ಹೈಲೈಟ್ಸ್:
- ಜಮ್ಮು ಮತ್ತು ಕಾಶ್ಮೀರದ ಆಡಳಿತ ಸಂಬಂಧ ಬಿಜೆಪಿ ವಿರುದ್ಧ ಗುಲಾಂ ನಬಿ ಆಜಾದ್ ಕಿಡಿ
- ಮಹಾರಾಜರ ನಿರಂಕುಶ ಆಡಳಿತವೇ ಈಗಿನದ್ದಕ್ಕಿಂತ ಚೆನ್ನಾಗಿತ್ತು ಎಂದ ಹಿರಿಯ ಕಾಂಗ್ರೆಸಿಗ
- ಈ ಸರಕಾರ ವರ್ಷಕ್ಕೆ ಎರಡು ಬಾರಿ ನಡೆಯುವ ‘ದರ್ಬಾರ್ ಮೂವ್’ ಸಾಂಪ್ರದಾಯವನ್ನೂ ಸ್ಥಗಿತಗೊಳಿಸಿದೆ ಎಂದು ಆಕ್ರೋಶ
ಬಿಜೆಪಿ ವಿರುದ್ಧ ಕಿಡಿಕಾರಿರುವ ಆಜಾದ್, ಮಹಾರಾಜರ ನಿರಂಕುಶ ಆಡಳಿತವೇ ಈಗಿನದ್ದಕ್ಕಿಂತ ಚೆನ್ನಾಗಿತ್ತು. ಈ ಸರಕಾರ ವರ್ಷಕ್ಕೆ ಎರಡು ಬಾರಿ ನಡೆಯುವ ‘ದರ್ಬಾರ್ ಮೂವ್’ ಸಾಂಪ್ರದಾಯವನ್ನೂ ಸ್ಥಗಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದರ್ಬಾರ್ ಮೂವ್’ ಅಡಿಯಲ್ಲಿ ಎಲ್ಲಾ ಸಚಿವಾಲಯಗಳು ಮತ್ತು ಕಚೇರಿಗಳು ಬೇಸಿಗೆಯ ಆರು ತಿಂಗಳು ಶ್ರೀನಗರದಲ್ಲಿ ಮತ್ತು ವರ್ಷದ ಉಳಿದ ಭಾಗ ಜಮ್ಮುವಿನಲ್ಲಿ ಕಾರ್ಯನಿರ್ವಹಿಸುವುದು ರೂಢಿ. ಇದನ್ನು 1872ರಲ್ಲಿ ಅಂದಿನ ಮಹಾರಾಜ ಗುಲಾಬ್ ಸಿಂಗ್ ಪ್ರಾರಂಭಿಸಿದ್ದರು. ಇದನ್ನೀಗ ಸರಕಾರ ಸ್ಥಗಿತಗೊಳಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜೂನ್ 20 ರಂದು ಈ ಸಂಪ್ರದಾಯವನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದರು.
“ನಾನು ಯಾವಾಗಲೂ ದರ್ಬಾರ್ ಮೂವ್ ಅನ್ನು ಬೆಂಬಲಿಸುತ್ತಿದ್ದೆ. ಮಹಾರಾಜರು ಕಾಶ್ಮೀರ ಮತ್ತು ಜಮ್ಮು ಪ್ರದೇಶಗಳ ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ನಮಗೆ ಮೂರು ಕೊಡುಗೆಗಳನ್ನು ನೀಡಿದ್ದರು ಮತ್ತು ಅವುಗಳಲ್ಲಿ ಒಂದು ದರ್ಬಾರ್ ಮೂವ್,” ಎಂದು ಆಜಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಾರಾಜ (ಹರಿ ಸಿಂಗ್) ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭೂಮಿ ಮತ್ತು ಉದ್ಯೋಗಗಳ ರಕ್ಷಣೆಯನ್ನು ಖಾತ್ರಿಪಡಿಸಿದ್ದರು. ಆದರೆ, “ಬಹಳ ವರ್ಷಗಳ ನಂತರ ಇಂದು, ಸರ್ವಾಧಿಕಾರಿ ಎಂದು ಕರೆಯಲ್ಪಟ್ಟ ಮಹಾರಾಜರು ಈಗಿನ ಸರ್ಕಾರಕ್ಕಿಂತ ಉತ್ತಮವಾಗಿದ್ದರು. ಮಹಾರಾಜರ ಕಾರ್ಯಗಳು ಸಾರ್ವಜನಿಕರ ಕಲ್ಯಾಣಕ್ಕಾಗಿ ಇದ್ದವು. ಆದರೆ ಪ್ರಸ್ತುತ ಸರ್ಕಾರವು ಎಲ್ಲಾ ಮೂರು ವಿಷಯಗಳನ್ನೂ ಕಸಿದುಕೊಂಡಿದೆ. ದರ್ಬಾರ್ ಮೂವ್, ಭೂಮಿ ಮತ್ತು ಉದ್ಯೋಗಗಳ ರಕ್ಷಣೆಯನ್ನು ನಮ್ಮಿಂದ ಕಸಿದುಕೊಂಡಿದೆ,” ಎಂದು ಅವರು ಆರ್ಟಿಕಲ್ 370ರ ರದ್ದತಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಕಳೆದ ಎರಡೂವರೆ ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ನಡೆದ ಸರಣಿ ಸಾರ್ವಜನಿಕ ಸಭೆಗಳ ಸಂಬಂಧ ಪ್ರತಿಕ್ರಿಯಿಸಿರುವ ಗುಲಾಂ ನಬಿ ಆಜಾದ್, ಮುಂಬರುವ ವಿಧಾನಸಭಾ ಚುನಾವಣೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
“ವ್ಯಾಪಾರ, ಉದ್ಯೋಗ ಇಲ್ಲದೇ ಜನ ಕಂಗಾಲಾಗಿದ್ದಾರೆ. ಬೆಲೆ ಹೆಚ್ಚಿದ್ದು, ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ,” ಎಂದು ಅವರು ಹರಿಹಾಯ್ದಿದ್ದಾರೆ.
