ಹೈಲೈಟ್ಸ್:
- ಪಂಜಾಬ್‌ನಲ್ಲಿ ಓಮಿಕ್ರಾನ್ ಭೀತಿ: ನೈಟ್ ಕರ್ಫ್ಯೂ ಜಾರಿ
- ಶಾಲೆ, ಕಾಲೇಜು ಸೇರಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್
- ಮಾಲ್, ಪಬ್, ಬಾರ್‌ಗಳಲ್ಲಿ 50:50 ನಿಮಯ ಜಾರಿ
ಕೆಲ ದಿನಗಳಿಂದ ಪಂಜಾಬ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಅಲ್ಲಿನ ಸರ್ಕಾರ ನೈಟ್ ಕರ್ಫ್ಯೂ ಹೇರಿದೆ. ಶಾಲಾ ಕಾಲೇಜುಗಳಿಗೆ ರಜೆ ಸಾರಿದೆ. ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಅವಲೋಕನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಹೇರಿಕೆ ಮಾಡಿರುವ ನಿರ್ಬಂಧಗಳನ್ನು ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಘೋಷಣೆ ಮಾಡಿದ್ದಾರೆ.
ಹೊಸ ನಿಯಮಗಳನ್ವಯ ರಾಜ್ಯಾದ್ಯಂತ ಶಾಲೆ, ಕಾಲೇಜು, ವಿವಿಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಆನ್‌ಲೈನ್ ಕ್ಲಾಸ್ ನಡೆಸುವಂತೆ ನಿರ್ದೇಶಿಸಲಾಗಿದೆ. ಆದರೆ ನರ್ಸಿಂಗ್ ಹಾಗೂ ಮೆಡಿಕಲ್ ಕಾಲೇಜ್‌ಗಳಿಗೆ ಎಂದಿನಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಹೊಸ ಆದೇಶದ ಪ್ರಕಾರ ರಾತ್ರಿ 10 ರಿಂದ ಮುಂಜಾನೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಹೇರಲಾಗಿದ್ದು, ಇಡೀ ರಾಜ್ಯಕ್ಕೆ ಇದು ಅನ್ವಯ ಅಗಲಿದೆ. ಅಲ್ಲದೇ ಬಾರ್‌ಗಳು, ಸಿನಿಮಾ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಮಾಲ್‌ಗಳು, ರೆಸ್ಟೋರೆಂಟ್, ಮ್ಯೂಸಿಯಂ ಹಾಗೂ ಮೃಗಾಲಯಗಳು ತಮ್ಮ ಒಟ್ಟು ಸಾಮರ್ಥ್ಯದ ಶೇ.50 ರಷ್ಟು ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಇಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಎರಡೂ ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.
ಸದ್ಯ ಹೇರಲಾಗಿರುವ ಎಲ್ಲಾ ನಿರ್ಬಂಧಗಳೂ ಕೂಡ ಜನವರಿ 15ರ ವರೆಗೆ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.
ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಈಜು ಕೊಳ ಹಾಗೂ ಜಿಮ್‌ಗಳನ್ನು ಬಂದ್ ಮಾಡಬೇಕು ಎಂದು ಆದೇಶಿಸಲಾಗಿದೆ. ಆದರೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಪಟುಗಳಿಗೆ ತರಬೇತಿ ಪಡೆಯಲು ಯಾವುದೇ ಅಭ್ಯಂತರ ಇಲ್ಲ.
ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡ ಉದ್ಯೋಗಿಗಳು ಮಾತ್ರ ಜತೆಗೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡತಕ್ಕದ್ದು ಎಂದು ನಿಮಯದಲ್ಲಿ ಹೇಳಲಾಗಿದೆ.
ಸಾರ್ವಜನಿಕರಿಗೆ ಇಷ್ಟೆಲ್ಲಾ ನಿರ್ಬಂಧ ವಿಧಿಸಿರುವ ಸರ್ಕಾರ, ಭಾರೀ ಜನ ಸೇರುವ ಚುನಾವಣಾ ರ್ಯಾಲಿಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಮುಂದಿನ ತಿಂಗಳು ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದೆ. ಆದರೆ ಈ ಬಗ್ಗೆ ಮಾರ್ಗಸೂಚಿಯಲ್ಲಿ ಯಾವುದೇ ಉಲ್ಲೇಖ ಇಲ್ಲ.
ಕೆಲ ದಿನಗಳಿಂದ ಪಂಜಾಬ್‌ನಲ್ಲಿ ಕೋವಿಡ್ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಡಿಸೆಂಬರ್ 28 ರಂದು ರಾಜ್ಯಾದ್ಯಂತ ಕೇವಲ 51 ಪ್ರಕರಣಗಳು ಪತ್ತೆಯಾಗಿತ್ತು. ಆದರೆ ಜನವರಿ 3 ರಂದು 419 ಪ್ರಕರಣಗಳು ಬೆಳಕಿಗೆ ಬಂದಿವೆ.
ಅತೀ ಕಡಿಮೆ ಟೆಸ್ಟಿಂಗ್ ನಡೆಯುತ್ತಿದ್ದರೂ, ಇಷ್ಟು ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಡಿ. 28 ರಂದು 0.46% ರಷ್ಟಿದ್ದ ಪಾಸಿಟಿವಿಟಿ ದರ, ಈಗ ಒಮ್ಮೆಲೇ 4.47% ಕ್ಕೆ ಏರಿಕೆಯಾಗಿದೆ.