ಹೈಲೈಟ್ಸ್:
- ತೆಲುಗು ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುವುದು ಅಧಿಕೃತ
- ನಂದಮೂರಿ ಬಾಲಕೃಷ್ಣ ಅವರ ಚಿತ್ರದಲ್ಲಿ ದುನಿಯಾ ವಿಜಯ್ ಅಭಿನಯಿಸುವುದು ಪಕ್ಕಾ!
- ಅಧಿಕೃತ ಮಾಹಿತಿ ಹಂಚಿಕೊಂಡ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ
‘ಸಲಗ’ ಸಿನಿಮಾದ ನಂತರ ದುನಿಯಾ ವಿಜಯ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇತ್ತು. ಆ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ದುನಿಯಾ ವಿಜಯ್ ಅವರ ಮುಂದಿನ ಚಿತ್ರದ ಬಗ್ಗೆ ಇಂದು ಅಧಿಕೃತ ಘೋಷಣೆಯಾಗಿದೆ. ಕನ್ನಡ ನಟ ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಟಾಲಿವುಡ್‌ನ ‘ನಟಸಿಂಹಂ’ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಇದು ಅಂತೆ-ಕಂತೆ ಸುದ್ದಿಯಲ್ಲ. ನಂದಮೂರಿ ಬಾಲಕೃಷ್ಣ ನಟನೆಯ 107ನೇ ಚಿತ್ರದಲ್ಲಿ ದುನಿಯಾ ವಿಜಯ್ ಅಭಿನಯಿಸಲಿದ್ದಾರೆ ಅಂತ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಅಧಿಕೃತವಾಗಿ ಘೋಷಿಸಿದೆ. ಆ ಮೂಲಕ ಟಾಲಿವುಡ್ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುವುದು ಪಕ್ಕಾ ಆಗಿದೆ.
ಮೈತ್ರಿ ಮೂವಿ ಮೇಕರ್ಸ್ ಇನ್ಸ್ಟಾಗ್ರಾಮ್ ಪೋಸ್ಟ್
‘’ಸ್ಯಾಂಡಲ್‌ವುಡ್ ಸೆನ್ಸೇಷನ್ ದುನಿಯಾ ವಿಜಯ್ ಅವರನ್ನು ಪವರ್‌ಫುಲ್ ಪಾತ್ರಕ್ಕಾಗಿ #NBK107 ಚಿತ್ರತಂಡ ಸ್ವಾಗತಿಸುತ್ತಿದೆ’’ ಎಂದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
#NBK107
ನಂದಮೂರಿ ಬಾಲಕೃಷ್ಣ ಅಭಿನಯದ 107ನೇ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ಶ್ರುತಿ ಹಾಸನ್ ಅಭಿನಯಿಸಲಿದ್ದಾರೆ. ಥಮನ್ ಸಂಗೀತ ನೀಡಲಿದ್ದಾರೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಸಿನಿಪ್ರಿಯರು ಫುಲ್ ಖುಷ್
ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ದುನಿಯಾ ವಿಜಯ್ ಕಾಲಿಡುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ ನಂದಮೂರಿ ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ತೆರೆ ಹಂಚಿಕೊಳ್ಳಲಿದ್ದಾರೆ. ಈ ಕಾಂಬಿನೇಶನ್‌ನ ತೆರೆಮೇಲೆ ಕಣ್ತುಂಬಿಕೊಳ್ಳುವ ಕುತೂಹಲ ಸಿನಿಪ್ರಿಯರಿಗಿದೆ. ಇವರಿಬ್ಬರ ಕಾಂಬಿನೇಶನ್ ಸಿಕ್ಕಾಪಟ್ಟೆ ಮಾಸ್ ಆಗಿರಲಿದೆ ಎಂದು ಸಿನಿಪ್ರಿಯರು ಕಾಮೆಂಟ್ ಮಾಡುತ್ತಿದ್ದಾರೆ.
ಹೊಸ ಲುಕ್
ನಂದಮೂರಿ ಬಾಲಕೃಷ್ಣ ಅವರ 107ನೇ ಚಿತ್ರದಲ್ಲಿ ನಟಿಸಲು ದುನಿಯಾ ವಿಜಯ್ ವಿಶೇಷ ತಯಾರಿ ನಡೆಸಿದ್ದಾರೆ. ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಲುಕ್ ವಿಭಿನ್ನವಾಗಿರಲಿದೆ. ಈ ಸಿನಿಮಾಗಾಗಿ ಬಿಳಿ ಗಡ್ಡ, ಬಿಳಿ ಮೀಸೆ ಬಿಟ್ಟಿದ್ದಾರೆ ದುನಿಯಾ ವಿಜಯ್. ಔಟ್ ಅಂಡ್ ಔಟ್ ಮಾಸ್ ಲುಕ್‌ನಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಟಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ ‘ಕರಿಚಿರತೆ’ ದುನಿಯಾ ವಿಜಯ್