ಹೈಲೈಟ್ಸ್:
- ಮೂರನೇ ಅಲೆಯ ಆರಂಭದ ಸೂಚನೆ ನೀಡುತ್ತಿದೆ ಕೊರೊನಾ ವೈರಸ್ ಸೋಂಕು
- ಮಹಾರಾಷ್ಟ್ರದಲ್ಲಿ ಶೇ 27ರಷ್ಟು ಕೋವಿಡ್ ಹೆಚ್ಚಳ, 11877 ಕೇಸ್ ದಾಖಲು
- ದಿಲ್ಲಿಯಲ್ಲಿ ಎರಡನೇ ಅಲೆ ವೇಳೆ ದಾಖಲಾಗಿದ್ದ ದೈನಂದಿನ ಕೇಸ್ ವಾಪಸ್
- ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 1,187 ಕೊರೊನಾ ವೈರಸ್ ಪ್ರಕರಣ
ದಿಲ್ಲಿಯಲ್ಲಿ ಭಾನುವಾರ 3,194 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಮೇ 20ರ ಬಳಿಕ ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಪ್ರಕರಣ ಇದು. ಇದೇ ರೀತಿ ಕೋವಿಡ್ ಕೇಸ್‌ಗಳ ಗಣನೀಯ ಏರಿಕೆ ಮುಂಬಯಿ ಮತ್ತು ಕೋಲ್ಕತಾಗಳಲ್ಲಿಯೂ ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಶನಿವಾರಕ್ಕೆ ಹೋಲಿಸಿದರೆ ಕೋವಿಡ್ ಪ್ರಕರಣಗಳಲ್ಲಿ ಶೇ 33ರಷ್ಟು ಏರಿಕೆಯಾಗಿದೆ. ಭಾನುವಾರ 6,153 ಮಂದಿಗೆ ಸೋಂಕು ಪತ್ತೆಯಾಗಿದೆ.
ಕರುನಾಡಲ್ಲಿ ಕೊರೊನಾ ಸ್ಫೋಟ..! ಭಾನುವಾರ ಒಂದೇ ದಿನ 1,187 ಹೊಸ ಕೇಸ್..!
ಭಾನುವಾರ ಬೆಳಗ್ಗಿನ ವರದಿಯಲ್ಲಿ ದೇಶದಲ್ಲಿ 27 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಒಂದು ದಿನದಲ್ಲಿ ಶೇ 21ರಷ್ಟು ಜಿಗಿತ ಉಂಟಾಗಿತ್ತು. ಸೋಮವಾರ ಈ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಉಂಟಾಗುವುದು ಖಚಿತವಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 11,877 ಹೊಸ ಪ್ರಕರಣಗಳು ದಾಖಲಾಗಿವೆ. ಶನಿವಾರಕ್ಕೆ ಹೋಲಿಸಿದರೆ ಶೇ 29ರಷ್ಟು ಹೆಚ್ಚಳವಾಗಿದೆ. ಮುಂಬಯಿಯಲ್ಲಿ 8,063 ಮಂದಿಗೆ ಸೋಂಕು ತಗುಲಿದೆ. ಹಾಗೆಯೇ ರಾಜ್ಯದಲ್ಲಿ 50 ಹೊಸ ಓಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಇದರಿಂದ ರಾಜ್ಯದ ಒಟ್ಟಾರೆ ಓಮಿಕ್ರಾನ್ ಸಂಖ್ಯೆ 510ಕ್ಕೆ ತಲುಪಿದೆ. ದೇಶದಲ್ಲಿಯೇ ಅತಿ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿದ್ದು, 42,024 ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕದಲ್ಲಿ ಭಾನುವಾರ 1,187 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 30,09,557ಕ್ಕೆ ಏರಿಕೆ ಕಂಡಿದೆ. ಗುಣಮುಖರಾಗಿ 275 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯಾದ್ಯಂತ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 29,60,890ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 10,292ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್..?
ತಮಿಳುನಾಡಿನಲ್ಲಿ 1594 ಹೊಸ ಪ್ರಕರಣ, ಆರು ಸಾವುಗಳು ವರದಿಯಾಗಿವೆ. ಗುಜರಾತ್‌ನಲ್ಲಿ 968 ಹೊಸ ಪ್ರಕರಣ ದಾಖಲಾಗಿವೆ. ಕೇರಳದಲ್ಲಿ 45 ಹೊಸ ಓಮಿಕ್ರಾನ್ ಕೇಸ್ ಹಾಗೂ 2,802 ಕೋವಿಡ್ ಪ್ರಕರಣ ವರದಿಯಾಗಿವೆ.