Karnataka news paper

“ಓಮಿಕ್ರಾನ್ ಸ್ವಾಭಾವಿಕ ಲಸಿಕೆ” ಬೇಜವಾಬ್ದಾರಿ ಜನರಿಂದ ಇಂಥಹ ಅಪಾಯಕಾರಿ ಸಂದೇಶ; ತಜ್ಞರ ಅಸಮಾಧಾನ


The New Indian Express

ನವದೆಹಲಿ: ಓಮಿಕ್ರಾನ್ ಸ್ವಾಭಾವಿಕ ಲಸಿಕೆ ಎಂಬ ಸಂದೇಶವನ್ನು ಹರಡುತ್ತಿರುವವರು ಬೇಜವಾಬ್ದಾರಿ ಜನರು, ಇಂಥಹ ಸಂದೇಶಗಳು ಅಪಾಯಕಾರಿ ಎಂದು ತಜ್ಞರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಓಮಿಕ್ರಾನ್, ಕೋವಿಡ್-19 ಸೋಂಕು ಏರುಗತಿಯಲ್ಲಿರುವ ಮಹಾರಾಷ್ಟ್ರದ ಆರೋಗ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಓಮಿಕ್ರಾನ್ ಬಗ್ಗೆ ಮಾತನಾಡಿ, ಸಾಂಕ್ರಾಮಿಕದಿಂದ ಎಂಡಮಿಕ್ ಹಂತಕ್ಕೆ ಕೋವಿಡ್-19 ನ್ನು ಇಳಿಸುವುದಕ್ಕೆ ಓಮಿಕ್ರಾನ್ ಸಹಕಾರಿಯಾಗಿದೆ ಆದ್ದರಿಂದ ಇದು ಸ್ವಾಭಾವಿಕ ಲಸಿಕೆಯಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಇಂತಹ ಸಂದೇಶಗಳು ಹಲವೆಡೆ ಹರಿದಾಡುತ್ತಿದ್ದು,  ಇದಕ್ಕೆ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ದೀರ್ಘಾವಧಿಯಿಂದ ಕಾಡುತ್ತಿರುವ ಕೋವಿಡ್-19 ಬಗ್ಗೆ ಸ್ವಲ್ಪವಷ್ಟೇ ಅರ್ಥವಾಗಿದೆ. ಇನ್ನು ಕೋವಿಡ್-19 ನ ರೂಪಾಂತರಿ ಓಮಿಕ್ರಾನ್ ಸೌಮ್ಯ ರೋಗಲಕ್ಷಣಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದು, ಈ ಸೋಂಕು ತಗುಲಿದರೂ ಸಾವಿನ ಸಂಖ್ಯೆ ಕಡಿಮೆ ಇದೆ, ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಗಳೂ ಕಡಿಮೆಯಾಗುತ್ತಿದೆ ಆದ್ದರಿಂದ ಓಮಿಕ್ರಾನ್ ನ್ನು ಎಂಡಮಿಕ್ ಹಂತಕ್ಕೆ ಕೋವಿಡ್-19 ನ್ನು ಇಳಿಸುವುದಕ್ಕೆ  ಸಹಕಾರಿಯಾಗಿರುವ ಸ್ವಾಭಾವಿಕ ಲಸಿಕೆ ಎಂದೇ ಸುದ್ದಿ ಹಬ್ಬಿಸಲಾಗುತ್ತಿದೆ. 

ಖ್ಯಾತ ವೈರಾಲಜಿಸ್ಟ್ ಶಾಹೀದ್ ಜಮೀಲ್ ಈ ಅಭಿಪ್ರಾಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಓಮಿಕ್ರಾನ್ ನ್ನು ಸ್ವಾಭಾವಿಕ ಲಸಿಕೆ ಎಂದು ಭಾವಿಸುವುದು ಅತ್ಯಂತ ಅಪಾಯಕಾರಿ ಹಾಗೂ ಬೇಜವಾಬ್ದಾರಿತನ ಎಂದು ಎಚ್ಚರಿಸಿದ್ದಾರೆ. 

ಈ ರೀತಿ ಭಾವಿಸುವುದರಿಂದ ಕೊರೋನಾದೆಡೆಗೆ ನಿರ್ಲಕ್ಷ್ಯತೆ ಹೆಚ್ಚಾಗುತ್ತದೆ, ಹೆಚ್ಚು ಜಾಗರೂಕರಾಗಿರುವುದನ್ನು ಬಿಡುತ್ತೇವೆ, ಎಂದು ಅವರು ಎಚ್ಚರಿಸಿದ್ದಾರೆ. 

ಭಾರತೀಯ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಒಕ್ಕೂಟ (ಐಎನ್ಎಎಸ್ಎಸಿಒಜಿ) ದ ಮಾಜಿ ಮುಖ್ಯಸ್ಥರಾಗಿರುವ ಜಮೀಲ್ ಅಪೌಷ್ಟಿಕತೆ, ವಾಯು ಮಾಲಿನ್ಯ ಮತ್ತು ಮಧುಮೇಹ ಹೆಚ್ಚಾಗಿರುವ ಭಾರತದಲ್ಲಿ, ಹೆಚ್ಚು ಗೊತ್ತಿಲ್ಲದ ವೈರಾಣುವಿನ ಬಗ್ಗೆ ನಿರ್ಲಕ್ಷ್ಯ ಉಂಟಾಗುವಂತೆ ಮಾಡುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ ಎಂದು ಎಚ್ಚರಿಸಿದ್ದಾರೆ. 

ಪಬ್ಲಿಕ್ ಹೆಲ್ತ್ ಫೌಂಡೇಷನ್ ನ ಆಫ್ ಇಂಡಿಯಾದಲ್ಲಿ ಲೈಫ್‌ಕೋರ್ಸ್ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರೊಫೆಸರ್ ಗಿರಿಧರ್ ಆರ್ ಬಾಬು ಈ ಬಗ್ಗೆ ಮಾತನಾಡಿದ್ದು, ಓಮಿಕ್ರಾನ್ ಎಷ್ಟೇ ಕಡಿಮೆ ತೀವ್ರತೆ ಹೊಂದಿದ್ದರು ಅದನ್ನು ಲಸಿಕೆಯ ರೀತಿಯಲ್ಲಿ ಭಾವಿಸಲು ಸಾಧ್ಯವಿಲ್ಲ. ಈ ರೂಪಾಂತರಿಯಿಂದ ಆಸ್ಪತ್ರೆ ಸೇರುವ ತುರ್ತು ಪರಿಸ್ಥಿತಿ ಹಾಗೂ ಸಾವುಗಳು ಸಂಭವಿಸುತ್ತಿದೆ. ಜನರು ಓಮಿಕ್ರಾನ್ ಬಗ್ಗೆ ದಾರಿ ತಪ್ಪಿಸುವ ಮಾಹಿತಿಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. 



Read more