Karnataka news paper

ವರ್ಷಾರಂಭದಲ್ಲಿ ವಿಮಾನ ಕಂಪನಿಗಳಿಗೆ ಆಘಾತ: ಭಾನುವಾರ ಒಂದೇ ದಿನ 4000ಕ್ಕೂ ಅಧಿಕ ವಿಮಾನಗಳು ರದ್ದು


ಹೈಲೈಟ್ಸ್‌:

  • ಹೊಸ ವರ್ಷ ಆರಂಭದಲ್ಲೇ ವಿಮಾನಯಾನ ಕಂಪನಿಗಳಿಗೆ ಆಘಾತ
  • ಓಮಿಕ್ರಾನ್‌ ಭೀತಿಯಿಂದ ವಿಶ್ವಾದ್ಯಂತ ಹಲವು ವಿಮಾನಗಳು ರದ್ದು
  • ಸಿಬ್ಬಂದಿಗಳು ಕ್ವಾರೆಂಟೈನ್‌ನಲ್ಲಿರುವುದರಿಂದ ಕಂಪನಿಗಳಿಗೆ ಸಂಕಷ್ಟ

ನ್ಯೂಯಾರ್ಕ್‌: 2022ರ ಹೊಸ ವರ್ಷದ ಆರಂಭದಲ್ಲೇ ಇಡೀ ವಿಶ್ವಕ್ಕೆ ಓಮಿಕ್ರಾನ್‌ ಕಂಟಕವಾಗಿ ಪರಿಣಮಿಸಿದೆ. ರೂಪಾಂತರಗೊಂಡು ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‌, ವರ್ಷಾರಂಭದಲ್ಲೇ ವಾಣಿಜ್ಯ ಚಟುವಟಿಕೆಗಳಿಗೆ ಆಘಾತ ನೀಡಿದೆ.

ಓಮಿಕ್ರಾನ್‌ ಭೀತಿಯಿಂದಾಗಿ ಜನವರಿ 2 ರ ಭಾನುವಾರದಂದು ವಿಶ್ವಾದ್ಯಂತ 4000 ಸಾವಿರಕ್ಕೂ ಅಧಿಕ ವಿಮಾನಗಳ ಸಂಚಾರ ರದ್ದಾಗಿದೆ. ಈ ಪೈಕಿ ಅರ್ಧಕ್ಕರ್ಧ ವಿಮಾನಗಳು ಅಮೆರಿಕವೊಂದರಲ್ಲೇ ರದ್ದಾಗಿದೆ.

ರಜಾದಿನವೇ ಇಷ್ಟೊಂದು ವಿಮಾನಗಳು ರದ್ದಾಗಿದ್ದು, ವಿಮಾನಯಾನ ಕಂಪನಿಗಳಿಗೆ ವರ್ಷಾರಂಭದಲ್ಲೇ ಆಘಾತ ಉಂಟು ಮಾಡಿದೆ. ವಿಶ್ವದ ವಿವಿಧ ಭಾಗಗಳಲ್ಲಿ ಹೆಚ್ಚಾಗಿತ್ತಿರುವ ಓಮಿಕ್ರಾನ್‌ ಸೋಂಕು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದಾಗಿದೆ.

ವಿಮಾನದಲ್ಲಿಯೇ ಬಂತು ಕೋವಿಡ್ ಪಾಸಿಟಿವ್ ವರದಿ: ಟಾಯ್ಲೆಟ್‌ನಲ್ಲಿ ಐಸೋಲೇಟ್ ಆದ ಮಹಿಳೆ!
ವಿಮಾನಗಳ ಹಾರಾಟಗಳ ಮೇಲೆ ನಿಗಾ ಇಡುವ ಫ್ಲೈಟ್‌ ಅವೇರ್‌ ಡಾಟ್‌ ಕಾಂ (FlightAware.com) ಪ್ರಕಾರ ಅಮೆರಿಕ ಒಂದರಲ್ಲೇ ಭಾನುವಾರ ತಡ ರಾತ್ರಿ 2 ಗಂಟೆ ವರೆಗೆ ಒಟ್ಟು 2400 ವಿಮಾನಗಳ ಹಾರಾಟ ರದ್ದಾಗಿದೆ. ಇದರಲ್ಲಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆಯೂ ಇದೆ. ಇನ್ನು ಜಾಗತಿಕವಾಗಿ 11,200 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ ಎಂದು ಅದು ಹೇಳಿದೆ.

