Karnataka news paper

ಕ್ರೆಡಿಟ್‌ ಸ್ಕೋರ್‌ ಕಡಿಮೆಯಿದ್ರೂ ಸಿಗತ್ತೆ ಗೃಹಸಾಲ? ನೀವು ಮಾಡಬೇಕಿರುವು ಇಷ್ಟೇ!


ಹೈಲೈಟ್ಸ್‌:

  • ಕ್ರೆಡಿಟ್‌ ಸ್ಕೋರ್‌ ಕಡಿಮೆಯಿದ್ರೂ ಪಡೆಯಬಹುದೇ ಗೃಹಸಾಲ?
  • ಸಾಲ ಪಡೆಯಲು ನೀವು ಏನು ಮಾಡಬೇಕು?
  • ಇಲ್ಲಿದೆ ಸಮಗ್ರ ಮಾಹಿತಿ

ಮನೆ ಖರೀದಿಗೆ ಗೃಹಸಾಲ ಪಡೆಯಲು ಹೊರಟಾಗ ಬ್ಯಾಂಕಿನವರು ‘ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆಯಿದೆ, ಸಾಲ ನೀಡಲಾಗದು’ ಎನ್ನಬಹುದು. ಆಗ ಸಾಲ ಪಡೆಯಲು ಏನು ಮಾಡಬೇಕೆಂಬ ಬಗ್ಗೆ ಇಲ್ಲೊಂದಿಷ್ಟು ಸಲಹೆಗಳಿವೆ.

ಈಗ ದೇಶದ ವಿವಿಧ ಬ್ಯಾಂಕ್‌ಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿವೆ. ಹೆಚ್ಚಿನ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದ ಸಾಲವು ‘ಉತ್ತಮ ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಮಾತ್ರ’ ಎಂಬ ಷರತ್ತನ್ನು ಸೇರಿಸಿರುವುದನ್ನೂ ನೀವು ಗಮನಿಸಿರಬಹುದು. ಕಡಿಮೆ ಬಡ್ಡಿದರದ ಈ ಪರ್ವಕಾಲದಲ್ಲಿ ಲಾಭದಾಯಕ ‘ಡೀಲ್‌’ ನಿಮ್ಮದಾಗಿಸಿಕೊಳ್ಳಲು ಉತ್ತಮ ಕ್ರೆಡಿಟ್‌ ಸ್ಕೋರ್‌ (ಉದಾ, ಕನಿಷ್ಠ 750 ಅಂಕ) ಹೊಂದಿರುವುದು ಅತ್ಯಂತ ಅವಶ್ಯವಾಗಿದೆ.

ಸಾಲಕ್ಕೆ ಅರ್ಜಿ ಸಲ್ಲಿಸಿ ಕ್ರೆಡಿಟ್‌ ಸ್ಕೋರ್‌ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ನಿಮ್ಮ ಸ್ಕೋರ್‌ ಕಡಿಮೆ ಇದ್ದರೆ ‘ಸಾಲ ನೀಡಲಾಗುವುದಿಲ್ಲ’ ಎಂದು ಬ್ಯಾಂಕಿನವರು ಹೇಳಿ ಬಿಡಬಹುದು. ಇಂತಹ ಸಮಯದಲ್ಲಿಯೂ ಸಾಲ ಪಡೆಯಲು ಬಯಸಿದರೆ ನಿಮ್ಮ ಮುಂದೆ ಈ ಮುಂದಿನ ದಾರಿಗಳಿವೆ.

