ಮುಂಬೈ: ಸ್ಟ್ಯಾಂಡ್‌ಅಪ್ ಕಮಿಡಿಯನ್ (ವಿಡಂಬನಕಾರ) ವೀರ್ ದಾಸ್ ಅವರು ಅಮೆರಿಕದ ಹೊಸ ಕಾಮಿಡಿ ಸರಣಿಯನ್ನು ನಿರ್ದೇಶಿಸಲಿದ್ದಾರೆ. ಈ ಸರಣಿಯಲ್ಲಿ ವೀರ್ ದಾಸ್ ನಟನೆಯನ್ನೂ ಮಾಡಲಿದ್ದಾರೆ.
‘ಕಂಟ್ರಿ ಈಸ್ಟರ್‘ ಶೀರ್ಷಿಕೆಯನ್ನು ಹೊಂದಿರುವ ಸರಣಿಯು ಫಾಕ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಕುರಿತು ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಅವರು, ‘ಸರಣಿಯ ಸ್ಕ್ರಿಪ್ಟ್‌ನ ಬರವಣಿಗೆ ನಡೆಯುತ್ತಿದೆ. ಇದು ವಿಶಿಷ್ಟ ಹಾಸ್ಯದಿಂದ ಕೂಡಿರಲಿದೆ. ಶೀಘ್ರದಲ್ಲೇ ಸರಣಿಯ ಚಿತ್ರೀಕರಣಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ‘ ಎಂದು ಹೇಳಿದ್ದಾರೆ.
ಜುಡ್ ಅಪಾಟೋವ್ ನಿರ್ದೇಶಿಸುತ್ತಿರುವ ‘ದಿ ಬಬಲ್’ ಎಂಬ ಹಾಲಿವುಡ್ ಚಲನಚಿತ್ರದಲ್ಲಿ ವೀರ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.
ವೀರ್ ದಾಸ್ ಅವರು ‘ಐ ಕಮ್ ಫ್ರಮ್ ಇಂಡಿಯಾ’ ಹೆಸರಿನ 6 ನಿಮಿಷಗಳ ವಿಡಿಯೊವನ್ನು ಯೂಟ್ಯೂಬ್‌ಗೆ ಕಳೆದ ತಿಂಗಳು ಅಪ್‌ಲೋಡ್ ಮಾಡಿದ್ದರು.
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಜಾನ್.ಎಫ್.ಕೆನಡಿ ಸಭಾಂಗಣದಲ್ಲಿ ಅವರು ನೀಡಿದ್ದ ಕಾರ್ಯಕ್ರಮದ ಆಯ್ದ ಭಾಗ ಈ ವಿಡಿಯೊದಲ್ಲಿದೆ.
ರೈತರ ಪ್ರತಿಭಟನೆ, ಕೋವಿಡ್ ವಿರುದ್ಧದ ಹೋರಾಟ, ಮಹಿಳೆಯರಿಗೆ ಗೌರವ ನೀಡುವಲ್ಲಿ ಇರುವ ದ್ವಂದ್ವ ಸೇರಿದಂತೆ ಹಲವು ವಿಚಾರಗಳನ್ನು ಅವರು ತಮ್ಮ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರತಿ ಮಾತಿಗೂ ‘ನಾನು ಎರಡೂ ರೀತಿಯ ಭಾರತದಿಂದ ಬಂದಿದ್ದೇನೆ’ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವರ ಮಾತುಗಳಿಗೆ ಭಾರಿ ಪರ–ವಿರೋಧ ವ್ಯಕ್ತವಾಗುತ್ತು. ಅವರ ವಿರುದ್ಧ ದೂರು ಸಹ ದಾಖಲಾಗಿತ್ತು.