Karnataka news paper

ಹೊಸ ವರ್ಷಕ್ಕೆ ರಾಜ್ಯದಲ್ಲಿ ಮತ್ತೆ ವರ್ಷಧಾರೆ, ಜನವರಿ 2ರವರೆಗೆ ಮಳೆ ಸಾಧ್ಯತೆ


ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನೆರೆಯ ತಮಿಳುನಾಡಿನಲ್ಲಿ ವರುಣ ಆರ್ಭಟಿಸುತ್ತಿದ್ದು, ರಾಜ್ಯದ ಹಲವೆಡೆಯೂ ಜ. 1 ಮತ್ತು 2 ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಕೊಡಗು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎರಡು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಎಂದಿನಂತೆ ಒಣ ಹವೆ ಮುಂದುವರಿಯಲಿದೆ. ಶುಕ್ರವಾರ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಚಿಕ್ಕಮಗಳೂರು ಸೇರಿ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯೂ ಆಗಿದೆ.

ವರ್ಷಾಂತ್ಯದ ಮಹಾ ಮಳೆಗೆ ಮತ್ತೆ ಮುಳುಗಿತು ಚೆನ್ನೈ: ನಾಲ್ಕು ಜಿಲ್ಲೆಗಳಲ್ಲಿ ಕೆಂಪು ಅಲರ್ಟ್‌ ಘೋಷಣೆ

ನೆರೆಯ ತಮಿಳುನಾಡಿನಲ್ಲಿ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಮಳೆಯಾಗಲಿದೆ. ತಮಿಳುನಾಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತುಸು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ತುಂತುರು ಮಳೆ ರೈತರ ಪರದಾಟ

ಚನ್ನರಾಯಪಟ್ಟಣ: ಶುಕ್ರವಾರ ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನ 3 ಗಂಟೆ ನಂತರ ತುಂತುರು ಮಳೆಯಿಂದ ರೈತರು ಹೊಲಗಳಲ್ಲಿ ಇರುವ ಹುಲ್ಲನ್ನು ಶೇಖರಿಸಲು ಪರದಾಡುವ ಸ್ಥಿತಿ ಉಂಟಾಗಿತ್ತು. ದೇವನಹಳ್ಳಿ ತಾಲ್ಲೂಕು ನಲ್ಲೂರು ಸುತ್ತಮುತ್ತ ತುಂತುರು ಮಳೆ ಪ್ರಾರಂಭಿಸಿದಾಗ ಹೊಲಗಳಲ್ಲಿ ಕಟಾವು ಮಾಡಿ ಬಿಟ್ಟಿದ್ದ ಹುಲ್ಲನ್ನು ದಿಢೀರ್‌ ಮೋಡ ಕಂಡು ಬಂದ ಹಿನ್ನೆಲೆಯಲ್ಲಿ ಶೇಖರಿಸಿ ಪ್ಲಾಸ್ಟಿಕ್‌ ಪೇಪರ್‌ನಿಂದ ಹೊದಿಸುತ್ತಿರುವುದು ಕಂಡು ಬಂದಿತ್ತು.

ಮಳೆ ಆರ್ಭಟಕ್ಕೆ ಮತ್ತೆ ತತ್ತರಿಸಿದ ಚೆನ್ನೈ: ಬೆಂಗಳೂರಲ್ಲಿಯೂ ಮೋಡ ಕವಿದ ವಾತಾವರಣ
ಮತ್ತೆ ಕವಿದ ಮೋಡ, ಒಕ್ಕಣೆಗೆ ಹಿನ್ನಡೆ

