ಚಹಾ ಚಾಯ್‌ವಾಲಾ, ಬೆಲ್ಲದ ಚಹಾ ಎಂಬ ಹೆಸರಿನ ಚಹಾ ಅಂಗಡಿಗಳು ಶುರುವಾಗಿದೆ. ಸಿಂಧನೂರು ಜನರಿಗೆ ಚಹಾ ವಿಶೇಷವಲ್ಲ. ಈಗಾಗಲೇ ಹೋಟೆಲ್‌ ಸೇರಿ ಗಲ್ಲಿ ಗಲ್ಲಿಗಳಲ್ಲೂ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಚಹಾ ಮಾರಾಟ ಮಾಡುವವರು ಇದ್ದಾರೆ. ಈ ನಡುವೆ ಚಹಾ ಅಂಗಡಿಯೇ ದೊಡ್ಡ ಪ್ರಮಾಣದಲ್ಲಿ ಬ್ಯುಸಿನೆಸ್‌ ಆಗಿ ಮಾರ್ಪಟ್ಟಿರುವುದು ಅಚ್ಚರಿ ಮೂಡಿಸಿದೆ.

ಪ್ರಾಂಚೈಸಿಗಳು:
ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿಇರುವಂತಹ ಚಹಾ ಅಂಗಡಿಗಳ ಪ್ರಾಂಚೈಸಿಯನ್ನು ಸ್ಥಳೀಯ ಮಾಲೀಕರು ಪಡೆದುಕೊಂಡಿದ್ದಾರೆ. ಚಹಾದ ಅಂಗಡಿಗಾಗಿ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ, ಜನರನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ. ಈ ಮೊದಲು 5 ರೂಪಾಯಿಗೆ ದೊರೆಯುತ್ತಿದ್ದ ಚಹಾ, ಇದೀಗ 10 ರೂಪಾಯಿ ಆಗಿದೆ. ಬೆಳಗ್ಗೆಯಿಂದ ರಾತ್ರಿ ಮಲಗೋವರೆಗೂ ಚಹಾ ಧ್ಯಾನ ಮಾಡುವ ಇಲ್ಲಿನ ಜನರಿಗೆ, ಬಗೆಬಗೆಯ ಅಂಗಡಿಗಳಿಂದಾಗಿ ಮತ್ತಷ್ಟು ಅನುಕೂಲವಾಗಿದೆ. ಹೋಟೆಲ್‌ಗಳಲ್ಲಿ 5 ರೂಪಾಯಿಗೆ ಚಹಾ ಸಿಕ್ಕರೂ, ಹೊಸದಾದ ಅಂಗಡಿಗಳ ಮಾತ್ರ ತುಸು ದರ ಏರಿಕೆ ಬಿಸಿಯಿದೆ. 10 ರಿಂದ 50 ರೂಪಾಯಿವರೆಗೂ ಚಹಾ, ಕಾಫಿ ಸಿಗುತ್ತಿದೆ.

ವಿಶೇಷತೆ:
ಈ ಮೊದಲು ಚಹಾ ಎಂದರೆ ಕೇವಲ ನೀರು, ಟೀ ಪುಡಿ, ಸಕ್ಕರೆ, ಹಾಲು ಹಾಕಿದರೆ ಸಾಕು ಎನ್ನುವಂತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಚಹಾಕ್ಕೂ ಆಧುನಿಕತೆಯ ಟಚ್‌ ನೀಡಲಾಗಿದೆ. ಚಹಾ ಅಂಗಡಿಗಳಲ್ಲಿ ಲೆಮನ್‌ ಟೀ, ಮಸಾಲಾ ಟೀ, ಶುಂಠಿ ಟೀ, ಗ್ರೀನ್‌ ಟೀ, ಕಾಫಿ, ಕೋಲ್ಡ್‌ ಕಾಫಿ ಹೀಗೆ ಸಾಮಾನ್ಯ ಚಹಾದಿಂದ ಆರಂಭಗೊಂಡು ಹತ್ತಾರು ಬಗೆಯ ಚಹಾ ಇಲ್ಲಿ ಸಿಗುತ್ತಿವೆ. ಕುಷ್ಟಗಿ ರಸ್ತೆ ಚಹಾ ಹಬ್‌ ಆದ ಬಳಿಕ ಇದೀಗ ಗಂಗಾವತಿ ರಸ್ತೆಯಲ್ಲೂ ಚಹಾದ ದೊಡ್ಡ ಅಂಗಡಿಗಳನ್ನು ಆರಂಭಿಸುತ್ತಿರುವುದು ವಿಶೇಷವಾಗಿದೆ. ಹೊಸದಾಗಿ ಅಂಗಡಿ ತೆರೆದವರಿಗೆ ಉತ್ತಮ ಲಾಭವಾಗುತ್ತಿರುವುದರಿಂದ ಹೊಸ ಪ್ರಾಂಚೈಸಿ ಮೂಲಕ ಚಹಾ ಅಂಗಡಿ ತೆರೆಯಲು ಜನ ಕಾತರರಾಗಿದ್ದಾರೆ.

