ಹೈಲೈಟ್ಸ್:
- ಓಮಿಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಶ್ರೀಶಾರದಾ ಪೀಠಕ್ಕೆ ಪ್ರವಾಸಿಗರ ದಂಡು
- ಕೊರೊನಾ ನಂತರ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು, ಇದೀಗ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ
- ಶ್ರೀಮಠದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು, ಸಾವಿರಾರು ಜನರು ಊಟಕ್ಕೆ ಆಗಮಿಸುತ್ತಿದ್ದಾರೆ
ಪಟ್ಟಣದ ವಾಹನ ನಿಲುಗಡೆ ಸ್ಥಳವಾದ ಗಾಂಧಿಮೈದಾನದಲ್ಲಿ ಪ್ರವಾಸಿ ವಾಹನದ ಸಾಲು ಹಾಗೂ ಶ್ರೀಮಠದ ಎದುರು ಭಕ್ತಾದಿಗಳ ಸಾಲು ಕಂಡು ಬಂದಿದೆ.
ಕೊರೊನಾ ನಂತರ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು, ಇದೀಗ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪ್ರವಾಸೋದ್ಯಮ ಚೇತರಿಕೆ ಕಂಡು ಬಂದಿದೆ. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಅಲ್ಲದೇ ಪಟ್ಟಣದ ಎಲ್ಲಾ ರಸ್ತೆಗಳಲ್ಲೂ ಪ್ರವಾಸಿಗರ ವಾಹನ ನಿಲುಗಡೆಯಾಗಿದೆ.
ಪಟ್ಟಣದ ವಸತಿಗೃಹಗಳು, ಹೋಂ ಸ್ಟೇಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಹೊಂಸ್ಟೇಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಶ್ರೀಮಠದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು, ಸಾವಿರಾರು ಜನರು ಊಟಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಎರಡು ಲಸಿಕೆ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.
ಜಗದ್ಗುರುಗಳು ವಾಸ್ತವ್ಯ ಇರುವ ಗುರುಭವನಕ್ಕೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಗುರುದರ್ಶನ ಬೆಳಗ್ಗೆ 11ರಿಂದ ಮಧ್ಯಾಹ್ನದವರೆಗೆ ಮಾತ್ರ ಇದೆ. ಶ್ರೀಮಠದ ಎದುರಿನ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮಕ್ಕಳ ಅಕ್ಷರಭ್ಯಾಸವೂ ನಡೆಯುತ್ತಿದ್ದು, ನೂರಾರು ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ.