The New Indian Express
ಬೆಂಗಳೂರು: ರಾಜ್ಯದಲ್ಲಿ ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು. ಕೋವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಲ್ಲಿ ಸೌಮ್ಯ ಪ್ರಮಾಣದ ಅಡ್ಡ ಪರಿಣಾಮಗಳು ಕಂಡು ಬರುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದಾರೆ.
ವಯಸ್ಕರಲ್ಲಿ ಕಂಡು ಬರುತ್ತಿರುವಂತೆಯೇ ಮಕ್ಕಳಲ್ಲೂ ಕೂಡ ಲಸಿಕೆ ಪಡೆದ ಜಾಗದಲ್ಲಿ ನೋವು, ಸೌಮ್ಯ ಜ್ವರ, ದೇಹದ ನೋವು, ಊತದಂತಹ ಅಡ್ಡಪರಿಣಾಮಗಳು ಕಂಡು ಬರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 15-18 ವರ್ಷ ವಯಸ್ಸಿನವರಿಗೆ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಲಸಿಕೆ ನೀಡಿಕೆ: ಸಿಎಂ ಬೊಮ್ಮಾಯಿ
ಯಾವುದೇ ಲಸಿಕೆ ಪಡೆದರೂ ಸಣ್ಣಪುಟ್ಟ ಅಡ್ಡ ಪರಿಣಾಮಗಳು ಸಾಮಾನ್ಯವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಮಕ್ಕಳ ತಜ್ಞರು ಎಂಆರ್ (ದಡಾರ ರುಬೆಲ್ಲಾ) ಲಸಿಕೆ ಅಭಿಯಾನವನ್ನು ಆರಂಭಿಸಿದಾಗಲೂ ಕೆಲವು ಅಡ್ಡಪರಿಣಾಮಗಳು ಎದುರಾಗಿತ್ತು. ಆದ್ದರಿಂದ, ಎಲ್ಲಾ ಆರೋಗ್ಯ ಕಾರ್ಯಕರ್ತರು ಇಂತಹ ಅಭಿಯಾನ ನಡೆಸಲು ತರಬೇತಿ ಪಡೆದಿದ್ದಾರೆ ಮತ್ತು ಸುಸಜ್ಜಿತರಾಗಿದ್ದಾರೆ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ್ ಜಿವಿ ಅವರು ಹೇಳಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಈ ವರೆಗೂ ಚರ್ಮದ ದದ್ದುಗಳು, ಉಸಿರಾಟ ಸಮಸ್ಯೆ, ಕಡಿಮೆ ಬಿಪಿ, ಹೊಟ್ಟೆ ನೋವು, ವಾಂತಿಯಂತಹ ಸಮಸ್ಯೆಗಳು ಕಂಡು ಬಂದಿಲ್ಲ. ಲಸಿಕೆ ಪಡೆದವರ ಆರೋಗ್ಯ ಮೇಲ್ವಿಚಾರಣೆ ಮಾಡಲು ಲಸಿಕೆ ಪಡೆದುಕೊಂಡ ಸ್ಥಳದಲ್ಲಿ 30 ನಿಮಿಷ ಕಾಲ ಇರಿಸಿಕೊಳ್ಳಲಾಗುತ್ತದೆ. ಅಡ್ಡ ಪರಿಣಾಮಗಳು ಕಂಡು ಬಂದು ಇಂಟ್ರಾಮಸ್ಕುಲರ್ ಅಡ್ರಿನಾಲಿನ್ ಇಂಜೆಕ್ಷನ್ ನೀಡಿರುವ ಪ್ರಕರಣಗಳು ಅತ್ಯಂತ ಕಡಿಮೆಯಾಗಿದೆ.
ಇದನ್ನೂ ಓದಿ: ಮಕ್ಕಳಿಗೆ ಸದ್ಯಕ್ಕೆ ಕೋವಿಡ್-19 ಲಸಿಕೆ ಅಗತ್ಯವಿಲ್ಲ: ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮಾಹಿತಿ
ಲಸಿಕೆ ಪಡೆದಾದ “ಜ್ವರ ಮತ್ತು ದೇಹದ ನೋವು ಸಾಮಾನ್ಯವಾಗಿರುತ್ತದೆ. ಲಸಿಕೆ ಪರಿಣಾಮಕಾರಿತ್ವ ಮತ್ತು ಅಡ್ಡಪರಿಣಾಮಗಳ ಕುರಿತು ಸರ್ಕಾರವು ಸಾಕಷ್ಟು ವರದಿಯನ್ನು ಪ್ರಕಟಿಸಿಲ್ಲ, ಆದರೆ, ಲಸಿಕೆ ಪಡೆದಾಗ ಸೀಮಿತ ಪ್ರಮಾಣದ ಅಡ್ಡಪರಿಣಾಮಗಳು ಸಾಮಾನ್ಯವಾಗಿರುತ್ತದೆ. ಲಸಿಕೆ ಪಡೆದವರಲ್ಲಿ ಇಲ್ಲಿಯವರೆಗೆ ಯಾವುದೇ ಸಾವುಗಳು ಸಂಭವಿಸಿಲ್ಲ. ಇನ್ನು ಮುಂದೆ ಕೂಡ ದೊಡ್ಡ ಪ್ರಮಾಣದ ಸಮಸ್ಯೆಯಾಗುವುದಿಲ್ಲ ಎಂಬ ನಿರೀಕ್ಷೆ ಇದೆ ಎಂದು ಪೀಡಿಯಾಟ್ರಿಕ್ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಸ್ಲೀಪ್ ಮೆಡಿಸಿನ್, ಆಸ್ಟರ್ ಸಿಎಂಐ ಆಸ್ಪತ್ರೆಯ ಸಲಹೆಗಾರ ಡಾ.ಶ್ರೀಕಾಂತ್ ಜೆಟಿ ಅವರು ಹೇಳಿದ್ದಾರೆ.
ಲಸಿಕೆ ಪಡೆದ ಸ್ಥಳದಲ್ಲಿ ನೋವು, ಊತ, ಕೆಂಪು, ತುರಿಕೆ, ತಲೆನೋವು, ಜ್ವರ, ದೇಹದ ನೋವು, ವಾಕರಿಕೆ, ವಾಂತಿ, ದದ್ದುಗಳು ಈ ಪಟ್ಟಿಯಲ್ಲಿದ್ದವು. ಇದಷ್ಟೇ ಅಲ್ಲದೆ, ತೀವ್ರತರ ಅಲರ್ಜಿ ಕೂಡ ಕಾಣಿಸಿಕೊಳ್ಳಬಹುದು ಎಂದು ಹೇಳಿತ್ತು.