ಹೈಲೈಟ್ಸ್:
- ಕೋವಿಡ್ ಬಿಕ್ಕಟ್ಟಿನ ನಡುವೆ ಗ್ರಾಹಕ ವಸ್ತುಗಳ ಬೆಲೆಗಳು ಗಗನಮುಖಿ
- ಈ ನಡುವೆಯೇ ವಿದ್ಯುತ್ ಬೆಲೆ ಏರಿಕೆಗೆ ಕಂಪನಿಗಳ ಪ್ರಸ್ತಾಪ
- ಪ್ರತಿ ಯುನಿಟ್‌ಗೆ 1.50 ರೂಪಾಯಿ ಹೆಚ್ಚಿಸಲು ಬೆಸ್ಕಾಂ ಪ್ರಸ್ತಾವನೆ
ಹೌದ! ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಾಗಲಿದೆ. ವಿದ್ಯುತ್ ದರದಲ್ಲಿ ಪ್ರತಿ ಯುನಿಟ್‌ಗೆ 1.50 ರೂಪಾಯಿ ಹೆಚ್ಚಿಸಲು ಬೆಸ್ಕಾಂ ಅಧಿಕಾರಿಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತತ್ತರಿಸಿರುವ ಜನತೆ!
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಈ ಮಧ್ಯೆ ದಿಢೀರ್ ವಿದ್ಯುತ್ ದರವೂ ಹೆಚ್ಚಳವಾದರೆ ಗತಿಯೇನು ಎಂಬ ಚಿಂತೆ ಕಾಡುತ್ತಿದೆ. ಏಕೆಂದರೆ ವಿದ್ಯುತ್ ದರ ಏರಿಕೆಯಾದರೆ ಅದು ಪರೋಕ್ಷವಾಗಿ ಅಗತ್ಯ ವಸ್ತುಗಳ ದರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಆತಂಕ ಶುರುವಾಗಿದೆ.
ಬೆಲೆ ಹೆಚ್ಚಳಕ್ಕೆ ನಷ್ಟದ ಕಾರಣ ಹೇಳಿರುವ ವಿದ್ಯುತ್ ಕಂಪನಿಗಳು
ಬೆಸ್ಕಾಂ ಮಾತ್ರವಲ್ಲದೆ ಮೆಸ್ಕಾಂ, ಚೆಸ್ಕಾಂ ಅಧಿಕಾರಿಗಳು ಕೂಡ ನಷ್ಟದ ನೆಪ ಹೇಳಿ ದರ ಹೆಚ್ಚಳ(Electricity Tariff) ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿ ಪ್ರತಿ ಯುನಿಟ್ಗೆ 1 ರೂ. 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, 30 ಪೈಸೆ ಮಾತ್ರ ದರ ಪರಿಷ್ಕರಣೆ ಮಾಡಲಾಗಿತ್ತು. ಸದ್ಯ ಈಗ KERC ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಒಂದು ವೇಳೆ ಬೆಸ್ಕಾಂ ಪ್ರಸ್ತಾವನೆಗೆ KERC ಒಪ್ಪಿಗೆ ಕೊಟ್ಟರೆ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ. ಹಾಗಾದರೆ ಯಾವ ಯಾವ ವರ್ಷದಲ್ಲಿ ಎಷ್ಟೆಷ್ಟು ಬೆಲೆ ಏರಿಕೆ ಮಾಡಲಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು (ಪ್ರತಿ ಯೂನಿಟ್‌ಗೆ)?
- 2009: 34 ಪೈಸೆ ಹೆಚ್ಚಳ
- 2010: 30 ಪೈಸೆ ಹೆಚ್ಚಳ
- 2011: 28 ಪೈಸೆ ಹೆಚ್ಚಳ
- 2012: 13 ಪೈಸೆ ಹೆಚ್ಚಳ
- 2013:13 ಪೈಸೆ ಹೆಚ್ಚಳ
- 2017: 48 ಪೈಸೆ ಹೆಚ್ಚಳ
- 2019: 35 ಪೈಸೆ ಹೆಚ್ಚಳ
- 2020: 30 ಪೈಸೆ ಹೆಚ್ಚಳ