ಸ್ಕೈ ವೆಸ್ಟ್‌ (SkyWest) ಹಾಗೂ ಸೌತ್‌ ವೆಸ್ಟ್‌ (SouthWest) ಕಂಪನಿಯ ವಿಮಾನಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರದ್ದಾಗಿವೆ. ಈ ಎರಡೂ ಕಂಪನಿಗಳ ಕ್ರಮವಾಗಿ 510 ಹಾಗೂ 419 ವಿಮಾನಗಳು ವಿಳಂಬವಾಗಿವೆ.

ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಭಾರೀ ಬೇಡಿಕೆ ಇರುವ ವೇಳೆಯಲ್ಲೇ ಭಾರೀ ಪ್ರಮಾಣದಲ್ಲಿ ವಿಮಾನ ಹಾರಾಟ ರದ್ದಾಗಿವೆ. ಓಮಿಕ್ರಾನ್‌ ಭೀತಿ ಹಾಗೂ ಪೈಲಟ್‌ಗಳು ಮತ್ತು ವಿಮಾನದ ಸಿಬ್ಬಂದಿಗಳು ಕ್ವಾರಂಟೈನ್‌ಗೆ ಒಳಗಾಗಿರುವುದರಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಅಮೆರಿಕ, ಭಾರತ ಸೇರಿ ವಿಶ್ವಾದ್ಯಂತ ಹಲವು ವಿಮಾನಯಾನ ಕಂಪನಿಗಳು, ಸಿಬ್ಬಂದಿ ಕೊರತೆಯಿಂದಾಗಿ ವಿಮಾನಗಳನ್ನು ರದ್ದು ಅಥವಾ ಕಡಿಮೆಗೊಳಿಸುತ್ತಿವೆ. ಹೊಸ ವರ್ಷದ ಆರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಓಮಿಕ್ರಾನ್‌ ಕೇಸು ದಾಖಲಾಗುತ್ತಿರುವುದು ವಿಮಾನಯಾನ ಕಂಪನಿಗಳಿಗೆ ಭಾರೀ ಹೊಡೆತ ನೀಡಿದೆ. ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಲು ಅಮೆರಿಕದ ಹಲವು ಕಂಪನಿಗಳು ವರ್ಕ್‌ ಫ್ರಂ ಹೋಮ್‌ ಮಾಡುತ್ತಿರುವ ಸಿಬ್ಬಂದಿಗಳು ಸೋಮವಾರದಿಂದ ಕಚೇರಿಗೆ ಬರುವಂತೆ ನಿರ್ದೇಶನ ಕೊಟ್ಟಿದೆ.

ಕೋವಿಡ್‌ ನಡುವೆಯೂ ರೈಲ್ವೆಗೆ ಭರ್ಜರಿ ಆದಾಯ: ಪ್ರಿಮಿಯಂ ಟಿಕೆಟ್‌ನಿಂದ 6 ತಿಂಗಳಲ್ಲಿ ₹ 1033 ಕೋಟಿ ಕಲೆಕ್ಷನ್!
ಇದರ ಜತೆ ಜತೆಗೆ ಕ್ಯಾಬಿನ್‌ ಸಿಬ್ಬಂದಿ, ಪೈಲಟ್‌ಗಳು, ಸಹಾಯಕ ಸಿಬ್ಬಂದಿಗಳಿಗೆ ರಜೆ ಕಡಿತ ಮಾಡಲಾಗಿದ್ದು, ರಜೆ ಅವಧಿಯಲ್ಲಿ ಕೆಲಸ ಮಾಡಬೇಕು ಎಂದು ಕಂಪನಿಗಳು ಸೂಚಿಸಿವೆ. ಅಲ್ಲದೇ ಓವರ್‌ಟೈಮ್‌ ಕೆಲಸ ಮಾಡಬೇಕು ಎಂದು ನಿರ್ದೇಶಿಸಲಾಗಿದೆ. ಕೋವಿಡ್‌ನಿಂದಾಗಿಯೂ ಕೆಲಸ ಉಳಿಸಿಕೊಂಡಿರುವ ಉದ್ಯೋಗಿಗಳು, ಕೆಲಸ ಕಳೆದುಕೊಳ್ಳುವ ಭೀತಿಯಿಂದ ಹೆಚ್ಚುವರಿ ಅವಧಿ ಕೆಲಸ ಮಾಡುತ್ತಿದ್ದಾರೆ.

ಏತನ್ಮಧ್ಯೆ ಅಮೆರಿಕದ ಭಾರೀ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದೆ. ಶನಿವಾರ ಅಮೆರಿಕದಲ್ಲಿ 3,46,869 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಕನಿಷ್ಠ 377 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಒಟ್ಟು ಕೋವಿಡ್‌ಗೆ ಬಲಿಯಾದವರ ಸಂಖ್ಯೆ 8,28,562 ಕ್ಕೆ ಮುಟ್ಟಿದೆ.



Read more