Karnataka news paper

ನಿರಾಣಿ, ಈಶ್ವರಪ್ಪಗೆ ಅರುಣ್‌ ಸಿಂಗ್‌ ಕಿವಿಮಾತು?


ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ, ಸಚಿವರಾದ ಮುರುಗೇಶ ನಿರಾಣಿ ಹಾಗೂ ಕೆ.ಎಸ್‌. ಈಶ್ವರಪ್ಪ ಅವರು ಪ್ರತ್ಯೇಕ ಸಭೆ ನಡೆಸುವ ಅವಶ್ಯಕತೆ ಏನಿತ್ತು? ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌, ಇಬ್ಬರನ್ನು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು ಎನ್ನಲಾಗಿದೆ.

ಪಕ್ಷದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಅವರು, ‘ವಿರೋಧ ಪಕ್ಷದವರಿಗೆ ನೀವೇ ಅಸ್ತ್ರ ಕೊಡುತ್ತಿದ್ದೀರಿ. ಪ್ರತಿಯೊಬ್ಬರ ಚಲನವಲನವನ್ನು ವರಿಷ್ಠರು ಗಮನಿಸುತ್ತಿದ್ದಾರೆ ಎಂಬುದು ನೆನಪಿರಲಿ’ ಎಂದು ಅವರು ಎಚ್ಚರಿಸಿದ್ದಾರೆ.

‘ಪಕ್ಷಕ್ಕೆ ಮುಜುಗುರ ತರುವಂತಹ ಹೇಳಿಕೆಗಳನ್ನು ಮಾಧ್ಯಮಗಳಿಗೆ ಹೇಳಕೂಡದು ಎಂದ ಅವರು, ಪಕ್ಷ ಬಿಟ್ಟು ಹೋಗುವವರಿಗೆ ಯಾವುದೇ ಅಧಿಕಾರ ನೀಡಬೇಡಿ ಎಂದು ಮುಖ್ಯಮಂತ್ರಿಗೆ ಸೂಚಿಸಿದರು’ ಎಂದು ತಿಳಿದು ಬಂದಿದೆ.

‘ಬೆಳಗಾವಿ ಸೋಲು ಸಹಿಸಲು ಸಾಧ್ಯವಿಲ್ಲ. ಎಷ್ಟೇ ದೊಡ್ಡವರಿದ್ದರೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಮಂಡ್ಯದಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲಿಸಿದ್ದಕ್ಕೆ ಸಚಿವ ನಾರಾಯಣಗೌಡ ಅವರನ್ನು ಸಿಂಗ್, ತೀವ್ರವಾಗಿ ತರಾಟೆಗೆ ತೆಗೆದುಕೊಂಡರು’ ಎಂದು ಗೊತ್ತಾಗಿದೆ.

‘ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಗೆದ್ದರೆ ಅದು ದಾಖಲೆಯಾಗಲಿದೆ. ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಅಧಿಕಾರಕ್ಕೆ ಬಂದಿದ್ದೇವೆ. ಉತ್ತರಾಖಂಡದಲ್ಲಿ ಕೇವಲ ಆರು ತಿಂಗಳಲ್ಲಿ ಇಬ್ಬರು ಸಿ.ಎಂ. ಬದಲಾಯಿಸಲಾಗಿದೆ. ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲದ ಬಿಕ್ಕಟ್ಟು ಕರ್ನಾಟಕದಲ್ಲಿ ಮಾತ್ರ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.



Read more from source