Karnataka news paper

ತಾವು ಹಿಂದುವೇ, ಮುಸ್ಲಿ ಅಥವಾ ಕ್ರಿಶ್ಚಿಯನ್ ಎನ್ನುವುದೇ ರಾಹುಲ್ ಗಾಂಧಿಗೆ ತಿಳಿದಿಲ್ಲ: ಬಿಜೆಪಿ ಶಾಸಕ


ಹೈಲೈಟ್ಸ್‌:

  • ರಾಹುಲ್ ಗಾಂಧಿ ಯಾವ ಧರ್ಮದವರು ಎಂಬ ಬಗ್ಗೆಯೇ ಸಂಶೋಧನೆ ನಡೆಯಬೇಕು
  • ಸ್ವತಃ ರಾಹುಲ್ ಗಾಂಧಿಗೆ ತಾವು ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಎನ್ನುವುದು ತಿಳಿದಿಲ್ಲ
  • ಹಿಂದುತ್ವವು ಧರ್ಮದ ಹೆಸರಿನಲ್ಲಿ ಲೂಟಿ ಮಾಡುತ್ತದೆ ಎಂದು ಟೀಕಿಸಿದ್ದ ರಾಹುಲ್
  • ಹಿಂದುತ್ವವಾದಿಗಳು ಎಲ್ಲ ಭಾರತೀಯರ ಡಿಎನ್‌ಎ ಒಂದೇ ಎಂದುಕೊಂಡಿದ್ದಾರೆ

ಚಂಡಿಗಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ್ದ ‘ಹಿಂದೂ‘ ಮತ್ತು ‘ಹಿಂದುತ್ವವಾದಿ’ ಹೇಳಿಕೆಯನ್ನು ಟೀಕಿಸಿರುವ ಹರ್ಯಾಣ ಬಿಜೆಪಿ ಶಾಸಕ ಅಸೀಮ್ ಗೋಯಲ್, ತಾವು ಯಾರು ಎಂಬುದು ಸ್ವತಃ ರಾಹುಲ್ ಗಾಂಧಿ ಅವರಿಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ‘ರಾಹುಲ್ ಗಾಂಧಿ ಅವರಿಗೆ ಸ್ವತಃ ತಾವು ಹಿಂದೂ ಧರ್ಮದವರೇ, ಮುಸ್ಲಿಂ ಅಥವಾ ಕ್ರೈಸ್ತರೇ ಎನ್ನುವುದೇ ತಿಳಿದಿಲ್ಲ. ಈ ವಿಷಯದ ಬಗ್ಗೆ ಒಂದು ಸಂಶೋಧನೆ ನಡೆಯಬೇಕಿದೆ. ಅವರು ಈ ದೇಶದ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ. ಆದರೆ ಸ್ವತಃ ತಮ್ಮ ಬಗ್ಗೆ ಹಾಗೂ ತಮ್ಮ ಕುಟುಂಬದ ಇತಿಹಾಸ ಮತ್ತು ಭೌಗೋಳಿಕತೆ ಬಗ್ಗೆ ಯೋಚಿಸಲಿ’ ಎಂದು ವ್ಯಂಗ್ಯವಾಡಿದ್ದಾರೆ.
ನಾನೂ ಹಿಂದೂ.. ಆದ್ರೆ ಹಿಂದುತ್ವವಾದಿ ಅಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಅವರು ಕಳೆದ ವಾರ ಹಿಂದೂವಾದ ಮತ್ತು ಹಿಂದುತ್ವದ ನಡುವೆ ಹೋಲಿಕೆ ಮಾಡಿದ್ದರು. ಹಿಂದೂಗಳು ಸತ್ಯದ ಹಾದಿಯಲ್ಲಿ ನಡೆಯುತ್ತಾರೆ. ಆದರೆ ಹಿಂದುತ್ವ ಧರ್ಮದ ವೇಷದಲ್ಲಿ ಲೂಟಿ ಮಾಡುತ್ತದೆ ಎಂದು ಟೀಕಿಸಿದ್ದರು.

ಹಿಂದೂಗಳು ಪ್ರತಿ ವ್ಯಕ್ತಿಯ ಡಿಎನ್‌ಎ ವಿಶಿಷ್ಟವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿ ಹಿಂದುತ್ವವಾದಿಗಳು ಎಲ್ಲ ಭಾರತೀಯರೂ ಒಂದೇ ಡಿಎನ್‌ಎ ಹೊಂದಿದ್ದಾರೆ ಎಂದು ನಂಬುತ್ತಾರೆ ಎಂದು ಹೇಳಿದ್ದರು. ಹಿಂದೂಗಳು ಸಹಿಷ್ಣುಗಳಾದರೆ, ಹಿಂದುತ್ವವು ಅಧಿಕಾರಕ್ಕಾಗಿ ಹಪಹಪಿಸುತ್ತದೆ ಎಂದಿದ್ದರು.
ಹರಿದ್ವಾರ ಸಮ್ಮೇಳನದಲ್ಲಿ ದ್ವೇಷ ಭಾಷಣ: ವ್ಯಾಪಕ ಆಕ್ರೋಶ, ಎಫ್‌ಐಆರ್ ದಾಖಲು
ಇದನ್ನು ಖಾರವಾಗಿ ಟೀಕಿಸಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ರಾಹುಲ್ ಗಾಂಧಿ ಒಬ್ಬ ಹಿಂದೂ ಅಲ್ಲ. ಅವರು ಚುನಾವಣೆ ಸಮೀಪಿಸಿದ ಸಂದರ್ಭಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದ್ದರು. ‘ಚುನಾವಣೆ ಬಂದಾಗಲೆಲ್ಲ, ಅವರು (ರಾಹುಲ್ ಗಾಂಧಿ) ಈ ರೀತಿ ಮಾತ್ರವೇ ಮಾತಾಡುತ್ತಾರೆ. ಆದರೆ ಅವರು ಹಿಂದೂ ಅಲ್ಲ’ ಎಂದು ವಾಗ್ದಾಳಿ ನಡೆಸಿದ್ದರು.

ಹರಿದ್ವಾರದಲ್ಲಿ ನಡೆದ ಹಿಂದೂ ಧಾರ್ಮಿಕ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಹಿಂಸೆಗೆ ಕರೆ ನೀಡುವ ಭಾಷಣ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ಹಿಂದುತ್ವವಾದಿಗಳು ಯಾವಾಗಲೂ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತಾರೆ. ಹಿಂದೂ-ಮುಸ್ಲಿಂ-ಸಿಖ್- ಕ್ರೈಸ್ತರು ಇದರ ಬೆಲೆ ತರಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.



Read more