ಹೈಲೈಟ್ಸ್:
- ಸತತ ಎರಡನೇ ದಿನ 1 ಮಿಲಿಯನ್‌ಗೂ ಅಧಿಕ ಕೋವಿಡ್ ಪ್ರಕರಣಗಳು
- ಅಮೆರಿಕದಲ್ಲಿಯೇ 5.12 ಲಕ್ಷ ಹೊಸ ಕೊರೊನಾ ವೈರಸ್ ಪ್ರಕರಣ ವರದಿ
- ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಕೋವಿಡ್ ಕೇಸ್‌ಗಳು
- ಭಾರತದಲ್ಲಿ ಬುಧವಾರ ಕೋವಿಡ್ ಪ್ರಕರಣಗಳಲ್ಲಿ ಶೇ 45ರಷ್ಟು ಏರಿಕೆ
ಜಾಗತಿಕ ಕೋವಿಡ್ 19 ಪ್ರಕರಣಗಳು ಸೋಮವಾರ ಮೊದಲ ಬಾರಿಗೆ ಒಂದು ಮಿಲಿಯನ್ (ಹತ್ತು ಲಕ್ಷ) ಗಡಿ ದಾಟಿತ್ತು. ಜಗತ್ತಿನಾದ್ಯಂತ 14 ಲಕ್ಷಕ್ಕೂ ಅಧಿಕ ಕೊರೊನಾ ವೈರಸ್ ಕೇಸ್‌ಗಳು ವರದಿಯಾಗಿದ್ದವು. ಮಂಗಳವಾರ 13.04 ಲಕ್ಷ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಟರ್ಕಿಯಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ಸಂದರ್ಭದ ಒಟ್ಟಾರೆ ಪ್ರಕರಣಗಳ ದಾಖಲೆಯನ್ನು ಇದು ಅಳಿಸಿಹಾಕಿದೆ.
ಅಮೆರಿಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 5.12 ಲಕ್ಷ ಪ್ರಕರಣಗಳು ಅಮೆರಿಕ ಒಂದರಲ್ಲಿಯೇ ವರದಿಯಾಗಿದೆ. ಕ್ಯಾಲಿಫೋರ್ನಿಯಾ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 86 ಸಾವಿರ ಪ್ರಕರಣಗಳು ವರದಿಯಾಗಿವೆ.
ಬ್ರಿಟನ್‌ನಲ್ಲಿ ಸುಮಾರು 1.30 ಲಕ್ಷ ಹೊಸ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 1.29 ಲಕ್ಷ ಪ್ರಕರಣಗಳು ಲಂಡನ್ ಮತ್ತು ಕಾರ್ಡಿಫ್‌ಗಳಲ್ಲಿ ದಾಖಲಾಗಿವೆ.
ಆಸ್ಟ್ರೇಲಿಯಾದಲ್ಲಿ ಕೂಡ ಓಮಿಕ್ರಾನ್ ಸ್ಫೋಟಗೊಂಡಿದೆ. ಇದರಿಂದ ದಾಖಲೆಯ ಆಸ್ಪತ್ರೆ ದಾಖಲಾತಿ ಉಂಟಾಗಿದೆ. ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್‌ನ ಸುತ್ತಮುತ್ತ ಸೋಮವಾರ 6,000 ಇದ್ದ ಪ್ರಕರಣಗಳು, ಮಂಗಳವಾರ 11,000ಕ್ಕೆ ಜಿಗಿದಿವೆ. ವಿಕ್ಟೋರಿಯಾ ರಾಜ್ಯದಲ್ಲಿ ಕೂಡ 3,700 ಪ್ರಕರಣಗಳು ವರದಿಯಾಗಿವೆ.
ಚೀನಾ ಈಗಾಗಲೇ ಕ್ಸಿಯಾನ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಿದೆ. ಇಲ್ಲಿನ ಸುಮಾರು 13 ಮಿಲಿಯನ್ ಜನರು ತಮ್ಮ ಮನೆಗಳಿಂದ ಒಂದು ವಾರ ಹೊರಗೆ ಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಕ್ಸಿಯಾನ್‌ನಲ್ಲಿ 151 ಸ್ಥಳೀಯವಾಗಿ ಹರಡಿದ ಸೋಂಕಿನ ಪ್ರಕರಣಗಳು ಮಂಗಳವಾರ ವರದಿಯಾಗಿವೆ. ಡಿ. 9 ರಿಂದ 28ರ ಅವಧಿಯಲ್ಲಿ ಸುಮಾರು 1,000 ಪ್ರಕರಣಗಳು ದಾಖಲಾಗಿವೆ. ಆದರೆ ಓಮಿಕ್ರಾಮ್ ತಳಿ ಸೋಂಕಿನ ಕೇಸ್ ವರದಿಯಾಗಿಲ್ಲ.
ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 1.79 ಲಕ್ಷ ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಎರಡು ದಿನ ವರದಿಯಾಗಿರುವ ಕೊರೊನಾ ವೈರಸ್ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಕಳವಳ ಹೆಚ್ಚಿಸಿದೆ.
ಭಾರತದಲ್ಲಿ ಪ್ರಕರಣಗಳ ಏರಿಕೆ
ಭಾರತದಲ್ಲಿ ಬುಧವಾರ ಒಂದೇ ದಿನ ಕೋವಿಡ್ ಪ್ರಕರಣಗಳಲ್ಲಿ ಶೇ 45ರಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 9,195 ಪ್ರಕರಣಗಳು ವರದಿಯಾಗಿವೆ. ಈವರೆಗೂ 781 ಓಮಿಕ್ರಾನ್ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಇವುಗಳಲ್ಲಿ 241 ಮಂದಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಭಾರತದ ಒಟ್ಟಾರೆ ಕೊರೊನಾ ವೈರಸ್ ಕೇಸ್‌ಗಳಲ್ಲಿ ಗಮನಾರ್ಹ ಇಳಿಕೆಯಾಗಿತ್ತು. ಮಂಗಳವಾರ 6,358 ಸೋಂಕಿತರು ಪತ್ತೆಯಾಗಿದ್ದರು.