Source : Online Desk
ಮೆಕ್ಸಿಕೊ: ಮೆಕ್ಸಿಕೋದಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಹಾಗೂ 54 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
100 ಕ್ಕೂ ಹೆಚ್ಚು ಜನರಿದ್ದ ಸರಕು ಸಾಗಣೆ ಟ್ರಕ್ ಚಿಯಾಪಾಸ್ ರಾಜ್ಯದ ರಾಜಧಾನಿ ಟುಕ್ಸ್ಟ್ಲಾ ಗುಟೈರೆಜ್ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಪಾದಚಾರಿ ಸೇತುವೆಯ ಮೇಲೆ ಉರುಳಿದಾಗ ಈ ಅಪಘಾತ ಸಂಭವಿಸಿದೆ.
ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಟ್ರಕ್ ಹೆಚ್ಚಿನ ವೇಗದಲ್ಲಿ ಹೋಗುತ್ತಿತ್ತು. ತೀಕ್ಷ್ಣವಾದ ತಿರುವು ತೆಗೆದುಕೊಳ್ಳುವಾಗ ಪಲ್ಟಿಯಾಗಿದೆ ಎಂದು ಎಂದು ರಾಜ್ಯ ನಾಗರಿಕ ರಕ್ಷಣಾ ಸೇವೆಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ಮೊರೆನೊ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಮಧ್ಯ ಅಮೆರಿಕದಿಂದ ವಲಸೆ ಬಂದವರೆಂದು ಹೇಳಲಾಗುತ್ತಿದೆ, ಮೃತರ ಗುರುತು ಪತ್ತೆಯಾಗಿಲ್ಲ. ಅವರ ರಾಷ್ಟ್ರೀಯತೆಯನ್ನು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಅಪಘಾತದಲ್ಲಿ ಬದುಕುಳಿದ ಕೆಲವರು ಗ್ವಾಟೆಮಾಲಾದಿಂದ ಬಂದವರು ಎಂದು ಚಿಯಾಪಾಸ್ ರಾಜ್ಯದ ಸಿವಿಲ್ ಡಿಫೆನ್ಸ್ ಕಛೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬುರುಂಡಿ ಕಾರಾಗೃಹದ ಬೆಂಕಿಯಲ್ಲಿ 38 ಮಂದಿ ಸಜೀವ ದಹನ: 69 ಮಂದಿಗೆ ಗಂಭೀರ ಗಾಯ
ಚಿಯಾಪಾಸ್ ಗವರ್ನರ್ ರುಟಿಲಿಯೊ ಎಸ್ಕಾಂಡನ್ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಅಪಘಾತಕ್ಕೆ ಕಾರಣವನ್ನು ಶೀಘ್ರದಲ್ಲೇ ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರಕು ಸಾಗಣೆ ಟ್ರಕ್ನಲ್ಲಿ ಅತಿ ಹೆಚ್ಚು ಜನರನ್ನು ತುಂಬಲಾಗಿತ್ತು. ದುರಂತಕ್ಕೆ ಇದೇ ಕಾರಣ ಎನ್ನಲಾಗಿದೆ. ಘಟನೆ ವೇಳೆ ಸುಮಾರು 107 ಮಂದಿ ಟ್ರಕ್ನಲ್ಲಿದ್ದರು ಎಂದು ತಿಳಿದುಬಂದಿದೆ. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್ಗಳಲ್ಲಿ ವಲಸಿಗರ ಕಳ್ಳಸಾಗಣೆ ಸಾಮಾನ್ಯವಾಗಿದೆ.