Karnataka news paper

ಮಹಿಳೆಯರು, ಮಕ್ಕಳಲ್ಲಿ ಹೆಚ್ಚಿದ ರಕ್ತಹೀನತೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಬಹಿರಂಗ!


ಹೈಲೈಟ್ಸ್‌:

  • ರಕ್ತ ಹೀನತೆ ಸಮಸ್ಯೆ ಮಹಿಳೆಯರಲ್ಲಿ ಶೇ.48ರಷ್ಟು ಏರಿಕೆಯಾಗಿದ್ದರೆ, 6 ತಿಂಗಳಿನಿಂದ 59 ತಿಂಗಳವರೆಗಿನ ಮಕ್ಕಳಲ್ಲಿ ಈ ಪ್ರಮಾಣ ಶೇ.66 ಹೆಚ್ಚಾಗಿದೆ
  • ಅಪೌಷ್ಟಿಕತೆ ಮತ್ತು ಕಬ್ಬಿಣಾಂಶ ಕಡಿಮೆಯಾಗುವುದರಿಂದ ಶರೀರದಲ್ಲಿ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ
  • ನಗರ ಪ್ರದೇಶದಲ್ಲಿ ಶೇ.62.8 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.67.1ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ

ಮಹಾಬಲೇಶ್ವರ ಕಲ್ಕಣಿ, ಬೆಂಗಳೂರು
ಬೆಂಗಳೂರು: ಕರ್ನಾಟಕದಲ್ಲಿ ರಕ್ತ ಹೀನತೆ ಹಾಗೂ ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮಿಕ್ಷೆಯಿಂದ ಬಹಿರಂಗವಾಗಿದೆ.

ರಕ್ತ ಹೀನತೆ ಸಮಸ್ಯೆ ಮಹಿಳೆಯರಲ್ಲಿ ಶೇ.48ರಷ್ಟು ಏರಿಕೆಯಾಗಿದ್ದರೆ, 6 ತಿಂಗಳಿನಿಂದ 59 ತಿಂಗಳವರೆಗಿನ ಮಕ್ಕಳಲ್ಲಿ ಈ ಪ್ರಮಾಣ ಶೇ.66 ಹೆಚ್ಚಾಗಿದೆ. 2015-16ಕ್ಕೆ ಹೋಲಿಕೆ ಮಾಡಿದರೆ ರಕ್ತ ಹೀನತೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಶೇ.5ಕ್ಕೆ ಹಾಗೂ ಮಹಿಳೆಯರ ಸಂಖ್ಯೆ ಶೇ.3ಕ್ಕೆ ಏರಿಕೆಯಾಗಿದೆ.
ರಕ್ತಹೀನತೆ ಸಮಸ್ಯೆ ಇದ್ದವರು, ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬಾರದಂತೆ!!

”ಅಪೌಷ್ಟಿಕತೆ ಮತ್ತು ಕಬ್ಬಿಣಾಂಶ ಕಡಿಮೆಯಾಗುವುದರಿಂದ ಶರೀರದಲ್ಲಿ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆ ಉಂಟಾದಾಗ ರಕ್ತದ ಮೂಲಕ ಶರೀರದಾದ್ಯಂತ ಆಮ್ಲಜನಕ ಪೂರೈಕೆ ಸಾಮರ್ಥ್ಯವು ಕಡಿಮೆಯಾಗುತ್ತದೆ. ಆರೋಗ್ಯಕರ ಮಹಿಳೆಯಲ್ಲಿ ಹಿಮೊಗ್ಲೋಬಿನ್‌ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ 12 ಗ್ರಾಂ(ಜಿ/ಡಿಎಲ್‌) ಇರಬೇಕು. ಆರು ತಿಂಗಳಿಗೂ ಕಡಿಮೆ ಪ್ರಾಯದ ಶಿಶುಗಳಿಗೆ ಪ್ರತಿದಿನ 0.27 ಮಿಲಿಗ್ರಾಂ ಕಬ್ಬಿಣಾಂಶ ಅಗತ್ಯವಾಗಿರುತ್ತದೆ,” ಎನ್ನುತ್ತಾರೆ ಕಿಮ್ಸ್‌ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಪ್ರಧ್ಯಾಪಕ ಡಾ.ಕೆ.ಪಿ.ಬಾಲರಾಜ್‌.
ಓಮಿಕ್ರಾನ್‌ ಜತೆಗೆ ರಾಜ್ಯದಲ್ಲಿ ಸದ್ದಿಲ್ಲದೇ ಏರಿಕೆಯಾಗುತ್ತಿದೆ ಕೊರೊನಾ; 456 ಪ್ರಕರಣ ಪತ್ತೆ
ಗ್ರಾಮೀಣರಲ್ಲಿ ಸಮಸ್ಯೆ ಹೆಚ್ಚು
ನಗರ ಪ್ರದೇಶದಲ್ಲಿ ಶೇ.62.8 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.67.1ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು ಸೂಕ್ತ ವಿಧಾನದ ಚಿಕಿತ್ಸೆ ನೀಡಿದರಷ್ಟೇ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಲು ಸಾಧ್ಯ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

ರಕ್ತಹೀನತೆ ಪ್ರಸವಪೂರ್ವ ಹಾಗೂ ಪ್ರಸವದ ನಂತರದಲ್ಲಿ ತಾಯಂದಿರ ಸಾವಿಗೂ ಕಾರಣವಾಗಬಹುದು. ನಿಶ್ಶಕ್ತಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಸಿತ, ಅವಧಿಗೂ ಮುನ್ನ ಪ್ರಸವ, ಕಡಿಮೆ ತೂಕದ ಶಿಶುಗಳ ಜನನಕ್ಕೂ ಕಾರಣವಾಗಬಹುದಾಗಿದೆ.

ರಕ್ತಹೀನತೆ ಸಮಸ್ಯೆಗೆ ಈ ರೀತಿ ಆಹಾರ ಕ್ರಮವಿರಲಿ

ರಕ್ತ ಹೀನತೆಗೆ ಕಬ್ಬಿಣಾಂಶ ಕಡಿಮೆ ಇರುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. 15-19 ವರ್ಷ ವಯೋಮಾನದ ಯುವತಿಯರಲ್ಲಿ ರಕ್ತಹೀನತೆಯ ಪ್ರಮಾಣ, 2015-16ಕ್ಕೆ ಹೋಲಿಸಿದರೆ ಶೇ. 4ರಷ್ಟು ಹೆಚ್ಚಾಗಿದೆ. ಇದೇ ವೇಳೆ ಪುರುಷರಲ್ಲೂ ಕೂಡ ರಕ್ತ ಹೀನತೆಯ ಪ್ರಮಾಣ ತುಸು ಹೆಚ್ಚಾಗಿದೆ. 2015-16ಕ್ಕೆ ಹೋಲಿಸಿದರೆ, 15ರಿಂದ 49 ವರ್ಷ ವಯೋಮಾನವರಲ್ಲಿ ಶೇ.1 ಹಾಗೂ 15-19 ವಯೋಮಾನದವರಲ್ಲಿ ಶೇ.2.5 ಅಧಿಕವಾಗಿದೆ.



Read more