ಹೈಲೈಟ್ಸ್:
- ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಅತ್ಯಂತ ಕನಿಷ್ಠ ಅನುದಾನ ನೀಡುತ್ತಿದೆ
- ಶಾಸ್ತ್ರೀಯ ಸ್ಥಾನಮಾನವನ್ನೂ ಹೊಂದಿರುವ ಕನ್ನಡ ಭಾಷೆಗೆ ವರ್ಷಕ್ಕೆ ಕೇವಲ ಒಂದು ಕೋಟಿ ರೂ
- ತಮಿಳು ಭಾಷೆಗೆ ಕಳೆದ ಏಳು ವರ್ಷಗಳಲ್ಲಿ 50 ಕೋಟಿ ಅನುದಾನ; ಕರ್ನಾಟಕಕ್ಕೆ ದಕ್ಕಿರುವುದು ಕೇವಲ 8.39 ಕೋಟಿ!
ತಮಿಳಿನಂಥ ಭಾಷೆಗೆ ಕಳೆದ ಏಳು ವರ್ಷಗಳಲ್ಲಿ 50 ಕೋಟಿ ಅನುದಾನವನ್ನು ನೀಡಿದ್ದರೆ, ಕರ್ನಾಟಕಕ್ಕೆ ದಕ್ಕಿರುವುದು ಕೇವಲ 8.39 ಕೋಟಿ ಎಂಬ ಅಂಕೆ ಸಂಖ್ಯೆಗಳ ಭಾಷೆಗಳ ನಡುವಿನ ತಾರತಮ್ಯದ ವಿಚಾರದಲ್ಲೂ ನೋವುಂಟು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಅವರು ಅತ್ಯಲ್ಪ ಅನುದಾನದ ವಿಚಾರವನ್ನು ಪ್ರಸ್ತಾಪಿಸಿ ನ್ಯಾಯ ಕೋರಿದ ಹಿನ್ನೆಲೆಯಲ್ಲಿ ಈ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಸಂಸ್ಕೃತ ಭಾಷೆಗೆ ಇದೇ ಅವಧಿಯಲ್ಲಿ1200 ಕೋಟಿ ರೂ. ನೀಡಿರುವುದು ಕೂಡಾ ಚರ್ಚೆಯ ಭಾಗವಾಗಿದೆ.
28 ಸಾವಿರ ಮಂದಿ ಮಾತನಾಡಿವ ಸಂಸ್ಕೃತಕ್ಕೆ 640 ಕೋಟಿ; 6.5 ಕೋಟಿ ಜನ ಮತನಾಡುವ ಕನ್ನಡ ಭಾಷೆಗೆ ಕೇವಲ 8 ಕೋಟಿ ಯಾಕೆ?: ಜಿಸಿ ಚಂದ್ರಶೇಖರ್ ಪ್ರಶ್ನೆ
ಭಾಷೆಗಳ ಅಭಿವೃದ್ಧಿಗೆ ಕೇಂದ್ರದ ಅನುದಾನ ಅಗತ್ಯವಾಗಿದೆ. ಅದರಲ್ಲೂ ಭಾಷೆಗಳನ್ನು ಹೊಸ ವಿಷಯಗಳು ಮತ್ತು ತಂತ್ರಜ್ಞಾನಗಳಿಗೆ ಸಜ್ಜುಗೊಳಿಸಬೇಕಾದ ಸವಾಲಿನ ಕಾಲದಲ್ಲಿ ಇದರ ಅಗತ್ಯತೆ ಇನ್ನೂ ಹೆಚ್ಚಾಗಿದೆ. ಆದರೆ, ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸದೆ ಜುಜುಬಿ ಮೊತ್ತವನ್ನು ನೀಡುತ್ತಿದೆ. ಕನ್ನಡದ ವಿಷಯದಲ್ಲಿ ಹೇಳುವುದಾದರೆ ಈ ಮೊತ್ತ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದ ಉದ್ಯೋಗಿಗಳ ವೇತನ ಮತ್ತು ನಿರ್ವಹಣೆಗಷ್ಟೇ ಸಾಕಾಗುತ್ತಿದೆ. ಉಳಿದಂತೆ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವೇ ಸಿಗದಂತಾಗಿದೆ ಎನ್ನುತ್ತಾರೆ ಮನು ಬಳಿಗಾರ್.