ಚಿಕ್ಕಬಳ್ಳಾಪುರ: 2022 ನೂತನ ವರ್ಷದ ಮುನ್ನ ದಿನ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಉಂಟಾಗಿ, ಆಗಾಗ ಉದುರುತ್ತಿರುವ ತುಂತುರು ಮಳೆ ಹನಿಯಿಂದ ರೈತಾಪಿ ವರ್ಗಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಬಹುತೇಕ ಕಡೆ ರೈತರು ರಾಗಿ ಕಟಾವು ಮಾಡಿ ಒಕ್ಕಣೆ ಕಾರ್ಯದಲ್ಲಿ ತೊಡಗಿದ್ದಾರೆ. ಶುಕ್ರವಾರ ಜಿಲ್ಲೆಯಲ್ಲಿ ಮತ್ತೆ ಮೋಡ ಕವಿದ ವಾತಾವರಣ ಕಂಡುಬಂದಿದ್ದರಿಂದ ರೈತರ ಒಕ್ಕಣೆ ಕಾರ್ಯಕ್ಕೆ ಹಿನ್ನಡೆ ಉಂಟಾಯಿತು. ಈಗಾಗಲೇ ಮಳೆಯಿಂದ ಅಪಾರ ನಷ್ಟ ಅನುಭವಿಸಿರುವ ರೈತಾಪಿ ವರ್ಗ, ಅಳಿದುಳಿದ ಬೆಳೆಗಳನ್ನು ರಕ್ಷಿಸಿಕೊಂಡು ಒಕ್ಕಣೆ ಮಾಡುತ್ತಿದ್ದರು. ಈಗ ಅದಕ್ಕೂ ಸಮಸ್ಯೆ ಎದುರಿಸುವಂತಾಗಿದೆ.

ತಮಿಳುನಾಡಿನಲ್ಲಿಇನ್ನೂ ನಾಲ್ಕು ದಿನ ಭಾರಿ ಮಳೆ

ಚೆನ್ನೈ: ಅಕಾಲಿಕ ಮಳೆಗೆ ತಮಿಳುನಾಡಿನ ಹಲವು ಭಾಗಗಳು ತತ್ತರಿಸಿದ್ದು, ಇನ್ನೂ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ‘‘ಶುಕ್ರವಾರವೂ ಭಾರಿ ಸುರಿದಿದ್ದು, ಜನವರಿ 4ರವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ,’’ ಎಂದು ಮಾಹಿತಿ ನೀಡಿದೆ.

‘‘ತಮಿಳುನಾಡು ಹಾಗೂ ಪುದುಚೇರಿಗಳ ಹಲವೆಡೆ ಭಾರಿ ಮಳೆಯಾಗುತ್ತಿದೆ. ಇನ್ನೂ ನಾಲ್ಕು ದಿನ ಇದೇ ಪರಿಸ್ಥಿತಿ ಇರಲಿದೆ. ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌, ತಿರುವಳ್ಳುರ್‌, ಚೆನ್ನೈನಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ,’’ ಎಂದು ಚೆನ್ನೈ ಹವಾಮಾನ ಇಲಾಖೆ ನಿರ್ದೇಶಕ ಪುವೈರಸನ್‌ ತಿಳಿಸಿದ್ದಾರೆ.

‘‘ಕನ್ಯಾಕುಮಾರಿಯತ್ತ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಚಂಡಮಾರುತ್ತ ಬೀಸುತ್ತಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಜ.4ರವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಸಹ ಸೂಚಿಸಲಾಗಿದೆ. ಅದರಲ್ಲೂ, ಚೆನ್ನೈ, ವಿಲ್ಲುಪುರಂ, ಕಡಲೂರು, ಕಾಂಚಿಪುರಂ ಹಾಗೂ ತಿರುವಳ್ಳುರ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ,’’ ಎಂದು ವಿವರಿಸಿದರು. ಚೆನ್ನೈನಲ್ಲಂತೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಜನಜೀವನಕ್ಕೆ ಪರದಾಡುವಂತಾಗಿದೆ. ಕೆಲ ಪ್ರದೇಶಗಳಲ್ಲಂತೂ ಜನ ಹೊರಗೆ ಬರದಂತಾಗಿದ್ದು, ಹೊಸ ವರ್ಷಾಚರಣೆಯೂ ಮಾಡದಂತಾಗಿದೆ. ಎರಡು ದಿನದಿಂದ ಭಾರಿ ಮಳೆಯಾಗುತ್ತಿದ್ದು, ತಮಿಳುನಾಡಿನಲ್ಲಿ ಮಳೆ ಸಂಬಂಧಿತ ಅವಘಡಗಳಿಂದಾಗಿ ಗುರುವಾರ ಮೂವರು ಮೃತಪಟ್ಟಿದ್ದಾರೆ.



Read more