Karnataka news paper

ಬಂಡವಾಳ ಹಿಂತೆಗೆತ ಗುರಿ ಮುಟ್ಟಲು ವಿಫಲವಾದ ಕೇಂದ್ರ, LIC IPOದತ್ತ ನಿರೀಕ್ಷೆಯ ನೋಟ


ಹೈಲೈಟ್ಸ್‌:

  • 2021-22ರಲ್ಲಿ 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ ಹೊಂದಿದ್ದ ಕೇಂದ್ರ
  • ಕಳೆದ ವರ್ಷದ ಮೊದಲಾರ್ಧದಲ್ಲಿ ಕೇವಲ ಶೇ. 5ರಷ್ಟು ಮಾತ್ರ ಗುರಿ ಸಾಧನೆ
  • ಕೇವಲ 9,329 ಕೋಟಿ ರೂ.ಗಳ ಬಂಡವಾಳ ಹಿಂತೆಗೆತ
  • ಹೀಗಾಗಿ ಎಲ್‌ಐಸಿ ಐಪಿಒದ ಮೇಲೆ ಹೆಚ್ಚಿದ ಒತ್ತಡ, ನಿರೀಕ್ಷೆ

ಹೊಸದಿಲ್ಲಿ: ಏರ್‌ ಇಂಡಿಯಾದ ಖಾಸಗೀಕರಣದ ಹೊರತಾಗಿಯೂ ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹಿಂತೆಗೆತದ ಗುರಿ ಮುಟ್ಟಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಸತತ ಮೂರನೇ ವರ್ಷ ಗುರಿಯನ್ನು ತಪ್ಪಿಸಿಕೊಂಡಿದೆ. ಹೀಗಾಗಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒದ ಮೇಲೆ ಒತ್ತಡ, ನಿರೀಕ್ಷೆ ಹೆಚ್ಚಿದೆ.

ಸರಕಾರ 2021 – 22ರಲ್ಲಿ 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ ಹೊಂದಿತ್ತು. ಆದರೆ ಸರಕಾರ ಕಳೆದ ವರ್ಷದ ಮೊದಲಾರ್ಧದಲ್ಲಿ ಕೇವಲ ಶೇ. 5ರಷ್ಟು ಮಾತ್ರ ಗುರಿ ಸಾಧಿಸಿದೆ. ಕೇವಲ 9,329 ಕೋಟಿ ರೂ.ಗಳ ಬಂಡವಾಳ ಹಿಂತೆಗೆತ ನಡೆದಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಅಂಕಿ ಅಂಶಗಳು ತಿಳಿಸಿದೆ. (ವೆಬ್‌ಸೈಟ್‌ನಲ್ಲಿ ಏರ್‌ ಇಂಡಿಯಾ ಮತ್ತು ಸೆಂಟ್ರಲ್‌ ಎಲೆಕ್ಟ್ರಾನಿಕ್ಸ್‌ ಬಂಡವಾಳ ಹಿಂತೆಗೆತದ ಮೊತ್ತ ಇಲ್ಲ) ಸರಕಾರ ಕೆಲವು ಪಿಎಸ್‌ಯುಗಳಿಂದ ಬಂಡವಾಳ ಹಿಂತೆಗೆತಕ್ಕೆ ಯತ್ನಿಸುತ್ತಿದೆ. ಆದರೆ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

ಕಳೆದ ವರ್ಷ ಅಕ್ಟೋಬರ್‌ 8ರಂದು ಉದ್ಯಮಿ ರತನ್‌ ಟಾಟಾ ಅವರು ಏರ್‌ ಇಂಡಿಯಾವನ್ನು ಸ್ವಾಗತಿಸಿ ಟ್ವೀಟ್‌ ಮಾಡಿದ್ದರು. ಇದರೊಂದಿಗೆ ಏರ್‌ ಇಂಡಿಯಾದ ಖಾಸಗೀಕರಣ ಖಚಿತವಾಗಿತ್ತು. ಏರ್‌ ಇಂಡಿಯಾದ 61,562 ಕೋಟಿ ರೂ. ಸಾಲದ ಹೊರೆಯಲ್ಲಿ 15,300 ಕೋಟಿ ರೂ.ಗಳನ್ನು ಟಾಟಾ ಸನ್ಸ್‌ ಭರಿಸಲಿದ್ದರೆ, ಉಳಿದ 46,262 ಕೋಟಿ ರೂ.ಗಳನ್ನು ಏರ್‌ ಇಂಡಿಯಾ ಅಸೆಟ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ (ಎಐಎಎಚ್‌ಎಲ್‌) ವರ್ಗಾಯಿಸಲಾಗುತ್ತಿದೆ. ಆದರೆ ಗುರಿ ಸುದೀರ್ಘವಾಗಿದೆ.

