ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಕೇವಲ ವದಂತಿ. 2023ರ ವಿಧಾನಸಭೆ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶನಿವಾರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾವುದೇ ಕಾರಣಕ್ಕೂ ಸಿ.ಎಂ ಬದಲಾವಣೆ ಮಾಡುವುದಿಲ್ಲ. ಈ ವಿಷಯ ಪಕ್ಷದ ವರಿಷ್ಠರ ಮುಂದಿಲ್ಲ. ವದಂತಿಯನ್ನು ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದರು.
‘ಸಚಿವ ಸಂಪುಟ ಪುನರ್‌ರಚನೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಷಯ. ಪುನರ್ ರಚನೆ ಮಾಡುವುದಾದರೆ ನನ್ನ ಜತೆಗೆ ಚರ್ಚಿಸಲಿದ್ದಾರೆ. ಆ ದಿನ ನಿಮಗೆ ವಿಷಯ ತಿಳಿಸುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.