ಹುಬ್ಬಳ್ಳಿ: ದಿ. ಅಟಲ್ ಬಿಹಾರ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಶನಿವಾರ ಇಲ್ಲಿನ ಹೆಗ್ಗೇರಿ ರುದ್ರಭೂಮಿ ಸ್ವಚ್ಛತಾ ಅಭಿಯಾನ ನಡೆಯಿತು.
ಸಿದ್ಧಾರೂಢ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ರುದ್ರಭೂಮಿ ಸುಧಾರಕ ಹುಸನಪ್ಪ ವಜ್ಜಣ್ಣವರ ಅವರ ತಂಡದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಸಚಿವ ಜೋಶಿ ರುದ್ರಭೂಮಿಯಲ್ಲಿ ಬೆಳೆದ ಗಿಡಗಂಟಿಗಳನ್ನು ಕಿತ್ತು, ತಡೆಗೋಡೆಗೆ ಬಣ್ಣ ಬಳಿದರು. ಅವರಿಗೆ ಸ್ಥಳೀಯ ನಿವಾಸಿಗಳು, ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು.
ನಂತರ ಮಾತನಾಡಿದ ಸಚಿವ ಜೋಶಿ, ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಸ್ಮಶಾನ ಸ್ವಚ್ಛತೆ ಹಮ್ಮಿಕೊಳ್ಳಲಾಗಿದೆ. ಗಿಡಗಂಟಿಗಳನ್ನು ಶುಚಿಗೊಳಿಸಿ, ಬಣ್ಣ ಬಳಿಯಲಾಗುತ್ತಿದೆ. ಅವಳಿನಗರದ ಎಲ್ಲ ಸ್ಮಶಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಮಾತನಾಡಿ, 12 ಎಕರೆಯಷ್ಟು ವಿಸ್ತೀರ್ಣವಿರುವ ಹೆಗ್ಗೇರಿ ರುದ್ರಭೂಮಿಯನ್ನು ಒಂದು ಕಡೆ ಅತಿಕ್ರಮಣ ಮಾಡಲಾಗಿದೆ. ಅತಿಕ್ರಮಣ ಜಾಗ ತೆರವುಗೊಳಿಸಿ ತಡೆಗೋಡೆ ನಿರ್ಮಿಸಲಾಗುವುದು. ಈಗಿರುವ ತಡೆಗೋಡೆ ಚಿಕ್ಕದಾಗಿದ್ದು, ಕಿಡಿಗೇಡಿಗಳು ಅದನ್ನು ಹಾರಿ ಒಳಗೆ ಬಂದು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಡೆಗೋಡೆ ಎತ್ತರಿಸಲು ನಿರ್ಧರಿಸಲಾಗಿದೆ ಎಂದರು.
ರುದ್ರಭೂಮಿಯಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಹೈ ಮಾಸ್ಟ್ ದೀಪ ಅಳವಡಿಕೆ ಮಾಡಲಾಗುವುದು. ಪಾದಚಾರಿ ಮಾರ್ಗದಲ್ಲಿ ಸಸಿ ನೆಡುವ ಕುರಿತು ಅರಣ್ಯ ಇಲಾಖೆ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಭು ನವಲಗುಂದಮಠ, ಪರಶುರಾಮ ಪೂಜಾರ, ಉಮೇಶ ದುಷಿ, ಸರಸ್ವತಿ ದೋಂಗಡಿ, ರೂಪಾ ಶೆಟ್ಟಿ, ಶಿವು ಮೆಣಸಿನಕಾಯಿ, ರಾಜಣ್ಣ ಕೊರವಿ, ಬೀರಪ್ಪ ಖಂಡೇಕಾರ, ಸತೀಶ ಹಾನಗಲ್, ಮಂಜುನಾಥ ಕಾಟಕರ, ಅಣ್ಣಪ್ಪ ಗೋಕಾಕ, ಅನೂಪ್ ಬಿಜವಾಡ ಇದ್ದರು.
ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರೋಧ