Karnataka news paper

‘ಚಿಂತಕರ ಚಾವಡಿ’ ಪರಿಷತ್ ಈಗ ‘ಉಳ್ಳವರ ಮನೆ’; ಮೇಲ್ಮನೆ ಘನತೆ, ಪಾವಿತ್ರ್ಯತೆ ಕಳೆದುಹೋಗುತ್ತಿದೆ: ರಘು ಆಚಾರ್


The New Indian Express

ಬೆಳಗಾವಿ: ವಿಧಾನ ಪರಿಷತ್ ನ ಪರಂಪರೆ ಮತ್ತು ಈಗಿನ ವ್ಯವಸ್ಥೆಯ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ ನಿರ್ಗಮಿತ ಸದಸ್ಯ ರಘು ಆಚಾರ್, ಹಿರಿಯ ಸದಸ್ಯರ ತರಾಟೆಯಿಂದ ಕ್ಷಮೆ ಕೇಳಿದ ಪ್ರಸಂಗ ಜರುಗಿತು.

ಪರಿಷತ್ತಿನ ಕಲಾಪ ವೇಳೆ ಧನ ವಿಧೇಯಕದ ಮೇಲೆ ಮಾತು ಆರಂಭಿಸಿದ ರಘು ಆಚಾರ್ ಅವರು, ತಾವು ಎರಡು ಬಾರಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಅದಕ್ಕೆ ಅವಕಾಶ ಮಾಡಿಕೊಟ್ಟ ಚಿತ್ರದುರ್ಗ ಜಿಲ್ಲೆಯ ಜನರಿಗೆ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.

ಚಿಂತಕರ ಚಾವಡಿಯಾದ ಮೇಲ್ಮನೆಗೆ ಇತ್ತೀಚೆಗೆ ಚಿಂತಕರೇ ಬರುತ್ತಿಲ್ಲ. ಹೀಗಾಗಿ, ಇಲ್ಲಿನ ಘನತೆ, ಪಾವಿತ್ರ್ಯತೆ ಕಳೆದುಹೋಗುತ್ತಿದೆ’ ಎಂದು ಕಾಂಗ್ರೆಸ್ಸಿನ ರಘು ಆಚಾರ್‌ ಅವರ ವಿದಾಯದ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸದನದಲ್ಲಿ ಹಾಜರಿದ್ದ ಇತರ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಪರಿಷತ್‌ನಲ್ಲಿ ಗುರುವಾರ ನಡೆಯಿತು.

ರಘು ಆಚಾರ್‌ ಅವರ ಅವಧಿ ಜ. 5ಕ್ಕೆ ಮುಗಿಯಲಿದೆ. ಎರಡು ಅವಧಿಗೆ ಪರಿಷತ್‌ ಸದಸ್ಯರಾಗಿರುವ ಅವರು, ತಮ್ಮ ಮಾತುಗಳ ಮಧ್ಯೆ ಪರಿಷತ್‌ನ ಘನತೆ, ಗಾಂಭೀರ್ಯದ ಬಗ್ಗೆ ಬಳಸಿದ ಪದಗಳು ಇತರ ಸದಸ್ಯರನ್ನು ಕೆರಳಿಸಿತು.

ಪರಿಷತ್ ಇತ್ತೀಚೆಗೆ ಕೆಟ್ಟು ಹೋಗುತ್ತಿದೆ. ಹಿಂದೆ ಇಲ್ಲಿ ಮಹಾನ್ ನಾಯಕರು ಇದ್ದರು. ಈಗ ಪರಸ್ಪರ ಎರಡೂ ಕಡೆ ಕಿರುಚುತ್ತಾರೆ. ಹಿಂದೆ ಕೇಳಿಸಿಕೊಳ್ಳುವ ಕಿವಿಗಳಿದ್ದುವು. ಆದರೆ, ಈಗ ಮಾತನಾಡಿದರೂ ಕೇಳಿಸಿಕೊಳ್ಳುವವರಿಲ್ಲ. ಈ ಅವ್ಯವಸ್ಥೆ ಮೇಲ್ಮನೆಗೆ ಬರಬಾರದು. ಮೊದಲ ಅವಧಿಯಲ್ಲಿ ಕಲಾಪಕ್ಕೆ ಬರುತ್ತಿದ್ದ ನಾನು, ಇತ್ತೀಚೆಗೆ ಇಲ್ಲಿಗೆ ಬರುವುದನ್ನೇ ಬಿಟ್ಟಿದ್ದೇನೆ’ ಎಂದು ರಘು ಆಚಾರ್‌ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಎಸ್ಆರ್ ಪಾಟೀಲ್​ ವಿದಾಯ ಭಾಷಣ; 2 ದಶಕಗಳ ನಂತರ ಮೇಲ್ಮನೆಯಿಂದ ಹೊರನಡೆದ ಮುತ್ಸದ್ದಿ

‘ಮೇಲ್ಮನೆ ಕೆಳಮನೆಗಿಂತ ಮೊದಲೇ ಹುಟ್ಟಿದ್ದು. ಈ ಮನೆಯಲ್ಲಿ ಬುದ್ಧಿವಂತರಿಗೆ ಮಾತ್ರ ಅವಕಾಶ ಕೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ಎಲ್ಲ ಪಕ್ಷಗಳು ಮೇಲ್ಮನೆ ಸದಸ್ಯರಾಗಿ ಮಾಡುತ್ತಿವೆ. ನಾನು ಮುಂದಿನ ಸಲ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದರು.

‘ಬಹಳ ದೊಡ್ಡ ಇತಿಹಾಸ ಇರುವ ಜಾಗದಲ್ಲಿ ನಿಂತು ರಘು ಆಚಾರ್‌ ಹಗುರವಾಗಿ ಮಾತಾಡುತ್ತಿದ್ದಾರೆ ಅನಿಸುತ್ತಿದೆ. ಆ ಮೂಲಕ, ಸದನಕ್ಕೆ, ಪರಂಪರೆಗೆ ಅಪಮಾನ ಮಾಡಿದ್ದಾರೆ. ಈ ಸದನಕ್ಕೆ ಬರುವವರು ಕಷ್ಟ ಪಟ್ಟು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಬಡವರ ಪರ, ದೀನದಲಿತರ ಪರ, ಅಂಗವಿಕಲರ ಪರ ಧ್ವನಿ ಎತ್ತಲು ಗುರಿ ಇಟ್ಟುಕೊಂಡು ಬರಬೇಕು. ಅದು ಬಿಟ್ಟು ಯಾವುದೊ ಮಾರ್ಗದಲ್ಲಿ ಬಂದು ಹೋಗುವಾಗ ಹೀಗೆ ಮಾತಾಡುವುದು ಸರಿಯಲ್ಲ’ ಎಂದು ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ರಘು ಆಚಾರ್ ಮಾತಾಡುವಾಗ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಘು ಆಚಾರ್ ನೀನು ಒಳ್ಳೇ ರೀತಿ ಮಾತಾಡ್ತಿದ್ದೀಯ. ಆದರೆ, ಇಷ್ಟು ದಿನ ಯಾಕೆ ಮಾತನಾಡಿಲ್ಲ. ಕೊನೆಯ ದಿನ ಈ‌ ರೀತಿ ಮಾತನಾಡುತ್ತಿಯಲ್ಲ ಯಾಕೆ’ ಎಂದು ನಗುತ್ತಲೇ ಕುಟುಕಿದರು. ಕೊನೆಗೆ, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದೂ ರಘು ಆಚಾರ್‌ ಹೇಳಿದರು.



Read more