Karnataka news paper

ಮಕ್ಕಳ ಲಸಿಕೆ ಹಬ್ಬ ಬಲು ಜೋರು; ತುಮಕೂರಿನಲ್ಲಿ ಮೊದಲ ದಿನವೇ ಶೇ.25ರಷ್ಟು ಗುರಿ ಸಾಧನೆ!


ತುಮಕೂರು: ಶೈಕ್ಷಣಿಕ ನಗರಿಯಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆ ಅಭಿಯಾನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಮೊದಲ ದಿನವಾದ ಸೋಮವಾರವೇ ಶೇ.25ರಷ್ಟು ಗುರಿ ಸಾಧನೆಯಾಗಿದ್ದು, ವಾರದೊಳಗೆ ಎಲ್ಲ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸ ಮೂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಹಾಗೂ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಜಿಲ್ಲಾಕೇಂದ್ರದ ಎಂಪ್ರೆಸ್‌ ಕಾಲೇಜಿನಲ್ಲಿ ಮಕ್ಕಳ ಲಸಿಕಾ ಹಬ್ಬಕ್ಕೆ ಚಾಲನೆ ನೀಡಿದರು. ಅಂತೆಯೇ ಎಲ್ಲ ತಾಲೂಕು ಕೇಂದ್ರಗಳಲ್ಲೂ ಆಯಾಯ ವಿಧಾನಸಭೆ ಕ್ಷೇತ್ರದ ಶಾಸಕರು ಲಸಿಕಾ ಅಭಿಯಾನ ಉದ್ಘಾಟಿಸಿದರು.

1,22,960 ಮಕ್ಕಳಿಗೆ ಲಸಿಕೆ ನೀಡಿಕೆ ಗುರಿ
ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ 61,229 ಶಾಲಾ ಮಕ್ಕಳು ಹಾಗೂ ನರ್ಸಿಂಗ್‌, ಐಟಿಐ ಮೊದಲಾದ ವಿದ್ಯಾರ್ಥಿಗಳು ಹಾಗೂ ಶಾಲೆ ಬಿಟ್ಟ ಮಕ್ಕಳು ಸೇರಿದಂತೆ 15-18 ವರ್ಷದೊಳಗಿನ 1,22,960 ಮಕ್ಕಳಿಗೆ ಲಸಿಕೆ ನೀಡಿಕೆ ಗುರಿ ಹೊಂದಲಾಗಿದೆ. ಸೋಮವಾರ 30,608 ವಿದ್ಯಾರ್ಥಿಗಳು ಲಸಿಕೆ ಪಡೆದರು.

ತಪ್ಪು ಕಲ್ಪನೆಗಳು ಬೇಡ, ತಪ್ಪದೇ ಮಕ್ಕಳಿಗೆ ಲಸಿಕೆ ಕೊಡಿಸಿ: ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಕರೆ
ಕೊರೊನಾ ಲಸಿಕೆ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಬೇಡ. ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಕರೆ ನೀಡಿದರು.

ನಗರದ ಎಂಪ್ರೆಸ್‌ ಪದವಿ ಪೂರ್ವ ಕಾಲೇಜಿನಲ್ಲಿ15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಲಸಿಕೆ ನೀಡಲು ಎಲ್ಲಾ ಶಾಲಾ-ಕಾಲೇಜುಗಳಲ್ಲಿಯೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಿಕೆಗೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪೋಷಕರು ಯಾವುದೇ ಆತಂಕಕ್ಕೆ ಒಳಗಾಗದೆ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕೆಂದು ಮನವಿ ಮಾಡಿದರು.
ಹೊಸ ವರ್ಷ ಮಕ್ಕಳಿಗೆ ಲಸಿಕೆ ಹರ್ಷ: ಕಲ್ಪತರು ನಾಡಿನಲ್ಲಿ 61,229 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ತಯಾರಿ
ಕೊರೊನಾ ಮಹಾಮಾರಿಯಿಂದ ಮಕ್ಕಳನ್ನು ರಕ್ಷಿಸಲು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಕೋವಿಡ್‌ ಸೋಂಕು ಹರಡುವಿಕೆಯನ್ನು ತಡೆಗಟ್ಟಲು 15-18 ವರ್ಷದ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯ 15-18 ವರ್ಷದ 1.25 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಜಗತ್ತಿನಲ್ಲಿ ಓಮಿಕ್ರಾನ್‌ ಮತ್ತು ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕೆ ಪಡೆಯುವುದು ಅತ್ಯವಶ್ಯಕವಾಗಿದೆ. ಮೊದಲನೇ ಮತ್ತು ಎರಡನೇ ಡೋಸ್‌ ಲಸಿಕೆಯನ್ನು ನಿಗದಿತ ಅವಧಿಯಲ್ಲಿ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಡಿಡಿಪಿಐ ನಂಜಯ್ಯ, ಆರ್‌ಸಿಎಚ್‌ ಅಧಿಕಾರಿ ಡಾ.ಕೇಶವಮೂರ್ತಿ ಮತ್ತಿತರರಿದ್ದರು.
ಕೋವಿಡ್‌ ವಿರುದ್ಧ ಮಕ್ಕಳಿಗೆ ರಕ್ಷಣೆ ನೀಡುವ ಅಭಿಯಾನ ಆರಂಭ; ಇಂದು ನಿಗದಿತ ಸ್ಥಳದಲ್ಲಿ ಮಾತ್ರ, ನಾಳೆಯಿಂದ ಶಾಲೆ-ಕಾಲೇಜಲ್ಲಿ ಲಭ್ಯ!
ಜಿಲ್ಲೆಯಲ್ಲಿ ನಾನಾ ಹಂತದ ಲಸಿಕಾಕರಣ ಯಶಸ್ವಿಯಾಗಿದೆ. ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ವಿತರಣೆಯಲ್ಲಿ ಶೇ.98ರಷ್ಟು ಗುರಿ ಸಾಧನೆಯಾಗಿದೆ. ಇದೀಗ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆಗೆ ಚಾಲನೆ ಸಿಕ್ಕಿದೆ. ಪೋಷಕರು ಯಾವುದೇ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳದೇ ಮಕ್ಕಳಿಗೆ ಲಸಿಕೆ ಕೊಡಿಸಬೇಕು.
ಡಾ.ನಾಗೇಂದ್ರಪ್ಪ, ಡಿಎಚ್‌ಒ, ತುಮಕೂರು



Read more