Karnataka news paper

ಓಮಿಕ್ರಾನ್ ಆತಂಕ: ಅಂತರಾಷ್ಟ್ರೀಯ ಪ್ರಯಾಣಿಕ ಸಂಪರ್ಕಿತರಿಗೆ 7 ದಿನ ಹೋಂ ಐಸೋಲೇಷನ್!


The New Indian Express

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಆತಂಕ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರೊಂದಿಗೆ ಸಂಪರ್ಕದಲ್ಲಿರುವವರನ್ನು 7 ದಿನ ಹೋಂ ಐಸೋಲೇಷನ್ ನಲ್ಲಿರಿಸಲು ಆರೋಗ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ವಾರ್ ರೂಂ ನಲ್ಲಿರಿಸುವಂತೆ, ನಿರ್ಬಂಧಗಳನ್ನು ಹೇರುವಂತೆ ಹಾಗೂ ಕಣ್ಗಾವಲು ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದರಂದೆ ಕೋವಿಡ್ -19 ರಾಜ್ಯ ವಾರ್ ರೂಮ್‌ನ ನಿರ್ದೇಶಕ ಮುನಿಶ್ ಮೌದ್ಗಿಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಂತರಾಷ್ಟ್ರೀಯ ಪ್ರಯಾಣಿಕರೊಂದಿಗೆ ಸಂಪರ್ಕದಲ್ಲಿರುವವರನ್ನು 7 ದಿನ ಹೋಂ ಐಸೋಲೇಷನ್ ನಲ್ಲಿರಿಸಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕೋವಿಡ್-19: ರಾಜ್ಯದಲ್ಲಿಂದು 405 ಹೊಸ ಪ್ರಕರಣ ಪತ್ತೆ, 267 ಗುಣಮುಖ, 4 ಸೋಂಕಿತರು ಸಾವು

ರಾಜ್ಯದಲ್ಲಿ ಒಟ್ಟಾರೆ ಸೋಂಕು ನಿಯಂತ್ರಣದಲ್ಲಿದೆ. ರೋಗಿಗಳ ಸಂಪರ್ಕಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಿತರ ಮೇಲೆ ನಿಗಾ ಇಟ್ಟಿರುವುದರಿಂದ ಸೋಂಕಿ ಕಡಿಮೆಯಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರವು ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ಹಾಗೂ ಕ್ವಾರಂಟೈನ್ ನತ್ತ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಯಾವುದೇ ದೇಶದಿಂದ ಬಂದರೂ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಅವರೊಂದಿಗೆ ಸಂಪರ್ಕದಲ್ಲಿರುವ ಯಾವುದೇ ವ್ಯಕ್ತಿಗೆ 7 ದಿನಗಳ ಹೋಂ ಐಸೋಲೇಷನ್ ನಲ್ಲಿ ಇರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚು ಅಪಾಯವುಳ್ಳ ದೇಶಗಳಿಂದ ಬಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಅವರ ಆಗಮನದ ದಿನಾಂಕದಿಂದ ಫಾಲೋ-ಅಪ್ ಮತ್ತು 8 ನೇ ದಿನದಂದು ಪುನರಾವರ್ತಿತ RT-PCR ಪರೀಕ್ಷೆ ನಡೆಸಿ, ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾದ 24 ಗಂಟೆಗಳ ಒಳಗೆ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಸ್ಥಿರವಾಗಿ ಪತ್ತೆಹಚ್ಚಲು ಮತ್ತು ಕ್ವಾರಂಟೈನ್ ಮಾಡಲು ಆರೋಗ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕಣ್ಗಾವಲು ಅಧಿಕಾರಿಗಳನ್ನು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಸರ್ಕಾರ ಮತ್ತು ಬಿಬಿಎಂಪಿ ಪ್ರತಿ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡುತ್ತಿದೆ. ಕ್ವಾರಂಟೈನ್‌ ನಿಯಮ ಪಾಲನೆ ಆಗುತ್ತಿದೆಯೇ ಎಂದು ಪರಿಶೀಲಿಸಲು ಮನೆ ಭೇಟಿಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.



Read more