Karnataka news paper

ಓಮೈಕ್ರಾನ್‌, ಡೆಲ್ಟಾ ಜೊತೆಯಾಗಿ ಪ್ರಕರಣಗಳ ‘ಸುನಾಮಿ’: ಡಬ್ಲ್ಯುಎಚ್‌ಒ ಎಚ್ಚರಿಕೆ


Prajavani

ಜಿನಿವಾ: ಕ್ಷಿಪ್ರವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಹಾಗೂ ಹಲವು ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿದ್ದ ಡೆಲ್ಟಾ ರೂಪಾಂತರ ತಳಿ ಜೊತೆಯಾಗಿ ಕೋವಿಡ್‌ ‘ಪ್ರಕರಣಗಳ ಸುನಾಮಿ’ ಉಂಟು ಮಾಡಬಹುದು. ಆ ಮೂಲಕ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುವಂತಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.

ಓಮೈಕ್ರಾನ್‌ ಅತ್ಯಂತ ವೇಗವಾಗಿ ಹರಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್‌, ‘ಡೆಲ್ಟಾ ತಳಿಯಷ್ಟೇ ಅವಧಿಗೆ ಓಮೈಕ್ರಾನ್‌ ಸಹ ವ್ಯಾಪಿಸಿದರೆ ಪ್ರಕರಣಗಳ ಸುನಾಮಿಯೇ ಉಂಟಾಗಲಿದೆ. ಇದು ಆರೋಗ್ಯ ಕಾರ್ಯಕರ್ತರ ಮೇಲೆ ಅತಿಯಾದ ಒತ್ತಡ ಮುಂದುವರಿಸಲಿದ್ದು, ಆರೋಗ್ಯ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡಬಹುದು. ಅದರಿಂದ ಮತ್ತೆ ಜೀವಗಳು ಹಾಗೂ ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ’ ಎಂದಿದ್ದಾರೆ.

ಕೋವಿಡ್‌ ದೃಢಪಟ್ಟವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯ ಜೊತೆಗೆ ಆರೋಗ್ಯ ಕಾರ್ಯಕರ್ತರು ಸಹ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಓಮೈಕ್ರಾನ್‌ ಹೆಚ್ಚು ಅಪಾಯಕಾರಿಯಲ್ಲ, ಕಡಿಮೆ ತೀವ್ರತೆಯ ಪರಿಣಾಮ ಮಾತ್ರ ಉಂಟು ಮಾಡಬಹುದು’ ಎಂಬ ಸಂದೇಶಗಳನ್ನು ಹರಡುವ ಬಗೆಗೂ ಟೆಡ್ರೋಸ್‌ ಪ್ರತಿಕ್ರಿಯಿಸಿದ್ದು, ‘ಅದು ಅಪಾಯಕಾರಿಯೂ ಆಗಬಹುದು. ನಾವು ಆ ಬಗೆಗೂ ಎಚ್ಚರ ವಹಿಸಬೇಕಿದೆ’ ಎಂದಿದ್ದಾರೆ.

ಇದನ್ನೂ ಓದಿ:

ಡಬ್ಲ್ಯುಎಚ್‌ಒ ಆರೋಗ್ಯ ತುರ್ತು ಕಾರ್ಯಕ್ರಮಗಳ ಕಾರ್ಯನಿರ್ವಾಹಕ ನಿರ್ದೇಶಕ ಮೈಕ್‌ ರಯಾನ್‌ ಪ್ರಕಾರ, ‘ಓಮೈಕ್ರಾನ್‌ ಕಡಿಮೆ ದಿನಗಳವರೆಗೆ ಉಳಿಯುತ್ತದೆ, ಹೆಚ್ಚು ವೇಗವಾಗಿ ಹರಡುತ್ತದೆ, ಆರೋಗ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದಾದರೂ ಯುವ ಜನರಲ್ಲಿ ಈ ತಳಿಯ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹಿರಿಯ ವ್ಯಕ್ತಿಗಳಲ್ಲಿ ಲಸಿಕೆಯು ಓಮೈಕ್ರಾನ್‌ ವಿರುದ್ಧ ಪರಿಣಾಮಕಾರಿಯಾಗಿ ವರ್ತಿಸಬಹುದೇ ಎಂಬುದನ್ನು ತಿಳಿಯಬೇಕಿದೆ’ ಎಂದು ಹೇಳಿದ್ದಾರೆ.

ಎರಡೂ ರೂಪಾಂತರ ತಳಿಗಳು ಸಾಂಕ್ರಾಮಿಕವಾಗುವುದನ್ನು ನಿಯಂತ್ರಿಸುವುದು ಈಗ ಪ್ರಮುಖವಾಗಿದೆ ಎಂದು ರಯಾನ್‌ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:



Read more from source