ಹೈಲೈಟ್ಸ್:
- ತಾವರೆಕೆರೆ ಶಿಲಾಮಠದಲ್ಲಿ ಪ್ರತಿವರ್ಷವೂ ಉಮಾಮಹೇಶ್ವರನ ಜಾತ್ರೆಯಲ್ಲಿ ಗುಂಡಿಯಲ್ಲಿ ಹಾಕಿದ ಆಹಾರ ವರ್ಷವಾದರೂ ಕೆಡದೇ ಇರುವುದು ಅಚ್ಚರಿಯ ಸಂಗತಿ
- ಸಾತ್ವಿಕ ಆಹಾರವಾದ ಬಾಳೆಯ ಹಣ್ಣು, ಹೆಸರುಕಾಳು, ಪುಡಿ, ಬೆಲ್ಲ, ಹಾಲನ್ನು ಬೆರೆಯಿಸಿ ಜಾತ್ರೆಗೆ ಬರುವಂತಹ ಪುರುಷರಿಗೆ ಪ್ರಸಾದವಾಗಿ ನೀಡಲಾಗುತ್ತದೆ
- ತಾವರೆಕೆರೆ ಶಿಲಾಮಠವು ಸುದೀರ್ಘವಾದ ಇತಿಹಾಸವನ್ನು ಹೊಂದಿದ್ದು 8 ಜನ ಸ್ವಾಮೀಜಿಗಳ ಜೀವಂತ ಸಮಾದಿ ಪ್ರವೇಶಿಸಿದರು
ಚನ್ನಗಿರಿ: ರೈತರು ತಾವು ಬೆಳೆದಂತಹ ತರಕಾರಿಗಳನ್ನು ಹಣ್ಣುಗಳನ್ನು ಕೆಡದಂತೆ ಸಂರಕ್ಷಿಸಿ ಇಡಲು ಕೋಲ್ಡ್ ಸ್ಟೋರೇಜ್‌ಗಳ ಮತ್ತು ಮನೆಯಲ್ಲಿನ ಆಹಾರ ಪದಾರ್ಥಗಳು ಕೆಡದಂತೆ ಸಂರಕ್ಷಣೆಗೆ ಪ್ರಿಜ್‌ಗಳನ್ನು ಕಂಡುಕೊಂಡಿರುವುದು ಸಾಮಾನ್ಯದ ಸಂಗತಿ. ಪ್ರಿಜ್‌ನಲ್ಲಿ ಇರುವಂತಹ ಅಹಾರಗಳು ವಾರದ ನಂತರ ಬೂಸ್ಟ್ ಕಟ್ಟಲು ಪ್ರಾರಂಬಿಸುತ್ತದೆ. ಆದರೆ ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಪ್ರತಿವರ್ಷವೂ ಉಮಾಮಹೇಶ್ವರನ ಜಾತ್ರೆಯಲ್ಲಿ ಗುಂಡಿಯಲ್ಲಿ ಹಾಕಿದ ಆಹಾರ ವರ್ಷವಾದರೂ ಕೆಡದೇ ಇರುವುದು ಅಚ್ಚರಿಯ ಸಂಗತಿಯಾಗಿದ್ದು ಇದು ದೈವ ಕೃಪೆಯಂದು ಈ ಗ್ರಾಮದ ಜನರು ಭಾವಿಸುತ್ತಾರೆ.
ತಾವರೆಕೆರೆ ಶಿಲಾಮಠದ ಮೂಲದೈವವಾದ ಬಸವಾರೂಡ ಉಮಾಮಹೇಶ್ವರನಿಗೆ ನಿತ್ಯವೂ ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೆ ಒಮ್ಮೆ ಮೃಗಶಿರ ಮಾಸದಲ್ಲಿ ವಿಜ್ರಂಭಣೆಯಿಂದ ಮಹೇಶ್ವರನ ಜಾತ್ರೆಯು ನಡೆಯುತ್ತದೆ. ಜಾತ್ರೆಯಲ್ಲಿ ಹೆಚ್ಚಿನ ಗಮನ ಸೆಳೆಯುವುದು ಎಂದರೆ ವರ್ಷವಾದರೂ ಕೆಡದೇ ಇರುವ ಪ್ರಸಾದ.
