ಬೆಂಗಳೂರು: ರಾಜ್ಯಾದ್ಯಂತ ಆಗಸ್ಟ್ 1, 2008ರ ನಂತರ ನೇಮಕಗೊಂಡ ಸರಕಾರಿ, ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ‘ವಿಶೇಷ ಭತ್ಯೆ‘ ಮಂಜೂರಾತಿ ಮಾಡುವಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಸ್‌ಎಟಿ) ಆದೇಶ ಹೊರಡಿಸಿ 8 ತಿಂಗಳು ಕಳೆದಿದೆ. ಆದರೆ, ರಾಜ್ಯ ಸರಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪಿಯು ಉಪನ್ಯಾಸಕರಿಂದ ಈಗಾಗಲೇ ಕಟಾವಣೆ ಮಾಡಿಕೊಂಡಿರುವ ವಿಶೇಷ ಭತ್ಯೆಯನ್ನು ಮರುಪಾವತಿ ಮಾಡುವಂತೆ ಮತ್ತು ಇನ್ನು ಮುಂದೆ ವಿಶೇಷ ಭತ್ಯೆಯನ್ನು ಕಟಾವಣೆ ಮಾಡದಂತೆ 2021ರ ಅ.29ರಂದು ಕೆಎಸ್‌ಎಟಿ ಆದೇಶಿಸಿದ್ದರೂ ಸರಕಾರ ನಿರ್ಲಕ್ಷ್ಯವಹಿಸಿದೆ. ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವಿಶೇಷ ಭತ್ಯೆ ನೀಡುವ ಸಂಬಂಧ ಈಗಾಗಲೇ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಸರಕಾರಕ್ಕೆ ಹಿನ್ನಡೆಯಾಗಿದೆ. ಆದರೂ, ಕೆಎಸ್‌ಎಟಿಯ ಈ ತೀರ್ಪುಗಳ ವಿರುದ್ಧ ಪುನಃ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಸರಕಾರ 2006ರ ಮೇ 12ರಿಂದ ಜಾರಿಗೆ ಬರುವಂತೆ ಸರಕಾರಿ, ಅನುದಾನಿತ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಮಾಸಿಕ 200 ರೂ. ವಿಶೇಷ ಭತ್ಯೆ ಅನುಷ್ಠಾನಗೊಳಿಸಿತ್ತು. ಈ ವೇಳೆ ಶಿಕ್ಷಕರ ಮೂಲ ವೇತನದಲ್ಲಿದ್ದ ತಾರತಮ್ಯವನ್ನು ನೀಗಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೇತನವನ್ನು 6,250 ರೂ.ಗಳಿಂದ 6,800 ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿತ್ತು. ಈ ಆದೇಶವು 2008ರ ಆ.1ರ ಪೂರ್ವದಲ್ಲಿ ನೇಮಕಗೊಂಡ ಶಿಕ್ಷಕರಿಗೆ ಮಾತ್ರ ಅನ್ವಯ ಮಾಡಲಾಯಿತು. ತದನಂತರ, ಪ್ರೌಢಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜುಗಳ ಉಪನ್ಯಾಸಕರು ಸಹ ವಿಶೇಷ ಭತ್ಯೆ ಹೆಚ್ಚಳ ಮಾಡುವಂತೆ ಹೋರಾಟ ಆರಂಭಿಸಿದ್ದರು.
ಈ ಹೋರಾಟಕ್ಕೆ ಮಣಿದ ಸರಕಾರ ಪ್ರಾಥಮಿಕ ಶಾಲಾ ಶಿಕ್ಷಕರು ವಿಶೇಷ ಭತ್ಯೆಯನ್ನು 300 ರೂ., ಪ್ರೌಢಶಾಲಾ ಶಿಕ್ಷಕರ ವಿಶೇಷ ಭತ್ಯೆಯನ್ನು 400 ರೂ. ಹಾಗೂ ಪಿಯು ಉಪನ್ಯಾಸಕರ ವಿಶೇಷ ಭತ್ಯೆಯನ್ನು 500 ರೂ.ಗಳಿಗೆ ಹೆಚ್ಚಳ ಮಾಡಿ 2012 ಮೇ 9ರಂದು ಆದೇಶಿಸಿತ್ತು. ಆದರೆ, ಈ ವಿಶೇಷ ಭತ್ಯೆಯು 2008ರ ಆ.1ರ ನಂತರ ನೇಮಕಗೊಂಡ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿತ್ತು.
ಕೋರ್ಟ್‌ಗಳಲ್ಲಿ ಗೆಲುವು
ಸರಕಾರದ ವಿರುದ್ಧ ಶಿಕ್ಷಕರು ಮತ್ತು ಉಪನ್ಯಾಸಕರು ಕೆಎಸ್‌ಎಟಿ ಮೆಟ್ಟಿಲೇರಿದ್ದರು. ಈ ವೇಳೆ, ಸರಕಾರ ನೀಡುತ್ತಿರುವ ವಿಶೇಷ ಭತ್ಯೆಗೆ 2008 ಆ.1ರ ನಂತರ ನೇಮಕವಾದ ಶಿಕ್ಷಕರು ಮತ್ತು ಉಪನ್ಯಾಸಕರೂ ಅರ್ಹರಾಗಿದ್ದಾರೆ ಎಂದು 2013ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಆರ್ಥಿಕ ಇಲಾಖೆಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಸಹ ಕೆಎಸ್‌ಎಟಿ ಆದೇಶವನ್ನು ಎತ್ತಿ ಹಿಡಿದು 2015ರಲ್ಲಿ ತೀರ್ಪು ನೀಡಿತ್ತು. ಹೈಕೋರ್ಟ್‌ನ ತೀರ್ಪಿನ ವಿರುದ್ಧ ಪುನಃ ಹಣಕಾಸು ಇಲಾಖೆ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್‌ನ ಆದೇಶಕ್ಕೆ ಮನ್ನಣೆ ನೀಡಿ ಸರಕಾರದ ಅರ್ಜಿಯನ್ನು 2016ರಲ್ಲಿ ವಜಾಗೊಳಿಸಿತ್ತು.