Karnataka news paper

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಸಂಭ್ರಮ: ಹಂಪಿಗೆ ಪ್ರವಾಸಿಗರ ದಂಡು; ಹೋಟೆಲ್‌, ರೆಸಾರ್ಟ್‌ಗಳಲ್ಲಿ ದರ ದುಪ್ಪಟ್ಟು!


ಹೈಲೈಟ್ಸ್‌:

  • ಹಂಪಿಗೆ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವಸತಿ ಗೃಹ, ಹೋಟೆಲ್‌, ರೆಸಾರ್ಟ್‌ಗಳಿಗೆ ಡಿಮ್ಯಾಂಡ್‌
  • ಕ್ರಿಸ್‌ಮಸ್‌, ಹೊಸವರ್ಷದ ದಿನ ಸಮೀಪಿಸುತ್ತಿರುವುದರಿಂದ ರಾಜ್ಯ, ಅಂತಾರಾಜ್ಯ, ದೇಶ, ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ
  • ಲಾಡ್ಜ್‌, ರೆಸಾರ್ಟ್‌, ವಸತಿ ಗೃಹಗಳು ಸೇರಿ ಇತರೆ ಹೋಟೆಲ್‌ಗಳಲ್ಲಿ ಹೌಸ್‌ಫುಲ್‌ ಬೋರ್ಡ್‌

ಮಂಜುನಾಥ ಅಯ್ಯಸ್ವಾಮಿ ವಿಜಯನಗರ (ಹೊಸಪೇಟೆ)
ವಿಜಯನಗರ: ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ನಿಮಿತ್ತ ಹಂಪಿಗೆ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವಸತಿ ಗೃಹ, ಹೋಟೆಲ್‌, ರೆಸಾರ್ಟ್‌ಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ.

