ಸಾಲಿಗ್ರಾಮ (ಮೈಸೂರು ಜಿಲ್ಲೆ): ‘ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುವುದಕ್ಕಿಂತಲೂ ಕಾನೂನು ಸಮರ ನಡೆಸುವುದು ಅಗತ್ಯ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಶುಕ್ರವಾರ ಮಾಧ್ಯಮದರೊಡನೆ ಮಾತನಾಡಿದ ಅವರು, ‘ಯೋಜನೆಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂಕೋರ್ಟ್ನಲ್ಲಿದೆ. ಅಂತರರಾಜ್ಯ ಜಲ ವಿವಾದದ ಬಗ್ಗೆ ನ್ಯಾಯಾಲಯದ ಹೊರಗಡೆ ಹೋರಾಟ ಮಾಡಿದರೆ ಪ್ರಯೋಜನವಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಕಾಂಗ್ರೆಸ್ ನಾಯಕರು ಎಷ್ಟೇ ನಗಾರಿ ಬಾರಿಸಿದರೂ ಕೋರ್ಟ್ನಿಂದ ತೀರ್ಪು ಕೊಡಿಸಲು ಸಾಧ್ಯವಿಲ್ಲ. ಪಾದಯಾತ್ರೆಯಿಂದ ಸಮಸ್ಯೆ ಬಗೆಹರಿಯದು. ಅರ್ಧಕ್ಕೆ ಮೊಟಕುಗೊಂಡಿರುವ ಪಾದಯಾತ್ರೆಯನ್ನು ರಾಮನಗರದಿಂದಲೇ ಮತ್ತೆ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಆ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲಿಗೆ ಹೋಗಬೇಕು?
‘ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ನಾಯಕರು ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ನಾಯಕರೊಬ್ಬರು ಅಹಿಂದ ಎಂದು ಹೇಳುತ್ತಾರೆ. ಹಾಗಾದರೆ ದೇಶದಲ್ಲಿ ಇರುವ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲಿಗೆ ಹೋಗಬೇಕು? ಯಾವುದೇ ಸಮಸ್ಯೆ ಎದುರಾದರೂ ಕಾನೂನಿನ ಮೂಲಕ ಗೆಲುವು ಪಡೆಯಲು ಪ್ರಯತ್ನಿಸಬೇಕು’ ಎಂದು ಎಚ್.ಡಿ.ದೇವೇಗೌಡ ಸಲಹೆ ನೀಡಿದರು.
‘ಪಾದಯಾತ್ರೆ: ಬಿಜೆಪಿಗೆ ಹತಾಶೆ’
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸಿದ ಪಾದಯಾತ್ರೆಯನ್ನು ನೋಡಿ ಬಿಜೆಪಿ ನಾಯಕರು ಹತಾಶೆಗೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕರಿಗೆ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಜ್ಞಾನೋದಯವಾಗಿದೆ’ ಎಂಬ ಬಿಜೆಪಿ ಮುಖಂಡರ ಟೀಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
‘ಪಾದಯಾತ್ರೆ ಕುರಿತು ಹೈಕೋರ್ಟ್ ನೀಡುವ ಆದೇಶವನ್ನು ಸಂಪೂರ್ಣವಾಗಿ ತಿಳಿದ ಬಳಿಕ ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ’ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೋವಿಡ್ ಹೆಚ್ಚಾಗಿ ಹರಡಿಲ್ಲ. ಈಗಲೇ ರೈತರು ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಎದುರಿಸಲು ಸಜ್ಜಾಗಬೇಕು. ರೈತರ ಬೆಳೆಗಳಿಗೆ ಸರಿಯಾದ ಬೆಲೆ ನೀಡುವ ಮೂಲಕ ಸರ್ಕಾರ ಅವರ ಕೈ ಬಲಪಡಿಸಬೇಕು ಎಂದು ಒತ್ತಾಯಿಸಿದರು.
‘ಲಾಭಕ್ಕಿಂತ ನಷ್ಟವೇ ಜಾಸ್ತಿ’
ರಾಜಕೀಯ ಲಾಭ ಪಡೆಯುವ ಸ್ವಾರ್ಥದಿಂದ ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪಾದಯಾತ್ರೆಯ ಹಿಂದೆ ಜನರಿಗೆ ಒಳಿತಾಗಬೇಕೆಂಬ ಭಾವನೆಗಿಂತಲೂ ರಾಜಕೀಯ ಸ್ವಾರ್ಥವೇ ಜಾಸ್ತಿ ಇತ್ತು. ಹಾಗಾಗಿ ಇವರ ಪಾದಯಾತ್ರೆಯಿಂದ ಏನೂ ಆಗಲಿಲ್ಲ’ ಎಂದರು.
ಕಾಂಗ್ರೆಸ್ನ ಪಾದಯಾತ್ರೆಯನ್ನು ನಿಲ್ಲಿಸಲು ಸರ್ಕಾರ ಷಡ್ಯಂತ್ರ ನಡೆಸಿತ್ತು ಎಂಬುದು ಆಧಾರರಹಿತ ಆರೋಪ. ಅವರ ವೈಫಲ್ಯ ಮುಚ್ಚಿಕೊಳ್ಳಲು ಏನೇನೋ ಆರೋಪ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಕೈಗೊಳ್ಳುವ ನಿರ್ಧಾರ ಮತ್ತು ಪಾದಯಾತ್ರೆ ನಡೆಸಿದ್ದು ಎರಡೂ ಕಾಂಗ್ರೆಸ್ನವರ ತಪ್ಪು ಎಂದು ಸಚಿವರು ಹೇಳಿದರು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ ಯಾರ ವಿರೋಧವೂ ಇಲ್ಲ. ಕಾಂಗ್ರೆಸ್ನವರು ಯಾರ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬುದೇ ಗೊತ್ತಾಗಲಿಲ್ಲ. ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಏನನ್ನೂ ಮಾಡದವರು ಈಗ ಪಾದಯಾತ್ರೆ ಮಾಡಿದರು ಎಂದರು.
Read more from source
[wpas_products keywords=”deal of the day sale today kitchen”]