Karnataka news paper

ಎರಡು ವರ್ಷದ ಕೋರ್ಸ್ ಗೆ ಮೂರು ವರ್ಷ ಕಳೆದರೂ ಆಗಿಲ್ಲ ಪರೀಕ್ಷೆ; ಎಸ್‌ಬಿವಿಎಸ್ ಐಟಿಐ ಕಾಲೇಜು ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?


ಉತ್ತರ ಕನ್ನಡ: ಐಟಿಐ 2ನೇ ವರ್ಷದ ಅಂತಿಮ ಪರೀಕ್ಷೆ ನಡೆಯದೇ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಅತ್ತ ಕೋರ್ಸ್‌ ನ ಪ್ರಮಾಣಪತ್ರವೂ ಇಲ್ಲದೇ, ಇತ್ತ ಉದ್ಯೋಗ ಪಡೆಯಲೂ ಆಗದೆ ಐಟಿಐ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೇಗುಳಿ ಎಸ್‌ಬಿವಿಎಸ್ ಐಟಿಐ ಕಾಲೇಜಿನಲ್ಲಿ ಸುಮಾರು 40 ವಿದ್ಯಾರ್ಥಿಗಳು 2018- 19ನೇ ಸಾಲಿನಲ್ಲಿ ಪ್ರವೇಶ ಪಡೆದಿದ್ದರು. ಈ ವಿದ್ಯಾರ್ಥಿಗಳ ಎರಡು ವರ್ಷದ ಇಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕ್ಯಾನಿಕಲ್ ಹಾಗೂ ಫಿಟ್ಟರ್ ಕೋರ್ಸ್ ಈಗಾಗಲೇ ಪೂರ್ಣಗೊಂಡು, ಅಭ್ಯರ್ಥಿಗಳು ಯಾವುದಾದರೂ ಕಂಪನಿಗಳಲ್ಲಿ ಉದ್ಯೋಗ ದಕ್ಕಿಸಿಕೊಂಡಿರಬೇಕಿತ್ತು. ಆದರೆ ಇಲ್ಲಿ ಅದಾಗುತ್ತಿಲ್ಲ.

ಸುಮಾರು 20 ಸಾವಿರದಷ್ಟು ದಾಖಲಾತಿ ಶುಲ್ಕ ಕಟ್ಟಿದ್ದರೂ ಈವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿಲ್ಲ. ಪ್ರಥಮ ವರ್ಷದ ಪರೀಕ್ಷೆ ನಡೆದಿದೆಯಾದರೂ ಅಂತಿಮ ವರ್ಷದ ಪರೀಕ್ಷೆ ನಡೆಯದೇ ಪ್ರಮಾಣಪತ್ರವಿಲ್ಲದೆ ಉದ್ಯೋಗ ಹುಡುಕಿಕೊಳ್ಳಲು ಪರಿತಪಿಸುವಂತಾಗಿದೆ. ಈ ಬಗ್ಗೆ ಜಂಟಿ ನಿರ್ದೇಶಕರಿಗೆ ಕೇಳಿದರೆ, ಬಾಳೇಗುಳಿ ಕಾಲೇಜಿಗೆ ಯಾವುದೇ ಮಾನ್ಯತೆ ನೀಡಿಲ್ಲ. ಆ ಕಾಲೇಜಿನ ಮಾನ್ಯತೆ ರದ್ದಾಗಿ 5 ವರ್ಷಗಳೇ ಕಳೆದಿವೆ. ಪರೀಕ್ಷೆ ನಡೆದಿರದ ಬಗ್ಗೆ ಲಿಖಿತ ದೂರು ಕೂಡ ಈವರೆಗೆ ನಮಗೆ ಬಂದಿಲ್ಲ ಎಂದಿದ್ದು, ಇದು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಇನ್ಮುಂದೆ ಮೈಸೂರು ವಿವಿಯಲ್ಲಿ ಕನ್ನಡದಲ್ಲೇ ಕಾನೂನು ಪದವಿ ಪರೀಕ್ಷೆ ಬರೆಯಲು ಅವಕಾಶ
ಇನ್ನು ಕೋವಿಡ್ ನಿಂದಾಗಿ ಅಂತಿಮ ವರ್ಷದ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಆದರೆ 2019- 20ನೇ ಸಾಲಿನಲ್ಲಿ ಪ್ರವೇಶ ಪಡೆದವರಿಗೂ ಪೂರ್ಣ ಪರೀಕ್ಷೆ ನಡೆದಿದ್ದು, 2018- 19ನೇ ಸಾಲಿನ ವಿದ್ಯಾರ್ಥಿಗಳು ಮಾತ್ರ ಇಕ್ಕಟ್ಟಿನಲ್ಲಿ ಸಿಲಿಕಿಕೊಂಡಿದ್ದಾರೆ. ಈ ಬಗ್ಗೆ ಕಾಲೇಜಿ ಪ್ರಾಚಾರ್ಯ ಕಿರಣ್ ಕರ್ಜಗಿ ಅವರನ್ನ ಕೇಳಿದರೆ, 2018- 19ನೇ ಸಾಲಿನ ವಿದ್ಯಾರ್ಥಿಗಳ ಪ್ರಥಮ ವರ್ಷದ ಪರೀಕ್ಷೆ ಆಗಿದೆ. ಎರಡನೇ ವರ್ಷದ ಆನ್‌ಲೈನ್ ಪರೀಕ್ಷೆ ಇನ್ನೂ ಆಗಿಲ್ಲ. 2020ರ ಅಕ್ಟೋಬರ್‌ನಲ್ಲಿದ್ದ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಆದರೆ ಈವರೆಗೆ ಮುಂದೂಡಿದ ದಿನಾಂಕ ನಿಗದಿಯಾಗಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯ ಕಚೇರಿಯ ಗಮನಕ್ಕೆ ತರಲಾಗಿದ್ದು, ಅವರು ದಿನಾಂಕ ಘೋಷಿಸುತ್ತಿದ್ದಂತೆ ಪರೀಕ್ಷೆ ನಡೆಸುತ್ತೇವೆ ಎನ್ನುತ್ತಿದ್ದಾರೆ.
ರಾಜ್ಯದಲ್ಲಿ ಸದ್ಯದಲ್ಲೇ `ಉದ್ಯೋಗ ನೀತಿ’ ಜಾರಿ: ಬೊಮ್ಮಾಯಿ
ಒಟ್ಟಾರೆ ಕಾಲೇಜು ಹಾಗೂ ಆಡಳಿತ ವ್ಯವಸ್ಥೆಗಳ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರಿತಪಿಸುವಂತಾಗಿದ್ದು, ಎರಡು ವರ್ಷ ಪಡೆದ ಶಿಕ್ಷಣವೆಲ್ಲ ವ್ಯರ್ಥವಾಗುವ ಆತಂಕ ಎದುರಾಗಿದೆ. ಆದಷ್ಟು ಬೇಗ ಈ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ ಕಾರ್ಯವಾಗಬೇಕಿದೆ.



Read more