ಹೈಲೈಟ್ಸ್:
- ಮಂಜಿನಲ್ಲಿ ಮರೆಯಾದ ಹೆದ್ದಾರಿ
- 9 ವಾಹನಗಳು ಸರಣಿ ಅಪಘಾತದಲ್ಲಿ ಜಖಂ
- ಎನ್‌ಎಚ್48ರಲ್ಲಿ ಐದಾರು ಗಂಟೆ ಟ್ರಾಫಿಕ್ ಜಾಮ್
ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಸೀ ಬರ್ಡ್ ಬಸ್‌ನಲ್ಲಿ ಸಂಚರಿಸುತ್ತಿದ್ದ ಅಭಿಷೇಕ್, ಸೋನಾಕ್ಷಿ, ಶ್ರೀಶೈಲ, ದುರ್ಗಪ್ಪ, ರಾಕಾ ಲಾಮಾಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆ ದಾಖಲಾಗಿದ್ದಾರೆ. ಮೂಕಾಂಬಿಕೆ, ಶಿವಂತ್ ಮೆತೋ, ಖಾನು ಬಿಹೇರ್, ಪುಲ್ಮಿಯ ಲಾಮಾ, ರೇಣಪ್ಪ, ಮಂಜುನಾಥ್, ರಾಕಾ ರಾಮಾರವರ ಕೈ ಕಾಲು, ಮುಖದ ಭಾಗದಲ್ಲಿ ಸಣ್ಣ ಪುಟ್ಟ ಗಾಯವಾಗಿದ್ದು, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಣಿ ಅಪಘಾತಕ್ಕೆ ಒಳಗಾದ ವಾಹನಗಳು ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದವು. ಸೀ ಬರ್ಡ್ ಬಸ್ ಗೋವಾದಿಂದ ಬೆಂಗಳೂರಿಗೆ ಬರುತ್ತಿತ್ತು.
ಅಪಘಾತಕ್ಕೆ ಕಾರಣ: ಗುರುವಾರ ಬೆಳಗ್ಗೆ 6.30ರಲ್ಲಿ ದಟ್ಟವಾದ ಮಂಜು ಕವಿದ ವಾತವಾರಣದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚರಿಸುತ್ತಿದ್ದ ಲಾರಿ ಟಿ. ಬೇಗೂರು ಸಮೀಪ ದಿಢೀರ್ ಬ್ರೇಕ್ ಹಾಕಿದ ಪರಿಣಾಮ, ವೇಗವಾಗಿ ಬರುತ್ತಿದ್ದ ಸೀ ಬರ್ಡ್ ಬಸ್ ಲಾರಿಗೆ ಡಿಕ್ಕಿಯಾಗಿದ್ದು, ಬಸ್ ಹಿಂಭಾಗದಲ್ಲಿ ಬರುತ್ತಿದ್ದ 7 ವಾಹನಗಳು ಅಪಘಾತಕ್ಕೆ ಕಾರಣವಾಗಿದೆ. ಒಟ್ಟಾರೆ 2 ಬಸ್, 4 ಲಾರಿ, 1 ಕಾರು , 2 ಕ್ಯಾಂಟರ್ ವಾಹನಗಳು ಜಖಂ ಆಗಿದ್ದು, ಸೀ ಬರ್ಡ್ ಬಸ್ ಹಾಗೂ ಲಾರಿಯ ಮೇಲೆ ದೂರು ದಾಖಲಾಗಿದೆ ಎಂದು ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ ತಿಳಿಸಿದರು.

ಮಂಜಿನಲ್ಲಿ ಮರೆಯಾದ ಹೆದ್ದಾರಿ: ಗುರುವಾರ ಬೆಳಗ್ಗೆ 6.30ರ ಸಮಯದಲ್ಲಿ ದಟ್ಟವಾದ ಮಂಜು ಆವರಿಸಿದ ಪರಿಣಾಮ ಹೆದ್ದಾರಿಯಲ್ಲಿ ಎದುರಾದ ಅಪಘಾತ ಕಾಣದೇ ಸರಣಿ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಗಾಯಾಳುಗಳನ್ನು ರಕ್ಷಣೆ ಮಾಡಲು ಸಹ ದಟ್ಟ ಮಂಜಿನಿಂದ ಸಮಸ್ಯೆ ಎದುರಾಯಿತು ಎಂದು ಪ್ರತ್ಯಕ್ಷದರ್ಶಿ ನಂದನ್ ತಿಳಿಸಿದ್ದಾರೆ.
ಸ್ಥಳೀಯರ ಮಾನವೀಯತೆ: ಸರಣಿ ಅಪಘಾತದ ಸುದ್ದಿ ಕೇಳುತ್ತಿದಂತೆಯೇ ಟಿ. ಬೇಗೂರಿನ ಸ್ಥಳೀಯ ಯುವಕರು ಹಾಗೂ ನಿವಾಸಿಗಳು ತಕ್ಷಣ ಸ್ಥಳಕ್ಕೆ ಬಂದು ವಾಹನಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಣೆ ಮಾಡಿ ಅಂಬ್ಯುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಟ್ರಾಫಿಕ್ ಜಾಮ್: ರಾಷ್ಟ್ರೀಯ ಹೆದ್ದಾರಿಯಲ್ಲಿ 9 ವಾಹನಗಳ ನಡುವೆ ಸರಣಿ ಅಪಘಾತ ಎದುರಾದ ಪರಿಣಾಮ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಎದುರಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣ ಮಾಡಲು ಹರಸಾಹಸ ಪಟ್ಟರು. ಐದಾರು ಗಂಟೆಗಳ ಕಾಲ ನಿಯಂತ್ರಣಕ್ಕೆ ಬಾರದೆ ನೂರಾರು ವಾಹನಗಳು ಹಳ್ಳಿ ರಸ್ತೆಗಳ ಮೂಲಕ ಸಂಚರಿಸಿದವು.
ಈರುಳ್ಳಿಗೆ ಮುಗಿಬಿದ್ದ ಜನರು: ಈರುಳ್ಳಿ ಲಾರಿಯೂ ಸಹ ಸರಣಿ ಅಪಘಾತದಲ್ಲಿ ಸಿಲುಕಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ನೂರಾರು ಚೀಲ ಈರುಳ್ಳಿ ಚೆಲ್ಲಾಡುತ್ತಿದ್ದವು. ಅಪಘಾತ ನಡೆದ ಕೆಲ ಗಂಟೆಗಳ ನಂತರ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಈರುಳ್ಳಿಗಾಗಿ ಮುಗಿಬಿದ್ದ ತೆಗೆದುಕೊಂಡರು ಹೋದರು.