Online Desk
ರಾಮನಗರ: ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಿದರೆ ನಮ್ಮ ಬೆಂಬಲವಿರುವುದಿಲ್ಲ ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ ರೈಡರ್ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 22ರಂದು ಬಿಡುಗಡೆಗೊಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಈ ಸಿನಿಮಾದ ಪ್ರಮೋಷನ್‍ಗಾಗಿ ರಾಮನಗರದ ಶಾನ್ ಚಿತ್ರಮಂದಿರಕ್ಕೆ ನಿಖಿಲ್ ಭೇಟಿ ನೀಡಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 31 ನೇ ತಾರೀಖು ಕರ್ನಾಟಕ ಬಂದ್ ಕರೆ ನೀಡಿರುವುದರಿಂದ ನಮ್ಮ ಚಿತ್ರರಂಗಕ್ಕೆ ಬಹಳ ದೊಡ್ಡ ಹೊಡೆತ ಬೀಳಲಿದೆ. 31ನೇ ದಿನಾಂಕ ಹಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿದ್ದು, ಆ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ನಮಗೆ ಮೊದಲ 3 ದಿನದ ಕಲೆಕ್ಷನ್ ಬಹಳ ಮುಖ್ಯ. ಆದರೆ ಆ ದಿನವೇ ಬಂದ್ ಮಾಡಿದರೆ ತೊಂದರೆಯಾಗುತ್ತದೆ. ಸಾರ್ವಜನಿಕರಿಗೆ ಸಹಾಯವಾಗುತ್ತದೆ ಎಂದರೆ ಬಂದ್ ಮಾಡಲಿ. ಆದರೆ ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಬಾರದು. ಆ ರೀತಿಯ ಬಂದ್‍ಗೆ ಯಾವುದೇ ಕಾರಣಕ್ಕೂ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.