ಗೃಹ ಸಾಲದ ಇಎಂಐ ಇಳಿಕೆ ಮಾಡುವುದು ಹೇಗೆ? ಇಲ್ಲಿದೆ ಒಂದಿಷ್ಟು ಟಿಪ್ಸ್

ಹೆಚ್ಚು ಬಡ್ಡಿದರ ಪಾವತಿಸಿ!
ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಉತ್ತಮ ಸಿಬಿಲ್‌ ಸ್ಕೋರ್‌ ಅಗತ್ಯ. ಆದರೆ ಎಲ್ಲಾ ಬ್ಯಾಂಕುಗಳು ಕ್ರೆಡಿಟ್‌ ಸ್ಕೋರ್‌ ಕಡಿಮೆ ಇದ್ದರೂ ಸಾಲ ನೀಡುವುದಿಲ್ಲ ಎಂದು ಕಡಾಖಂಡಿತವಾಗಿ ಹೇಳುವುದಿಲ್ಲ. ಕೆಲವೊಂದು ಬ್ಯಾಂಕ್‌ಗಳು ಕಡಿಮೆ ಕ್ರೆಡಿಟ್‌ ಸ್ಕೋರ್‌ ಇರುವವರಿಗೂ ಹೆಚ್ಚು ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಇಂತಹ ಸಮಯದಲ್ಲಿ ಈ ಬ್ಯಾಂಕ್‌ಗಳು ‘ರಿಸ್ಕ್‌ ಪ್ರೀಮಿಯಂ ಶುಲ್ಕ’ ವಿಧಿಸಬಹುದು. ರಿಸ್ಕ್‌ ಪ್ರೀಮಿಯಂ ಹಾಗೂ ಹೆಚ್ಚಿನ ಬಡ್ಡಿದರದಿಂದಾಗಿ ಇಎಂಐ ಮೊತ್ತವೂ ಅಧಿಕವಾಗುತ್ತದೆ. ಬ್ಯಾಂಕ್‌ಗಳು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಸಾಲ ಪಡೆದವರ ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿ, ರಿಸ್ಕ್‌ ಪ್ರೀಮಿಯಂ ಮರುಹೊಂದಿಸುತ್ತವೆ. ನೀವು ಸಾಲ ಪಡೆದ ಬಳಿಕ ಕ್ರೆಡಿಟ್‌ ಸ್ಕೋರ್‌ ಉತ್ತಮಪಡಿಸಿಕೊಂಡರೆ ರಿಸ್ಕ್‌ ಪ್ರೀಮಿಯಂ ಕಡಿಮೆಯಾಗಬಹುದು.

ಎಲ್‌ಟಿವಿ ಕಡಿಮೆ ಮಾಡುವ ಆಯ್ಕೆ
ಎಲ್ಲಾದರೂ ಲೋನ್‌ ಟು ವ್ಯಾಲ್ಯೂ (ಎಲ್‌ಟಿವಿ) ಪ್ರಮಾಣ ಕಡಿಮೆ ಮಾಡಬಹುದೇ ಎಂದು ಯೋಚಿಸಿ. ಸಾಲದ ಮೊತ್ತವನ್ನು ಕಡಿಮೆ ಮಾಡುವ ಮೂಲಕ ಎಲ್‌ಟಿವಿ ಕಡಿಮೆ ಮಾಡಿಕೊಂಡರೆ ಬ್ಯಾಂಕ್‌ಗಳು ಸಾಲ ನೀಡಲು ಒಪ್ಪಬಹುದು. ಆದರೆ, ಉಳಿದ ಮೊತ್ತವನ್ನು ನೀವು ಕಿಸೆಯಿಂದ ಹಾಕಬೇಕಾಗುತ್ತದೆ!. ನಿಮ್ಮ ಕ್ರೆಡಿಟ್‌ ಸ್ಕೋರ್‌ ತೀರಾ ಕಡಿಮೆಯಿದ್ದರೆ ಈ ಆಯ್ಕೆಗೂ ಬ್ಯಾಂಕ್‌ಗಳು ಒಪ್ಪುವುದು ಕಷ್ಟ.

ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ: ಗೃಹ ಸಾಲದ ಮೇಲೆ ಭರ್ಜರಿ ಆಫರ್!

ಸಹ-ಅರ್ಜಿದಾರರು
ಉತ್ತಮ ಕ್ರೆಡಿಟ್‌ ಸ್ಕೋರ್‌ ಇರುವ ಸಹ-ಅರ್ಜಿದಾರರನ್ನು ಸೇರಿಸಿಕೊಂಡರೆ ನಿಮಗೆ ಸಾಲ ದೊರಕಬಹುದು. ಅಂದರೆ, ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆಯಿದ್ದರೂ ಸಹ-ಅರ್ಜಿದಾರರ ನೆರವಿನಿಂದ ಸಾಲ ಪಡೆಯಬಹುದು. ನಿಮ್ಮ ಸಂಗಾತಿ, ಹೆತ್ತವರು ಅಥವಾ ಉದ್ಯೋಗದಲ್ಲಿರುವ ಸಹೋದರರನ್ನೂ ಸಹ-ಅರ್ಜಿದಾರರನ್ನಾಗಿ ಮಾಡಿಕೊಳ್ಳಬಹುದು. ನೆನಪಿಡಿ, ಅಣ್ಣ-ತಮ್ಮ, ಅಕ್ಕ-ತಂಗಿ, ಮದುವೆಯಾಗದ ಮಗಳು ಇರುವ ತಂದೆ/ತಾಯಿಯನ್ನು ಸಹ-ಸಾಲಗಾರರನ್ನಾಗಿ ಮಾಡಲು ಕೆಲವು ಬ್ಯಾಂಕ್‌ಗಳು ಸಮ್ಮತಿ ನೀಡದೆಯೂ ಇರಬಹುದು.

