ಹೈಲೈಟ್ಸ್:
- ಉಣುಗುಗಳಲ್ಲಿ ವೈರಾಣು ಪತ್ತೆ
- ಸಾಗರ ತಾಲೂಕು ಅರಳಗೋಡಿನಲ್ಲಿ ಜಾಗೃತಿ ಸಭೆ
- ಸಾವು ನೋವಿಗೆ ಕಾರಣವಾಗಿದ್ದ ಕ್ಯಾಸನೂರು ಮಂಗನ ಕಾಯಿಲೆ (ಕೆಎಫ್‌ಡಿ)
ಅರಳಗೋಡು ಗ್ರಾ. ಪಂ. ವ್ಯಾಪ್ತಿಯ ಮಂಡವಳ್ಳಿ, ಮುಪ್ಪಾನೆ, ಬಣ್ಣ ಮನೆ ಸೇರಿದಂತೆ ತಾಲೂಕಿನ ಉಳ್ಳೂರು ಇನ್ನಿತರೆ ಸ್ಥಳಗಳಲ್ಲಿನ ಉಣುಗುಗಳನ್ನು ಸಂಗ್ರಹಿಸಿ ಜನವರಿ 13ರಂದು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಈ ಸಂಬಂಧ ಮಂಗಳವಾರ ಜಿಲ್ಲಾ ಕ್ರಿಮಿ ಮತ್ತು ಪರಮಾಣು ಪ್ರಯೋಗಾಲಯದ ವರದಿ ಬಂದಿದ್ದು, ಕಾಯಿಲೆಯ ಪ್ರಸರಣಕ್ಕೆ ಕಾರಣವಾಗುವ ಉಣುಗುಗಳಲ್ಲಿ ಕೆಎಫ್‌ಡಿ ಪಾಸಿಟಿವ್ ದೃಢಪಟ್ಟಿದೆ.
2021ನೇ ಸಾಲಿನ ಕೊನೆಯ ತಿಂಗಳುಗಳಲ್ಲಿ ತ್ಯಾಗರ್ತಿ ವ್ಯಾಪ್ತಿಯಲ್ಲಿ ಮಾತ್ರ ಒಬ್ಬ ಯುವಕನಲ್ಲಿ ಕೆಎಫ್‌ಡಿ ದೃಢಪಟ್ಟಿತ್ತು. ಈಗ ಉಣುಗುಗಳಲ್ಲಿ ಪತ್ತೆಯಾಗಿದ್ದು, ಪ್ರಸ್ತುತ ವರದಿಯಾದ ವೈರಾಣುಗಳು ಹಿಂದೆ ದಾಖಲಾದ ವೈರಾಣುಗಳಿಗಿಂತಲೂ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಪಾಯಕಾರಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅರಳಗೋಡಿನಲ್ಲಿ ಜನ ಜಾಗೃತಿ ಸಭೆ
ಉಣುಗುಗಳಲ್ಲಿ ಕೆಎಫ್‌ಡಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಅರಳಗೋಡಿನ ಗ್ರಾ. ಪಂ. ಕಾರ್ಯಾಲಯದಲ್ಲಿ ಆರೋಗ್ಯ ಇಲಾಖೆ, ಕೆಎಫ್‌ಡಿ ವಿಭಾಗ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ಜನ ಜಾಗೃತಿ ಸಭೆ ನಡೆಸಲಾಗಿದೆ.
ಜಿಲ್ಲಾ ಕ್ರಿಮಿ ಮತ್ತು ಪರಮಾಣು ಪ್ರಯೋಗಾಲಯದ ಮುಖ್ಯಸ್ಥ ಡಾ. ದರ್ಶನ್ ಮಾತನಾಡಿ, ಮಂಗನ ಕಾಯಿಲೆಯ ನಿಯಂತ್ರಣ ಸಂಬಂಧ ಇಲಾಖೆ ಸರ್ವ ಸಿದ್ಧತೆ ನಡೆಸಿದೆ. ಗ್ರಾಮೀಣ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ. ಲಸಿಕೆ ಪಡೆದುಕೊಳ್ಳುವುದು, ಕಡ್ಡಾಯವಾಗಿ ಡಿಎಂಪಿ ತೈಲ ಬಳಸುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಡಿಆರ್‌ಡಿಒದಲ್ಲಿ ಬಳಸುವ ವಿಶೇಷವಾದ ಡಿಎಂಪಿ ತೈಲವನ್ನು ಈ ಭಾಗದಲ್ಲಿ ವಿತರಿಸುವ ಸಂಬಂಧ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಉಣುಗುಗಳಲ್ಲಿ ಈಗ ದೃಢಪಟ್ಟಿರುವ ಕೆಎಫ್‌ಡಿ ವೈರಾಣು ಶೇ.3ರಷ್ಟು ಹೆಚ್ಚು ಅಪಾಯಕಾರಿ. ಅಲ್ಲದೇ ಹಿಂದೆ ಕಂಡುಬಂದಿರುವ ವೈರಾಣುಗಳಿಗಿಂತಲೂ ದುಷ್ಪರಿಣಾಮದಲ್ಲಿ ಹೆಚ್ಚಿನ ಶಕ್ತಿ ಶಾಲಿಯಾಗಿರುವುದರಿಂದ ಸಾರ್ವಜನಿಕರು ನಿರ್ಲಕ್ಷ್ಯ ಮಾಡಬಾರದು ಎಂದರು.
ಅರಳಗೋಡು ಆಸ್ಪತ್ರೆ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮಾತನಾಡಿ, ಕೆಎಫ್‌ಡಿ ನಿಯಂತ್ರಣದ ಲಸಿಕೆಯನ್ನು ಶೇ. 75ರಷ್ಟು ನೀಡಲಾಗಿದೆ. ಉಳಿದವರಿಗೆ ಲಸಿಕೆ ನೀಡುವ ಸಂಬಂಧ ಕ್ರಮ ತೆಗೆದುಕೊಳ್ಳಲಾಗಿದೆ. ಕಡ್ಡಾಯವಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದರು.
ಗ್ರಾ. ಪಂ. ಅಧ್ಯಕ್ಷ ಮೇಘರಾಜ್, ಉಪಾಧ್ಯಕ್ಷೆ ಲಕ್ಷ್ಮಿ ಕೃಷ್ಣಮೂರ್ತಿ, ಸದಸ್ಯರಾದ ರಾಜೇಶ, ಸೋಮವತಿ ಮಹಾವೀರ, ಲಕ್ಷ್ಮೀ ದಿನೇಶ, ಕೆಎಫ್ ಡಿ ವೈದ್ಯಾಧಿಕಾರಿ ಡಾ. ರವೀಂದ್ರ , ಸಿಆರ್‌ಪಿ ಬಾಲಕೃಷ್ಣ , ಪಿಎಚ್‌ಸಿಯ ಪುಷ್ಪಾ, ಭರತ್, ಅಂಗನವಾಡಿ, ಆಶಾ ಕಾರ‍್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.
Read more
[wpas_products keywords=”deal of the day sale today offer all”]