Karnataka news paper

ಹೊಸ ವರ್ಷಕ್ಕೆ ಮತ್ತೊಂದು ಸುತ್ತಿನ ದರ ಹೆಚ್ಚಳ, 4-10% ತನಕ ಬೆಲೆ ಏರಿಕೆ ನಿರೀಕ್ಷೆ


ಹೈಲೈಟ್ಸ್‌:

  • ರೆಫ್ರಿಜರೇಟರ್‌, ವಾಷಿಂಗ್‌ಮೆಶೀನ್‌, ಏಸಿ, ಕಾರು ದರ ಹೆಚ್ಚಳ ಸಂಭವ
  • ಶೇ. 4-10ರ ತನಕ ಬೆಲೆ ಏರಿಕೆ ನಿರೀಕ್ಷೆ
  • ಈಗಾಗಲೇ 2021ರಲ್ಲಿ 2 – 3 ಸಲ ದರ ಏರಿಕೆ
  • ಕಚ್ಚಾ ವಸ್ತುಗಳು ತುಟ್ಟಿಯಾಗಿರುವುದು, ಸಾಗಣೆಯ ವೆಚ್ಚ ಹೆಚ್ಚಾಗಿರುವುದೇ ದರ ಏರಿಕೆಗೆ ಪ್ರಮುಖ ಕಾರಣ

ಹೊಸದಿಲ್ಲಿ: ಹೊಸ ವರ್ಷದ ಮೊದಲ ಮೂರು ತಿಂಗಳಿನಲ್ಲಿ ಮತ್ತೊಂದು ಸುತ್ತಿನ ದರ ಏರಿಕೆಯ ಬರೆ ಜನರಿಗಾಗಿ ಕಾದಿದೆ.

ಮುಖ್ಯವಾಗಿ ಪ್ರಮುಖ ಎಫ್‌ಎಂಸಿಜಿ, ಕನ್‌ಸ್ಯೂಮರ್‌ ಎಲೆಕ್ಟ್ರಾನಿಕ್‌, ಆಟೊಮೊಬೈಲ್‌ ಉತ್ಪಾದನೆಯ ಕಂಪನಿಗಳು ತಮ್ಮ ನಾನಾ ಉತ್ಪನ್ನಗಳ ದರ ಏರಿಕೆಗೆ ಸಜ್ಜಾಗಿವೆ. ಇದರ ಪರಿಣಾಮ ರೆಫ್ರಿಜರೇಟರ್‌, ವಾಷಿಂಗ್‌ ಮೆಶೀನ್‌, ಏರ್‌ ಕಂಡೀಶನರ್‌ ದರ ಏರಿಕೆಯಾಗಲಿದೆ.

ಈಗಾಗಲೇ 2021ರಲ್ಲಿ 2 – 3 ಸಲ ದರ ಏರಿಕೆ ಮಾಡಲಾಗಿದೆ. ಆದರೆ ಕಚ್ಚಾ ವಸ್ತುಗಳು ತುಟ್ಟಿಯಾಗಿರುವುದು, ಸಾಗಣೆಯ ವೆಚ್ಚ ಹೆಚ್ಚಾಗಿರುವುದು ಇತ್ಯಾದಿ ಕಾರಣಗಳಿಂದ ಉತ್ಪಾದನೆ ವಲಯದ ಕಂಪನಿಗಳು ಮತ್ತೊಂದು ಸುತ್ತಿನ ದರ ಹೆಚ್ಚಳಕ್ಕೆ ಸಜ್ಜಾಗಿವೆ.