ಭಕ್ತಾದಿಗಳ ಕುತೂಹಲ
ಮಹೇಶ್ವರನ ಜಾತ್ರೆ ಧಾರ್ಮಿಕ ಜತೆಗೆ ವೈಜ್ಞಾನಿಕ ಹಿನ್ನಲೆಯನ್ನು ಹೊಂದಿರುವ ಬಗ್ಗೆ ಸ್ವಾಮಿಗಳು ಹೇಳುತ್ತಾರೆ. ಈ ಆಹಾರ ಸಾತ್ವಿಕ ಆಹಾರವಾದ ಬಾಳೆಯ ಹಣ್ಣು, ಹೆಸರುಕಾಳು, ಪುಡಿ, ಬೆಲ್ಲ, ಹಾಲನ್ನು ಬೆರೆಯಿಸಿ ಜಾತ್ರೆಗೆ ಬರುವಂತಹ ಪುರುಷರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ನಂತರ ಉಳಿದ ಪ್ರಸಾದವನ್ನು ಮಠದ ಪದ್ದತಿಯಂತೆ ನಿಗದಿತ ಗುಂಡಿಯೊಂದರಲ್ಲಿ ಇಟ್ಟು ಮುಚ್ಚಲಾಗುತ್ತದೆ. ಮುಂದಿನ ವರ್ಷದ ಜಾತ್ರೆಯಂದು ಆ ಗುಂಡಿಯನ್ನು ತೆರದು ನೋಡಿದರೆ ಕಳೆದ ವರ್ಷದ ಅಹಾರ ಪದಾರ್ಥ ಮತ್ತು ಊಟಕ್ಕೆ ಬಳಸಿದಂತಹ ಬಾಳೆಯ ಎಲೆ ಕೂಡ ಹಸಿರಾಗಿರುತ್ತದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಇದನ್ನು ಕಣ್ತುಂಬಿಕೊಳ್ಳುವ ಮೂಲಕ ಅಚ್ಚರಿಯಾಗುತ್ತಾರೆ. ಇದೇ ಡಿಸೆಂಬರ್27 ರಿಂದ 29ರವರೆಗೆ ನಡೆಯುವ ಈ ಜಾತ್ರೆಯಲ್ಲಿ ಜಗದ್ಗುರು ರೇಣುಕಾಚಾರ್ಯರಿಗೆ ರುದ್ರಾಭಿಷೇಕ, ಉಮಾಮಹೇಶ್ವರಸ್ವಾಮಿಯ ಪಲ್ಲಕ್ಕಿ ಉತ್ಸವ, ವೀರಭದ್ರಸ್ವಾಮಿಗೆ ಗುಗ್ಗಳ ಸೇವೆ ಜತೆ, ವಿಶೇಷವಾಗಿ ಈ ಬಾರಿ 19 ಜನ ಸೈನಿಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ತಾವರೆಕೆರೆ ಸುತ್ತ 16 ಕೆರೆಗಳು
ದಾವಣಗೆರೆ ಜಿಲ್ಲೆಯ ಕೊನೆಯ ಭಾಗ ಮತ್ಯು ದಟ್ಟವಾದ ಕಾಡು ಪ್ರದೇಶವನ್ನು ಹೊಂದಿರುವ ಉಬ್ರಾಣಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾವರೆಕೆರೆಯ ಹಿಂದಿನ ಹೆಸರು ಕಮಲಾವತಿ. ಈ ಕೆರೆಯ ಸುತ್ತಲೂ 16 ಕೆರೆಗಳು ಇರುವ ಉಲ್ಲೇಖವಿದೆ. ಈ ಭಾಗದ ಕೆರೆಗಳಲ್ಲಿ ಹೇರಳವಾಗಿ ಕಲಮದ ಹೂವುಗಳು ಇರುವುದರಿಂದಾಗಿ ಅಡು ಮಾತಿನಲ್ಲಿ ತಾವರೆಕೆರೆ ಎಂದು ಕರೆಯಲಾಯಿತು. ಕೆಳದಿ ಅರಸರ ಅಳ್ವಿಕೆಗೊಳಪಟ್ಟಿದ್ದ ಈ ಪ್ರದೇಶದಲ್ಲಿ ಉಂಬ್ರಾಣಿ ಎಂಬ ಕೋಟೆ ಇದ್ದು ಈ ಹಿಂದೆ ವೀರಬಲ್ಲಾಳನೆಂಬ ಸಾಮಂತ ರಾಜ ಅಳ್ವಿಕೆ ನಡೆಸಿದ್ದು ಅತನ ಕಾಲದಲ್ಲಿಯೇ ಇಲ್ಲಿ ಶಿಲಾಮಠವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಠವನ್ನು ಬೃಹತ್ ಕಲ್ಲಿನ ಹಾಸುಗಳಿಂದ ಕಲ್ಲಿನ ಕಂಬ ಮತ್ತು ಗೋಡೆಗಳಿಂದ ನಿರ್ಮಾಣ ಮಾಡಲಾಗಿದ್ದು ಶಿಲಾಮಠವೆಂದೇ ಪ್ರಸಿದ್ದಿಯಾಗಿದ್ದು 12 ನೇ ಶತಮಾನದಿಂದಲೂ ಧಾರ್ಮಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ.
ಕ್ಷೇತ್ರದ ಇತಿಹಾಸ
ತಾವರೆಕೆರೆ ಶಿಲಾಮಠವು ಸುದೀರ್ಘವಾದ ಇತಿಹಾಸವನ್ನು ಹೊಂದಿದ್ದು 8 ಜನ ಸ್ವಾಮೀಜಿಗಳ ಜೀವಂತ ಸಮಾದಿ ಪ್ರವೇಶಿಸಿದರು. ಗುರುಪರಂಪರೆಯಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು 1918 ರಿಂದ 1971ರವರೆಗೆ ಅಂದರೆ 53 ವರ್ಷಗಳ ಕಾಲ ಮಠವನ್ನು ಮುನ್ನಡೆಸಿದ ಮಹಾತಪಸ್ವಿಗಳು ಆಗಿದ್ದರು. ಅಥರ್ವಣವೇದ ಪಾರಂಗತರಾಗಿದ್ದ ಪೂಜ್ಯರು ಅಂದಿನ ಕಾಲದಲ್ಲಿ ಮಾಟಮಂತ್ರದ ಮೌಡ್ಯವನ್ನು ಬಯಲಿಗೆಳೆದು ಜನರಿಗೆ ಧರ್ಮ ಮಾರ್ಗವನ್ನು ಬೋಧಿಸಿದರು. ಸಾಕಷ್ಟು ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದರು. ಇವರ ಉತ್ತಾರಾಧಿಕಾರಿಯಾಗಿ ಶ್ರೀ ರೇಣುಕಾಶಿವಾಚಾರ್ಯರು ಅವರ ಹಾದಿಯಲ್ಲಿಯೇ ಸಾಗುತ್ತಾ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಮಠವನ್ನು ಮುನ್ನಡೆಸಿ ಯಡೆಯೂರು ಕ್ಷೇತ್ರಕ್ಕೆ ಮಠದ ಅಧ್ಯಕ್ಷರಾಗಿ ತೆರಳಿದರು. ನಂತರ ಕಿರಿಯ ಶ್ರೀಗಳಾದ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮಠವನ್ನು ಮುನ್ನಡೆಸುತ್ತಾ ಸಾಗುತ್ತಿದ್ದಾರೆ.