ದಿನಕ್ಕೊಂದು ಕಪ್ ಲೆಮನ್ ಟೀ, ಕುಡಿಯಿರಿ ದೇಹದ ತೂಕ ಇಳಿಸಿಕೊಳ್ಳಿ!

ಆರೋಗ್ಯದ ಚಿಂತೆ:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚಹಾ ಸೇವನೆಯಿಂದ ಕೆಲವರಿಗೆ ಆ್ಯಸಿಡಿಟಿ ಉಂಟಾಗುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿಹೊಂದಿರುವ ಬಹುತೇಕರು ಗ್ರೀನ್‌ ಟೀ ಕಡೆ ಮುಖ ಮಾಡಿದ್ದಾರೆ. ಹೊಸದಾಗಿ ಆರಂಭವಾಗಿರುವ ಚಹಾ ಅಂಗಡಿಗಳಲ್ಲಿ ನಾನಾ ಬಗೆಯ ಚಹಾ ಸಿಗುತ್ತಿರುವುದರಿಂದ ಜನರು ವಿಭಿನ್ನ ಬಗೆಯ ಚಹಾ ಆಯ್ಕೆಯಲ್ಲಿ ತೊಡಗಿದ್ದಾರೆ. ಸಕ್ಕರೆ ಕಾಯಿಲೆ ಇದ್ದವರು ಬೆಲ್ಲದ ಚಹಾ ಕುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಬಿಸಿಲಿನ ಝಳದ ನಡುವೆ ಜನರಿಗೆ ಮತ್ತಷ್ಟು ಚಹಾ ಹುಚ್ಚು ಹಿಡಿಸುತ್ತಿರುವುದು ವಿಶೇಷ ಎನಿಸಿದೆ.

ಸಿಂಧನೂರಿನಲ್ಲಿ ಭಾರಿ ಪ್ರಮಾಣದಲ್ಲಿ ಚಹಾದ ದೊಡ್ಡ ಅಂಗಡಿಗಳು ಆರಂಭವಾಗುತ್ತಿವೆ. ಈ ಮೊದಲಿನಿಂದಲೂ ಇಲ್ಲಿ ಚಹಾ ಸಿಗುತ್ತಿದೆ. ಆದರೀಗ ಚಹಾ ಮಾರಾಟವನ್ನೇ ದೊಡ್ಡ ಬ್ಯುಸಿನೆಸ್‌ ಮಾಡಲಾಗುತ್ತಿದೆ. ಜನರೂ ಸಹ ಬಗೆ ಬಗೆಯ ಚಹಾ ಸೇವನೆಗೆ ಮುಂದಾಗುತ್ತಿದ್ದಾರೆ. ಚಹಾ ಸೇವನೆ ಜತೆ ಆರೋಗ್ಯದ ಕಾಳಜಿವಹಿಸುವುದು ಅವಶ್ಯವಾಗಿದೆ.

-ಮಹೇಶ ಹಿರೇಮಠ, ಸಿಂಧನೂರು.



Read more

[wpas_products keywords=”deal of the day sale today offer all”]