ಷೇರು ಹೂಡಿಕೆದಾರರೇ ಗಮನಿಸಿ, ಬೃಹತ್‌ ಎಲ್‌ಐಸಿ ಐಪಿಒಗೆ ಮಾರ್ಚ್‌ನಲ್ಲಿ ಚಾಲನೆ!
ನನೆಗುದಿಯಲ್ಲಿ ಖಾಸಗೀಕರಣ

2021- 22ರಲ್ಲಿ ಬಿಪಿಸಿಎಲ್‌, ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಕಂಟೇನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಐಡಿಬಿಐ ಬ್ಯಾಂಕ್‌, ಬೆಮೆಲ್‌, ಪವನ್‌ ಹನ್ಸ್‌, ನೀಲಾಂಚಲ್‌ ಇಸ್ಪಾಟ್‌ ನಿಗಮ್‌ ಲಿಮಿಟೆಡ್‌ ಮತ್ತಿತರ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಆಗಬೇಕಿತ್ತು. ಐಡಿಬಿಐ ಮತ್ತು ಇತರ ಎರಡು ಸಾರ್ವಜನಿಕ ಬ್ಯಾಂಕ್‌ ಖಾಸಗೀಕರಣವಾಗಬೇಕಿತ್ತು. ಆದರೆ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಸರಕಾರದ ಬಂಡವಾಳ ಹಿಂತೆಗೆತದ ಗುರಿ ತಪ್ಪಿದೆ. ಹೂಡಿಕೆದಾರರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಬೇಕಾಗಿದೆ.

ಸರಕಾರಕ್ಕೆ ಸದ್ಯ ಯಶಸ್ಸು ಸಿಕ್ಕಿರುವುದು ಏರ್‌ ಇಂಡಿಯಾದ ಖಾಸಗೀಕರಣದಲ್ಲಿ ಮಾತ್ರ. ಹೀಗಾಗಿ ಎಲ್‌ಐಸಿಯ ಮುಂಬರುವ ಐಪಿಒ ನಿರ್ಣಾಯಕ. ಈಗ ಬಿಪಿಸಿಎಲ್‌, ಬೆಮೆಲ್‌, ಎಸ್‌ಸಿಐ, ಪವನ್‌ ಹನ್ಸ್‌, ಎನ್‌ಐಎನ್‌ಎಲ್‌ ಇತ್ಯಾದಿಗಳಿಂದ ಸರಕಾರ ಬಂಡವಾಳ ಹಿಂತೆಗೆತಕ್ಕೆ ಕಾರ್ಯ ಪ್ರವೃತ್ತವಾಗಿದೆ. ಪವನ್‌ ಹನ್ಸ್‌ನಿಂದ 350-400 ಕೋಟಿ ರೂ. ಸಿಗಬಹುದು. ಬೆಮೆಲ್‌ ಮತ್ತು ಎಸ್‌ಸಿಐನಿಂದ ಒಟ್ಟಾಗಿ 3,600 ಕೋಟಿ ರೂ. ಸಿಗಬಹುದು ಎಂದು ವರದಿ ತಿಳಿಸಿದೆ. ಎಲ್‌ಐಸಿಯಲ್ಲಿನ ಶೇ. 5 – 10 ಷೇರುಗಳನ್ನು ಮಾರಾಟ ಮಾಡಲಿದ್ದು, ಇದರಿಂದ 80,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ಎಲ್‌ಐಸಿ ಐಪಿಒದಲ್ಲಿ ವಿದೇಶಿ ಹೂಡಿಕೆಗೂ ಅವಕಾಶ, ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಸಾಧ್ಯತೆ
ವೆಚ್ಚ ನಿಯಂತ್ರಣಕ್ಕೆ ಕೇಂದ್ರ ಸೂಚನೆ

ಹೊಸದಿಲ್ಲಿ: ಹಣಕಾಸು ಸಚಿವಾಲಯವು ಸರಕಾರದ ನಾನಾ ಇಲಾಖೆಗಳಿಗೆ ನೀಡಿರುವ ಸೂಚನೆಯಲ್ಲಿ, ಸರಕಾರ ನಿಗದಿಪಡಿಸಿದ ಪರಿಷ್ಕೃತ ಮಿತಿಯ ಒಳಗೆಯೇ ವೆಚ್ಚಗಳನ್ನು ನಿಯಂತ್ರಿಸುವಂತೆ ಸೂಚಿಸಿದೆ. ಸರಕಾರ ವಿತ್ತೀಯ ಕೊರತೆಯನ್ನು 2021-22ರ ಸಾಲಿಗೆ ಶೇ. 6.8ಕ್ಕೆ ನಿಯಂತ್ರಿಸಲು ಉದ್ದೇಶಿಸಿದೆ. ತೀರಾ ಅಗತ್ಯವಿದ್ದಲ್ಲಿ ಮಾತ್ರ ಹೆಚ್ಚುವರಿ ನಿಧಿಯನ್ನು ಖರ್ಚು ಮಾಡುವಂತೆ ತಿಳಿಸಲಾಗಿದೆ. ಬಜೆಟ್‌ಗೆ ಪೂರ್ವಭಾವಿಯಾಗಿ ನಾನಾ ಇಲಾಖೆಗಳಿಂದ 2021 – 22ರ ಸಾಲಿಗೆ ಹೆಚ್ಚುವರಿ ಅನುದಾನಕ್ಕೆ ಪರಿಷ್ಕೃತ ವೆಚ್ಚ ಅಂದಾಜುಗಳನ್ನು ನಿರೀಕ್ಷಿಸಲಾಗಿದ್ದು, ಪ್ರಸಕ್ತ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಮಿತಿಯೊಳಗೆ ವೆಚ್ಚ ನಿಯಂತ್ರಿಸಲು ತಿಳಿಸಲಾಗಿದೆ. ಉಳಿತಾಯಕ್ಕೆ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳುವಂತೆಯೂ ತಿಳಿಸ­ಲಾಗಿದೆ.



Read more

[wpas_products keywords=”deal of the day sale today offer all”]