
ಸೋಮು ವೀರರಾಜು
ಹೈದರಾಬಾದ್: 2024ರ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 50 ರೂಪಾಯಿಗೆ ಮದ್ಯ ಪೂರೈಕೆ ಮಾಡಲಾಗುವುದು ಮತ್ತು ಪಕ್ಷ ಒಂದು ಕೋಟಿ ಮತಗಳನ್ನು ಗಳಿಸಿದರೆ ರಾಜ್ಯದ ಜನರಿಗೆ 70 ರೂ.ಗೆ ಮದ್ಯ ನೀಡಲಾಗುವುದು ಎಂದು ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಭರವಸೆ ನೀಡಿದ್ದಾರೆ.
ವಿಜಯವಾಡದಲ್ಲಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೀರರಾಜು, ರಾಜ್ಯದಲ್ಲಿ ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಆದರೆ ಜನಪ್ರಿಯ ಬ್ರಾಂಡ್‍ಗಳು ಮಾತ್ರ ರಾಜ್ಯದಲ್ಲಿ ಲಭ್ಯವಿಲ್ಲ ಎಂದು ಆರೋಪಿಸಿದರು.
ಸ್ಪೆಷಲ್ ಸ್ಟೇಟಸ್, ಗವರ್ನರ್ಸ್ ಮೆಡಲ್ ಎಂಬ ಲೇಬಲ್‍ಗಳ ಅಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದರೆ ಬ್ರಾಂಡೆಡ್ ಮದ್ಯ ಮಾರಾಟ ಮಾಡುತ್ತಿಲ್ಲ. ಮದ್ಯ ನಿಷೇಧ ಎಂದು ಹೇಳಿದರೂ ಬ್ರಾಂಡಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರ ನಕಲಿ ಮದ್ಯ ಉತ್ಪಾದಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜನರ ರಕ್ತ ಕುಡಿಯುತ್ತಿದೆ. ಪ್ರತಿ ತಿಂಗಳು ಒಬ್ಬ ವ್ಯಕ್ತಿ ಮದ್ಯಕ್ಕೆ 12,000 ರೂ. ಖರ್ಚು ಮಾಡುತ್ತಿದ್ದಾರೆ. ಈ ಹಣವನ್ನು ಸರ್ಕಾರ ಕಲ್ಯಾಣ ಯೋಜನೆಗಳ ನೆಪದಲ್ಲಿ ವಾಪಸು ನೀಡುತ್ತಿದೆ ಎಂದರು.
ಬ್ರಾಂಡ್‍ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣ ರಾಜ್ಯದಲ್ಲಿ ಪ್ರೀಮಿಯಂನಲ್ಲಿ ಮದ್ಯ ಮಾರಾಟವಾಗುತ್ತಿದೆ. ಇತ್ತೀಚೆಗೆ, ರಾಜ್ಯ ಸರ್ಕಾರವು ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದೆ. ಆದರೆ ‘ವಿಶೇಷ ಮಾರ್ಜಿನ್’ ಸೇರ್ಪಡೆಯೊಂದಿಗೆ ಎಂಆರ್‍ಪಿಗಳು ಬದಲಾಗದೆ ಇರುವುದರಿಂದ ಪ್ರಯೋಜನೆಯನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂದು ಹೇಳಿದರು.