“ನಗರಗಳಲ್ಲಿ ಜನ ನೆಮ್ಮದಿಯಿಂದ ಇದ್ದಾರೆ ಎಂದು ನಾನು ಅಂದುಕೊಂಡಿದ್ದೆ. ರಘುನಾಥ್ ಬಜಾರ್, ಸಿಟಿ ಚೌಕ್ ಮತ್ತು ಕನಕ್ ಮಂಡಿ (ಜಮ್ಮುವಿನಲ್ಲಿದೆ) ಇಡೀ ವ್ಯಾಪಾರ ಸಮುದಾಯದ ನಾಡಿಮಿಡಿತವನ್ನು ಪ್ರತಿನಿಧಿಸುತ್ತದೆ. ನಾನು ಇಲ್ಲಿಗೆ ಭೇಟಿ ನೀಡಿದಾಗ ಪ್ರತಿ ಅಂಗಡಿಯಲ್ಲಿಯೂ ಕಳೆದ 5 ವರ್ಷಗಳಿಂದ ವ್ಯಾಪಾರ ಕಡಿಮೆಯಾದ ಬಗ್ಗೆ ಜನರು ನಿರಾಶೆಗೊಂಡಿರುವುದನ್ನು ಕಂಡುಕೊಂಡೆ,” ಎಂದು ವಿವರಿಸಿದ್ದಾರೆ.
“ಇಡೀ ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು ನಾವು ಬಡತನದ ಕಡೆಗೆ ಹೋಗುತ್ತಿದ್ದೇವೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದು, ಹೆಚ್ಚಿದ ಹಣದುಬ್ಬರ ಮತ್ತು ಶೂನ್ಯ ಅಭಿವೃದ್ಧಿ ಕಾರ್ಯಗಳು ಪ್ರಸ್ತುತ ಪರಿಸ್ಥಿತಿಯ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಆರೋಪಿಸಿದ್ದಾರೆ.
ಆದಾಗ್ಯೂ, ಈ ಪ್ರದೇಶದಲ್ಲಿ ಬೆಳೆಯುತ್ತಿರುವ ರಾಜಕೀಯ ಚಟುವಟಿಕೆಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ರಾಜಕಾರಣಿಗಳು ಕಳೆದ ಎರಡು ವರ್ಷಗಳಲ್ಲಿ (ಆಗಸ್ಟ್ 2019 ರಿಂದ) ಜನರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದರು. ಇದೀಗ ನಾವು ಚಟುವಟಿಕೆ ಪ್ರಾರಂಭಿಸುತ್ತಿದ್ದಂತೆ, ಇತರರೂ ನಮ್ಮನ್ನು ಅನುಸರಿಸಿದರು. ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮುವಿಗೆ ಆರು ಮತ್ತು ಕಾಶ್ಮೀರಕ್ಕೆ ಒಂದು ವಿಧಾನಸಭಾ ಸ್ಥಾನವನ್ನು ಹೆಚ್ಚಿಸುವ ಡಿಲಿಮಿಟೇಶನ್ ಆಯೋಗದ ಕರಡು ವರದಿಯ ಕುರಿತು ನೇರ ಉತ್ತರ ನೀಡಲು ನಿರಾಕರಿಸಿದ ಅವರು, “ನನಗೆ, ಜಮ್ಮು ಮತ್ತು ಕಾಶ್ಮೀರ ಒಂದೇ. ಆದ್ದರಿಂದ, ನಾನು ಒಂದು ಪ್ರದೇಶದ ಪರವಾದ ನಿರ್ಧಾರವನ್ನು ತೆಗೆದುಕೊಳ್ಳಲಾರೆ,” ಎಂದಿದ್ದಾರೆ.