ಎಚ್‌ಎಫ್‌ಸಿಯಿಂದ ಸಾಲ
ಕಡಿಮೆ ಕ್ರೆಡಿಟ್‌ ಸ್ಕೋರ್‌ನಿಂದಾಗಿ ಬ್ಯಾಂಕ್‌ಗಳು ನಿಮಗೆ ಸಾಲ ನೀಡದೆ ಇದ್ದಾಗ ಹೌಸಿಂಗ್‌ ಫೈನಾನ್ಸ್‌ ಕಂಪನಿಗಳಲ್ಲಿ (ಎಚ್‌ಎಫ್‌ಸಿ) ಸಾಲ ಪಡೆಯಲು ಪ್ರಯತ್ನಿಸಬಹುದು. ಬ್ಯಾಂಕ್‌ಗಳಿಗೆ ಹೋಲಿಸಿದರೆ ಎಚ್‌ಎಫ್‌ಸಿಗಳ ಬಡ್ಡಿದರ ತುಸು ಹೆಚ್ಚಿರುತ್ತದೆ. ಇತ್ತೀಚೆಗೆ ಬಹುತೇಕ ಎಚ್‌ಎಫ್‌ಸಿಗಳು ಬ್ಯಾಂಕ್‌ಗಳ ಜೊತೆಗೆ ಸ್ಫರ್ಧೆಗೆ ಬಿದ್ದು ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡತೊಡಗಿವೆ. ಆದರೆ, ಎಚ್‌ಎಫ್‌ಸಿಗಳು ಆರ್‌ಬಿಐನ ರೆಪೊ ದರ ಕಡಿತ ಇತ್ಯಾದಿಗಳ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಹಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ.

ಚೌಕಾಶಿ ಮಾಡಿ
ನಿಮ್ಮ ಬ್ಯಾಂಕ್‌ ಜತೆ ಸಾಕಷ್ಟು ಬಾರಿ ಮಾತುಕತೆ, ಚರ್ಚೆ, ಚೌಕಾಶಿ ಮಾಡಿ ಸಾಲ ಪಡೆಯಲು ಪ್ರಯತ್ನಿಸಬಹುದು. ಕಡಿಮೆ ಎಲ್‌ಟಿವಿಯ ಆಯ್ಕೆಗೆ ಪ್ರಯತ್ನಿಸುವುದು, ನಿಮಗೆ ಇರುವ ಇತರೆ ಆದಾಯ ಮೂಲಗಳನ್ನು ತೋರಿಸುವ ಮೂಲಕ ಸಾಲ ಪಡೆಯಲು ಪ್ರಯತ್ನಿಸಬಹುದು. ಇಲ್ಲೂ, ನಿಮ್ಮ ಕ್ರೆಡಿಟ್‌ ಸ್ಕೋರ್‌ ತೀರಾ ಕಡಿಮೆಯಿದ್ದರೆ ಬ್ಯಾಂಕ್‌ಗಳು ಸಾಲ ನೀಡಲು ಒಪ್ಪುವುದು ಕಷ್ಟ.

ಗೃಹ ಸಾಲ ಪಡೆಯುವವರಿಗೆ ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಹಬ್ಬದ ಆಫರ್‌: ಬಡ್ಡಿ 6.5% ಕ್ಕೆ ಇಳಿಕೆ

ಬೇರೆ ಸಣ್ಣ ಸಾಲಗಳನ್ನು ತೀರಿಸಿ
ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮಪಡಿಸಲು ಪ್ರಯತ್ನಿಸಿ. ಕ್ರೆಡಿಟ್‌ ಕಾರ್ಡ್‌ನಿಂದ ಪಡೆದ ಸಾಲ ಇತ್ಯಾದಿಗಳನ್ನು ತೀರಿಸಲು ಪ್ರಯತ್ನಿಸಿ. ಬ್ಯಾಂಕ್‌ಗಳಲ್ಲಿ ಬೇರೆ ಸಣ್ಣ ಸಾಲಗಳನ್ನು ಹೊಂದಿದ್ದರೆ ಅದನ್ನೂ ತೀರಿಸಿ. ಈಗಾಗಲೇ ಇರುವ ಸಾಲವನ್ನು ತೀರಿಸುವ ಮೂಲಕ ಕ್ರೆಡಿಟ್‌ ಸ್ಕೋರ್‌ ಉತ್ತಮಪಡಿಸಬಹುದು. ಕಡಿಮೆ ಮೊತ್ತದ ಸಾಲಗಳನ್ನು ತೀರಿಸಿದ ಬಳಿಕ ದೊಡ್ಡಮೊತ್ತದ ಸಾಲ ಪಡೆಯಿರಿ.

