ಹೈಲೈಟ್ಸ್:
- ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಷಸ್ ಟ್ರೋಫಿ ಟೆಸ್ಟ್ ಸರಣಿ.
- ಮೂರನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ ಇಂಗ್ಲೆಂಡ್.
- ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XIನಲ್ಲಿ ಮೇಜರ್ ಸರ್ಜರಿ.
ಆಷಸ್ ಟೆಸ್ಟ್ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಅತ್ಯಂತ ಹೀನಾಯವಾಗಿ ಸೋಲು ಅನುಭವಿಸಿರುವ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ಮುಖಭಂಗ ಅನುಭವಿಸಿದೆ. ಹೀಗಾಗಿ, ಮೂರನೇ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹತ್ತರ ಬದಲಾವಣೆಯನ್ನು ಮಾಡಿಕೊಂಡಿದೆ.
ಐದು ಪಂದ್ಯಗಳ ಆಷಸ್ ಟೆಸ್ಟ್ ಸರಣಿಯಲ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡ 0-2 ಹಿನ್ನಡೆ ಅನುಭವಿಸಿದೆ. ಹಾಗಾಗಿ, ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂದರೆ ಮೆಲ್ಬೋರ್ನ್ ಟೆಸ್ಟ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಕೆಲ ಕೀ ಆಟಗಾರರಾದ ಜಾನಿ ಬೈರ್‌ಸ್ಟೋವ್, ಝ್ಯಾಕ್ ಕ್ರಾವ್ಲಿ, ಜ್ಯಾಕ್ ಲೀಚ್ ಹಾಗೂ ಮಾರ್ಕ್ ವುಡ್ ಅವರನ್ನು ನಾಳಿನ ಪಂದ್ಯದಲ್ಲಿ ಆಡಿಸಲಾಗುತ್ತಿದೆ.
‘4 ವರ್ಷಗಳ ಹಿಂದಿನ ತಪ್ಪನ್ನೇ ಮಾಡಿದ್ದೇವೆ’, ಸೋಲಿನ ಬಳಿಕ ರೂಟ್ ಹೇಳಿದ್ದಿದು!
ಡಿಸೆಂಬರ್ 8 ರಿಂದ 13ರವರೆಗೆ ಬ್ರಿಸ್ಬೇನ್ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಆಷಸ್ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 147 ರನ್‌ಗೆ ಆಲೌಟ್ ಆಗಿತ್ತು. ನಂತರ , ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕೊಂಚ ಸುಧಾರಿಸಿಕೊಂಡಿತ್ತಾದರೂ 297 ರನ್ ಗಳಿಗೆ ಆಲೌಟಾಗಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್‌ಗಳಿಂದ ಸೋತಿತ್ತು.
ನಂತರ, ಡಿಸೆಂಬರ್ 16 ರಿಂದ 20ರವರೆಗೆ ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಪುಟಿದೇಳುವಲ್ಲಿ ವಿಫಲವಾಗಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ 236 ರನ್‌ಗಳಿಗೆ ಆಲೌಟ್ ಆಗಿದ್ದ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ದ್ವಿತೀಯ ಇನಿಂಗ್ಸ್‌ನಲ್ಲಿ 468 ರನ್‌ಗಳ ಬೃಹತ್ ಗುರಿ ಇತ್ತು.
ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ 4 ಬದಲಾವಣೆ ಸೂಚಿಸಿದ ವಾರ್ನ್!
ಆದರೆ, ಜೇ ರಿಚರ್ಡ್ಸನ್(42ಕ್ಕೆ 5) ಮಾರಕ ದಾಳಿಗೆ ನಲುಗಿದ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 192 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ 275 ರನ್‌ಗಳ ಭಾರಿ ಅಂತರದಲ್ಲಿ ಪ್ರವಾಸಿ ತಂಡ ಹೀನಾಯ ಸೋಲಿನ ಮುಖಭಂಗ ಅನುಭವಿಸಿತ್ತು.
ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI: ಹಸೀಬ್ ಹಮೀದ್, ಝ್ಯಾಕ್ ಕ್ರಾವ್ಲೀ, ಡಾವಿಡ್ ಮಲಾನ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್(ವಿ.ಕೀ), ಮಾರ್ಕ್ ವುಡ್, ಓಲ್ಲೀ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್