ಸ್ವಾಯತ್ತತೆಯೇ ಇಲ್ಲ
2000 ವರ್ಷಕ್ಕೂ ಹೆಚ್ಚು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪರಂಪರೆಯಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿ, ಕೇಂದ್ರ ಸರಕಾರ ಕೈತೊಳೆದುಕೊಂಡು ಮರೆತೇ ಬಿಟ್ಟಂತೆನಿಸುತ್ತದೆ. 2011ರಲ್ಲಿ ಸ್ಥಾಪನೆಯಾಗಿರುವ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ಕ್ಕೆ ಹೆಚ್ಚು ಹಣ ಬಿಡುಗಡೆ ಮಾಡುವುದರ ಜತೆಗೆ, ಸ್ವಾಯತ್ತತೆ ನೀಡಿ ಶೀಘ್ರ ಆದೇಶ ಹೊರಡಿಸಬೇಕು ಎಂದು ಮನು ಬಳಿಗಾರ್ ಆಗ್ರಹಿಸಿದ್ದಾರೆ.
ತಮಿಳು ಸೇರಿದಂತೆ ಹಲವು ಭಾಷೆಗಳ ಸಿಸಿಎಲ್‌ಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಹೀಗಾಗಿ ಅವುಗಳಿಗೆ ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಯೋಜನೆಗಳಿಗೆ ಮಂಜೂರು ಪಡೆಯುವುದು ಸುಲಭ. ಆದರೆ, ಸ್ವಾಯತ್ತೆಯೇ ಇಲ್ಲದ ಕನ್ನಡಕ್ಕೆ ಯಾವುದೇ ಯೋಜನೆಗಳಿಗೆ ಮಂಜೂರಾತಿ ಸಿಗುತ್ತಿಲ್ಲ. ಹೀಗಾಗಿ ಅನುದಾನವೂ ಸಿಗುತ್ತಿಲ್ಲ ಎನ್ನುತ್ತಾರೆ ಅವರು.
ಹಲವು ಕೆಲಸ ಆಗಬೇಕಾಗಿದೆ
ಕನ್ನಡದ ಪ್ರಾಚೀನ ಗ್ರಂಥಗಳ ಉಳಿವಷ್ಟೇ ಅಲ್ಲ, ಮುಂದಿನ ಭವಿಷ್ಯಕ್ಕಾಗಿ ಕನ್ನಡವನ್ನು ತಂತ್ರಜ್ಞಾನ ಶಕ್ತ ಭಾಷೆಯಾಗಿ ಉಳಿಸುವ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಅನುವಾದ ಮತ್ತಿತರ ನೂರಾರು ಕೆಲಸಗಳು ಆಗಬೇಕಿದೆ. ಇದಕ್ಕೆಲ್ಲ ಅನುದಾನ ಬೇಕು. ರಾಜ್ಯದಿಂದ ವರ್ಷಕ್ಕೆ 2.5 ಲಕ್ಷ ಕೋಟಿಯಷ್ಟು ತೆರಿಗೆ ಪಡೆಯುವ ಕೇಂದ್ರ ಜುಜುಬಿ 1 ಕೋಟಿ ನೀಡಿ ಕೈತೊಳೆದುಕೊಳ್ಳುತ್ತಿದೆ. ಈ ಬಗ್ಗೆ ಯಾವ ಜನಪ್ರನಿಧಿಗಳು ಪ್ರಶ್ನೆ ಮಾಡುತ್ತಿಲ್ಲ.
ಅರುಣ್ ಜಾವಗಲ್, ಕನ್ನಡ ಪರ ಹೋರಾಟಗಾರ
3 ವರ್ಷಗಳಲ್ಲಿ ಅನುದಾನ
ವರ್ಷ-ಕನ್ನಡ -ತಮಿಳು
- 2017-18- 1 ಕೋಟಿ -10.59 ಕೋಟಿ
- 2018-19 -99 ಲಕ್ಷ- 4.65 ಕೋಟಿ
- 2019-20 -1.07 ಕೋಟಿ- 7.70 ಕೋಟಿ