ಬೆಸ್ಟ್‌ ಕ್ರೆಡಿಟ್‌ ಸ್ಕೋರ್‌
ಕ್ರೆಡಿಟ್‌ ರೇಟಿಂಗ್‌ ಎನ್ನುವುದು ನಿರ್ದಿಷ್ಟ ಸಾಲ ಅಥವಾ ಹಣಕಾಸಿನ ಬಾಧ್ಯತೆಗೆ ಸಂಬಂಧಿಸಿದಂತೆ ಸಾಲಗಾರನ ಅರ್ಹತೆಯ ಪ್ರಮಾಣೀಕೃತ ಮೌಲ್ಯಮಾಪನ. ಭಾರತದ ಕ್ರೆಡಿಟ್‌ ಬ್ಯೂರೋ ನೀಡುವ ಈ ಕ್ರೆಡಿಟ್‌ ಸ್ಕೋರ್‌ ಗ್ರಾಹಕರ ಸಾಲದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಗ್ರಾಹಕರ ಕ್ರೆಡಿಟ್‌ ಹಿಸ್ಟರಿ ಮೇಲೆ ಈ ಅಂಕ ನೀಡಲಾಗುತ್ತದೆ. ಸಾಮಾನ್ಯವಾಗಿ ಕ್ರೆಡಿಟ್‌ ಸ್ಕೋರ್‌ 300ರಿಂದ 900ರವರೆಗೆ ಇರುತ್ತದೆ. ಇಲ್ಲಿ 700ಕ್ಕಿಂತ ಹೆಚ್ಚು ಕ್ರೆಡಿಟ್‌ ಸ್ಕೋರ್‌ ಹೊಂದಿರುವವರನ್ನು ‘ಬೆಸ್ಟ್‌ ಕ್ರೆಡಿಟ್‌ ಸ್ಕೋರ್‌ ಹೊಂದಿರುವ ಗ್ರಾಹಕ’ ಎಂದು ಬ್ಯಾಂಕ್‌ಗಳು ಪರಿಗಣಿಸುತ್ತವೆ. ಸಾಲ ಪಡೆದಿದ್ದರೆ ಸರಿಯಾದ ಸಮಯದಲ್ಲಿ ಪಾವತಿಸಿ, ನಿಗದಿತ ಸಮಯದಲ್ಲಿ ಇಎಂಐ ಮತ್ತು ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಿ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿಸಿಕೊಳ್ಳಬಹುದು.

ಯಾಕೆ ಕ್ರೆಡಿಟ್‌ ಸ್ಕೋರ್‌ಗೆ ಆದ್ಯತೆ
ಕೋವಿಡ್‌-19ನಿಂದಾಗಿ ಜಗತ್ತಿನಾದ್ಯಂತ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಭಾರತ ಸೇರಿದಂತೆ ಹೆಚ್ಚಿನ ಎಲ್ಲಾದೇಶಗಳಲ್ಲಿ ಜನರಲ್ಲಿ ಉದ್ಯೋಗ ಅಭದ್ರತೆ ಕಾಡುತ್ತಿದೆ. ಇಂತಹ ಸಮಯದಲ್ಲಿ ಸಾಲ ಮರುಪಾವತಿಸದೆ ಇರುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಹೀಗಾಗಿ, ಬ್ಯಾಂಕ್‌ಗಳು ಸಾಲ ನೀಡುವಾಗ ಹೆಚ್ಚಿನ ಜಾಗ್ರತೆ ವಹಿಸುತ್ತಿವೆ. ಅತ್ಯುತ್ತಮ ಕ್ರೆಡಿಟ್‌ ಇತಿಹಾಸ ಹೊಂದಿರುವವರಿಗೆ ಮಾತ್ರ ಸಾಲ ನೀಡಲು ಮುಂದಾಗುತ್ತಿವೆ. ಎಲ್ಲಾ ಬ್ಯಾಂಕ್‌ಗಳು ಮತ್ತು ಸಾಲದಾತ ಸಂಸ್ಥೆಗಳು ಸಿಬಿಲ್‌ಗೆ ಸಾಲದ ವರದಿಯನ್ನು ಕಳುಹಿಸುತ್ತವೆ. ಈ ಮಾಹಿತಿಯನ್ನು ಕ್ರೆಡಿಟ್‌ ವರದಿಯವರು ಕ್ರೆಡಿಟ್‌ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ನಂತರ ಸಿಬಿಲ್‌ ಸ್ಕೋರ್‌ ಮೌಲ್ಯಮಾಪನ ಮಾಡಿ ಗ್ರಾಹಕರಿಗೆ ಸಾಲ ನೀಡುವ ಕುರಿತು ಬ್ಯಾಂಕ್‌ಗಳು ತೀರ್ಮಾನಿಸುತ್ತವೆ. ಗ್ರಾಹಕರಿಗೆ ಸಾಲ ನೀಡಿದರೆ ಮರುಪಾವತಿಸಲು ಸಾಮರ್ಥ್ಯ ಹೊಂದಿದ್ದಾರೆಯೇ, ಇಲ್ಲವೇ ಎಂದು ಬ್ಯಾಂಕ್‌ಗಳು ನಿರ್ಧರಿಸಲು ಈ ಅಂಕ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.



Read more…