ಶೇ. 4 – 10 ತನಕ ಹೆಚ್ಚಳ

ಫಾಸ್ಟ್‌ ಮೂವಿಂಗ್‌ ಕನ್‌ಸ್ಯೂನರ್‌ ಗೂಡ್ಸ್‌ (ಎಫ್‌ಎಂಸಿಜಿ) ವಲಯದ ಕಂಪನಿಗಳು ಮುಂದಿನ ಮೂರು ತಿಂಗಳಿನಲ್ಲಿ ಶೇ. 4 – 10ರ ತನಕ ದರ ಹೆಚ್ಚಳ ಮಾಡಲಿವೆ. ಕನ್‌ಸ್ಯೂಮರ್‌ ಎಲೆಕ್ಟ್ರಾನಿಕ್‌ ಕಂಪನಿಗಳು ಇತ್ತೀಚೆಗೆ ಶೇ. 3.5 ದರ ಹೆಚ್ಚಳ ಮಾಡಿದ್ದು, ಜನವರಿಯಲ್ಲಿ ಮತ್ತೊಂದು ಸುತ್ತು ಶೇ. 6 – 10ರ ತನಕ ದರ ಏರಿಕೆ ಮಾಡುವ ಸಾಧ್ಯತೆ ಇದೆ. 2020ರ ಡಿಸೆಂಬರ್‌ ನಂತರ ಇದು 4ನೇ ಸುತ್ತಿನ ದರ ಏರಿಕೆಯಾಗಲಿದೆ.

ಜನವರಿ 1 ರಿಂದ ಬದಲಾಗಲಿದೆ ಜಿಎಸ್‌ಟಿ ನಿಮಯ: ಗ್ರಾಹಕರಿಗೆ ಹೊರೆಯೋ? ವರ್ತಕರಿಗೆ ಬರೆಯೋ?
ದರ ಹೆಚ್ಚಳಕ್ಕೆ ಕಾರಣವೇನು?

ಕಂಪನಿಗಳಿಗೆ ಸರಕು ಸಾಗಣೆಯ ವೆಚ್ಚಗಳು ಏರಿಕೆಯಾಗಿವೆ. ಸಮುದ್ರ ಮಾರ್ಗದಲ್ಲಿ ಕಂಟೈನರ್‌ಗಳ ಮೂಲಕ ಸಾಗಣೆ ವೆಚ್ಚ ಕೂಡ ಹಲವು ಪಟ್ಟು ವೃದ್ಧಿಸಿದೆ. ಡೀಸೆಲ್‌ ದರ ಹೆಚ್ಚಳದ ಪರಿಣಾಮ ರಸ್ತೆ ಮಾರ್ಗದಲ್ಲಿ ಸರಕು ಸಾಗಣೆ ತುಟ್ಟಿಯಾಗಿದೆ. ಇದರ ಜತೆಗೆ ಉಕ್ಕಿನ ದರವೂ ಗಗನಕ್ಕೇರಿದೆ. ಇದರಿಂದ ಉದ್ದಿಮೆ ವಲಯಕ್ಕೆ ಸಮಸ್ಯೆಯಾಗಿದೆ.

ಇದಲ್ಲದೆ ಇತರ ಕಚ್ಚಾ ವಸ್ತುಗಳ ದರವೂ ಏರಿಕೆಯಾಗಿದೆ. ಕಚ್ಚಾ ತೈಲ, ತಾಳೆ ಎಣ್ಣೆ, ಪ್ಯಾಕೇಜಿಂಗ್‌ ವೆಚ್ಚಗಳು ಕಳೆದ ಒಂದು ವರ್ಷದಲ್ಲಿ ಇಮ್ಮಡಿಯಾಗಿವೆ.

ಕಚ್ಚಾ ವಸ್ತುಗಳ ದರದಲ್ಲಿ ಇತ್ತೀಚೆಗೆ ಸ್ವಲ್ಪ ದರ ಇಳಿಕೆಯಾಗಿದ್ದರೂ, ಉತ್ಪಾದಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ದರ ಹೆಚ್ಚಳ ಅನಿವಾರ್ಯ ಎಂದು ಪಾರ್ಲೆ ಪ್ರಾಡಕ್ಟ್ಸ್‌ನ ಹಿರಿಯ ಅಧಿಕಾರಿ ಕೃಷ್ಣರಾವ್‌ ಬುದ್ಧ ತಿಳಿಸಿದ್ದಾರೆ.

ಉಕ್ಕು, ತಾಮ್ರ, ಪ್ಲಾಸ್ಟಿಕ್‌, ಅಲ್ಯುಮಿನಿಯಂ ಇತ್ಯಾದಿ ಕಚ್ಚಾ ವಸ್ತುಗಳ ದರ ಹೆಚ್ಚಳದ ಪರಿಣಾಮ ಆಟೊಮೊಬೈಲ್‌ ಕಂಪನಿಗಳು ಕಾರಿಗಳ ದರ ಏರಿಸಲು ನಿರ್ಧರಿಸಿವೆ.



Read more