ನಗರದಿಂದ ಕೇವಲ 10 ಕಿ.ಮೀ. ದೂರದ ವಿಶ್ವ ಪ್ರಸಿದ್ಧ ಹಾಗೂ ದಕ್ಷಿಣ ಕಾಶಿ ಹಂಪಿ, ದರೋಜಿ ಕರಡಿಧಾಮ, ಹಂಪಿ ಜೂ, ತುಂಗಭದ್ರಾ ಜಲಾಶಯ ಸೇರಿ ಇತರೆ ಪ್ರವಾಸಿ ತಾಣಗಳು ಪ್ರವಾಸಿಗರ ದಟ್ಟಣೆಯ ತಾಣಗಳಾಗಿವೆ. ವರ್ಷದ ಕೊನೆ ವಾರ ಹಾಗೂ ಕ್ರಿಸ್‌ಮಸ್‌, ಹೊಸವರ್ಷದ ದಿನ ಸಮೀಪಿಸುತ್ತಿರುವುದರಿಂದ ರಾಜ್ಯ, ಅಂತಾರಾಜ್ಯ, ದೇಶ, ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಎಲ್ಲೆಲ್ಲಿ ದರ ಹೆಚ್ಚಳ?
ಹೊಸಪೇಟೆ, ಹಂಪಿ, ಕಮಲಾಪುರ, ತುಂಗಭದ್ರಾ ನದಿ ತೀರದ ಗಡ್ಡಿ ಪ್ರದೇಶಗಳ ರೆಸಾರ್ಟ್‌, ವಸತಿ ಗೃಹಗಳು, ಹೋಟೆಲ್‌ಗಳಲ್ಲಿ ದರ ಹೆಚ್ಚಿದ್ದು, ರೂಮುಗಳಿಗಾಗಿ ತಡಕಾಡುವ ಸ್ಥಿತಿಯಿದೆ. ವಸತಿ ಸೇರಿ ಉಪಾಹಾರ, ಊಟ ಮಾತ್ರವಲ್ಲದೇ ಪ್ರಯಾಣದ ಖರ್ಚು ಕೂಡ ದುಪ್ಪಟ್ಟಾಗಿದೆ.
ಕೊಪ್ಪಳದಲ್ಲಿ ಓಮಿಕ್ರಾನ್‌ ಮಧ್ಯೆಯೂ ರೆಸಾರ್ಟ್‌ಗಳಲ್ಲಿ ನ್ಯೂ ಇಯರ್‌ ಸಂಭ್ರಮಕ್ಕೆ ತಯಾರಿ?
ಡಬಲ್‌ ದರ
ಸಾಮಾನ್ಯ ದಿನಗಳಲ್ಲಿ ಹೊಸಪೇಟೆ ನಗರದ ವಸತಿಗೃಹಗಳಲ್ಲಿ 500 ರೂ.ಗಳಿಂದ ಸಾವಿರ ರೂ. ದರ ಇರುತ್ತದೆ. ಆದರೆ, ಕೆಲ ದಿನಗಳಿಂದ 500 ರೂ.ಇದ್ದದ್ದು 2 ಸಾವಿರ, 2 ಸಾವಿರ ರೂ. ಇದ್ದದ್ದು ರೂಂ 4 ಸಾವಿರ ರೂ., ಇನ್ನು ಸ್ಟಾರ್‌ ಹೋಟೆಲ್‌ಗಳಲ್ಲಿ ರೂಂ ಗಳ ದರ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಲೇ ಹೌಸ್‌ಫುಲ್‌
ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿ ತಾಲೂಕಿನ ಕಮಲಾಪುರದಲ್ಲಿ ಲಾಡ್ಜ್‌, ರೆಸಾರ್ಟ್‌, ವಸತಿ ಗೃಹಗಳು ಸೇರಿ ಇತರೆ ಹೋಟೆಲ್‌ಗಳಲ್ಲಿ ಹೌಸ್‌ಫುಲ್‌ ಬೋರ್ಡ್‌ ಹಾಕಲಾಗಿದೆ. ಆನ್‌ ಲೈನ್‌ನಲ್ಲೂ ಹೌಸ್‌ಫುಲ್‌ ಎಂಬ ಮಾಹಿತಿ ಬರುತ್ತಿದೆ. ದಲ್ಲಾಳಿಗಳಿಂದ ವ್ಯವಹಾರ ಮಾಡಿ ಸಾಮಾನ್ಯ ದರಕ್ಕಿಂತ ಮೂರು ನಾಲ್ಕು ಪಟ್ಟು ಹೆಚ್ಚಿನ ಹಣ ಪ್ರವಾಸಿಗರಿಂದ ಪಡೆಯುತ್ತಿದ್ದಾರೆ. ನಾಮ್‌ಕೇವಾಸ್ತೆ ಹೌಸ್‌ಫುಲ್‌ ಬೋರ್ಡ್‌ ಹಾಕಿದ್ದಾರೆ ಎಂದು ಬೆಂಗಳೂರಿನ ಪ್ರವಾಸಿ ರಾಬರ್ಟ್‌ ಜೋಷ್‌ ಆರೋಪಿಸಿದ್ದಾರೆ.
ಹೊಸ ವರ್ಷಕ್ಕೆ ನಂದಿಬೆಟ್ಟಕ್ಕೆ ನಿಷೇಧ; ಕೊರೊನಾ ಲಸಿಕೆ ಪಡೆದರೆ ಮಾತ್ರ ರೆಸ್ಟೋರೆಂಟ್‌, ಹೋಟೆಲ್‌ಗೆ ಪ್ರವೇಶ
ನುಂಗಲಾರದ ತುತ್ತು

ಹಂಪಿಗೆ ದೇಶ-ವಿದೇಶಿ ಪ್ರವಾಸಿಗರು ಸೇರಿ ಧಾರ್ಮಿಕವಾಗಿ ಭಕ್ತರು ಭೇಟಿ ನೀಡಲಿದ್ದಾರೆ. ಆದರೆ ದೂರದ ಊರುಗಳಿಂದ ಬರುವ ಪ್ರವಾಸಿಗರು ನಗರ ಸೇರಿ ತಾಲೂಕಿನ ಕಮಲಾಪುರ, ಕಡ್ಡಿರಾಂಪುರಗಳಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ಇತ್ತೀಚಿನ ಲಾಡ್ಜ್‌ಗಳ ಬೆಲೆ ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ.
ಬೆಳಗಾವಿ ಬಿಟ್ಟು ಉತ್ತರ ಕನ್ನಡಕ್ಕೆ ಅಧಿಕಾರಿಗಳ ದೌಡು..! ಪ್ರವಾಸಿ ತಾಣಗಳು ಫುಲ್ ಬ್ಯುಸಿ..!
ಹಂಪಿ ನೋಡಲು ಶುಕ್ರವಾರ ರಾತ್ರಿ ಹೊಸಪೇಟೆಗೆ ಬಂದಿರುವೆ. ಆದರೆ, 1,200 ರೂ. ಇದ್ದ ರೂಂ ಗೆ 3,800 ರೂ. ಕೊಟ್ಟಿದ್ದೇವೆ. ಈ ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದು, ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ಕಾರ್ತಿಕ್‌ ಕುಮಾರನ್‌, ಚೆನ್ನೈ, ತಮಿಳುನಾಡು



Read more