ಹೈಲೈಟ್ಸ್:
- ಎರಡು ಕೋವಿಡ್ ಲಸಿಕೆ ಹಾಗೂ ಒಂದು ಮಾತ್ರೆಗೆ ಅನುಮೋದನೆ ನೀಡಿದ ಸರ್ಕಾರ
- ಕೊರ್ಬೆವ್ಯಾಕ್ಸ್ ಮತ್ತು ಕೋವೋವ್ಯಾಕ್ಸ್ ಲಸಿಕೆಗಳ ಬಳಕೆಗೆ ಸರ್ಕಾರದಿಂದ ಅನುಮೋದನೆ
- ತುರ್ತು ಸನ್ನಿವೇಶದಲ್ಲಿ ಮಾತ್ರ ಮಾಲ್ನುಪಿರಾವಿರ್ ಆಂಟಿ ವೈರಲ್ ಔಷಧ ಬಳಕೆಗೆ ಒಪ್ಪಿಗೆ
- ಕೊರ್ಬೆವ್ಯಾಕ್ಸ್ ಭಾರತದ ಮೊದಲ ಸ್ವದೇಶಿ ಆರ್ಬಿಡಿ ಪ್ರೋಟೀನ್ ಉಪ ಘಟಕ ಲಸಿಕೆ
ಕೊರ್ಬೆವ್ಯಾಕ್ಸ್ (Corbevax) ಮತ್ತು ಕೋವೊವ್ಯಾಕ್ಸ್ (Covovax) ಭಾರತದಲ್ಲಿ ಅನುಮೋದನೆ ಪಡೆದ ಎರಡು ಹೊಸ ಕೋವಿಡ್ ಲಸಿಕೆಗಳಾಗಿವೆ. ಇವುಗಳ ಜತೆಗೆ ತುರ್ತು ಸಂದರ್ಭಗಳಲ್ಲಿ ಮಾತ್ರವೇ ಬಳಸಬೇಕಾಗಿರುವ ಆಂಟಿ ವೈರಲ್ ಔಷಧ ಮಾಲ್ನುಪಿರಾವಿರ್ (Molnupiravir) ಮಾತ್ರೆಗೆ ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಎರಡು ಮತ್ತು ಮೂರನೇ ಡೋಸ್ ಕೋವಿಡ್ ಲಸಿಕೆ ನಡುವಿನ ಅಂತರ ಎಷ್ಟು?
ಕೊರ್ಬವ್ಯಾಕ್ಸ್ ಭಾರತದ ಮೊದಲ ಸ್ವದೇಶಿ ‘ಆರ್ಬಿಡಿ ಪ್ರೋಟೀನ್ ಉಪ-ಘಟಕ ಲಸಿಕೆ‘ಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಹೈದರಾಬಾದ್ ಮೂಲಕ ಬಯಾಲಾಜಿಕಲ್-ಇ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. “ಇದು ಹ್ಯಾಟ್ರಿಕ್! ಇದು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೂರನೇ ಲಸಿಕೆ” ಎಂದು ಮಾಂಡವೀಯ ಹೇಳಿದ್ದಾರೆ.
ನ್ಯಾನೋಪರ್ಟಿಕಲ್ ಲಸಿಕೆ ಕೋವೋವ್ಯಾಕ್ಸ್ ಅನ್ನು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ. ದೇಶಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಮತ್ತು ವಿದೇಶಗಳಿಗೂ ರಫ್ತಾಗುತ್ತಿರುವ ಕೋವಿಶೀಲ್ಡ್ ಲಸಿಕೆಗಳನ್ನು ಕೂಡ ಇದು ತಯಾರಿಸುತ್ತಿದೆ.
ವೈರಾಣು ನಿರೋಧಕ (Anti-Viral) ಮಾಲ್ನುಪಿರಾವಿರ್ ಔಷಧವನ್ನು ಭಾರತದಲ್ಲಿ 13 ಕಂಪೆನಿಗಳು ಉತ್ಪಾದಿಸುತ್ತಿವೆ. ಕೋವಿಡ್ 19 ಸೋಂಕು ಹೊಂದಿರುವ ವಯಸ್ಕ ರೋಗಿಗಳ ಚಿಕಿತ್ಸೆಗೆ ಮತ್ತು ಕಾಯಿಲೆಯ ಅಧಿಕ ಅಪಾಯದ ಬೆಳವಣಿಗೆಯಂತಹ ತುರ್ತು ಸನ್ನಿವೇಶಗಳಲ್ಲಿ ಮಾತ್ರವೇ ಬಳಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೊರೊನಾ ಲಸಿಕೆ ನೋಂದಣಿ ವೇಳೆ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ..!
ಈ ಹೊಸ ಅನುಮೋದನೆಗಳೊಂದಿಗೆ ಭಾರತದಲ್ಲಿ ಎಂಟು ಕೋವಿಡ್ ಲಸಿಕೆಗಳ ಬಳಕೆಗೆ ಅನುಮತಿ ನೀಡಿದಂತಾಗಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್, ಝೈಕೋವ್-ಡಿ, ಸ್ಪುಟ್ನಿಕ್-V, ಮಾಡೆರ್ನಾ, ಜಾನ್ಸನ್ ಆಂಡ್ ಜಾನ್ಸನ್, ಕೊರ್ಬೆವ್ಯಾಕ್ಸ್ ಮತ್ತು ಕೋವೋವ್ಯಾಕ್ಸ್ ದೇಶದಲ್ಲಿ ಅನುಮೋದನೆ ಪಡೆದ ಲಸಿಕೆಗಳಾಗಿವೆ.