Karnataka news paper

ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಆಸರೆ; ಮಾತೃ ವಂದನಾ ಯೋಜನೆಗೆ ಉತ್ತಮ ಸ್ಪಂದನೆ, ಅರ್ಜಿ ಸಲ್ಲಿಕೆ ಹೇಗೆ?!



ಫಾಲಲೋಚನ ಆರಾಧ್ಯ ಚಾಮರಾಜನಗರ
ಚಾಮರಾಜನಗರ: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ಗರ್ಭಿಣಿಯರು ಸದ್ಬಳಕೆ ಮಾಡಿಕೊಂಡಿದ್ದು, ಈವರೆಗೆ ಜಿಲ್ಲೆಯ 3,475 ಮಂದಿ ಸರಕಾರದ ಸಹಾಯಧನ ಪಡೆದುಕೊಂಡಿದ್ದಾರೆ. 2010ರಲ್ಲಿ ಇಂದಿರಾ ಮಾತೃ ಯೋಜನೆ ಎಂಬ ಹೆಸರಿನಿಂದ ಆರಂಭಗೊಂಡ ಯೋಜನೆ, 2017ರಲ್ಲಿ ಕೆಲ ಮಾರ್ಪಡುಗಳೊಂದಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಾಗಿ ಬದಲಾಯಿತು.

ವತಿಯಿಂದ ಈ ಯೋಜನೆಯನ್ನು ಆಯಾ ಜಿಲ್ಲಾಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಬಾರಿ ಗರ್ಭಿಣಿಯಾದವರಿಗೆ ಮಾತ್ರ ಈ ಯೋಜನೆಯಡಿ ತಲಾ 5 ಸಾವಿರ ರೂ. ಸಹಾಯಧನ ದೊರೆಯುತ್ತಿದೆ. ಗರ್ಭಿಣಿಯರು ಅಥವಾ ಬಾಣಂತಿಯರು ಅಪೌಷ್ಟಿಕತೆಯಿಂದ ಬಳಲಬಾರದು. ಅವರಿಗೆ ಪೌಷ್ಟಿಕ ಆಹಾರ ಖರೀದಿಸಲು ಸಹಾಯವಾಗಬೇಕೆಂಬ ದೃಷ್ಟಿಯಿಂದ ಈ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ.

2017 ಆರಂಭದಿಂದ ಈವರೆಗೆ ಜಿಲ್ಲೆಯಲ್ಲಿ 3768 ಮಂದಿಗೆ ಈ ಯೋಜನೆ ಉಪಯೋಗ ದೊರೆಕಿಸಲು ಗುರಿ ಇಟ್ಟುಕೊಂಡಿತ್ತಾದರೂ ಸದ್ಯ ಈವರೆಗೆ 3475 ಮಂದಿಗೆ ಸಹಾಯಧನ ತಲುಪಿಸುವ ಮೂಲಕ ಶೇ. 92.22 ರಷ್ಟು ಸಾಧನೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಗೀತಾಲಕ್ಷ್ಮಿ ತಿಳಿಸಿದ್ದಾರೆ.

ಭಾರತದಲ್ಲಿ ಬಹುತೇಕ ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದು, ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಗರ್ಭಾಶಯದಲ್ಲಿ ಸರಿಯಾದ ಪೋಷಣೆ ಸಿಗದಿದ್ದಾಗ ಮಗುವಿನ ಮೇಲೆ ಅದು ಅಡ್ಡಪರಿಣಾಮ ಬೀರುತ್ತದೆ. ಹೀಗಾಗಿ ಮಾತೃ ವಂದನಾ ಯೋಜನೆಯ ಮೂಲಕ ಅಂಥ ತಾಯಂದಿರಿಗೆ ಸಹಾಯಹಸ್ತ ನೀಡಲಾಗುತ್ತಿದೆ.

ಸಹಾಯಧನಕ್ಕೆ ಮಾನದಂಡವೇನು?ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಅನುಕೂಲ ಪಡೆಯಲು ಯಾವುದೇ ವರ್ಗ ಅಥವಾ ಎಪಿಎಲ್‌, ಬಿಪಿಎಲ್‌ ಎಂಬುದಿಲ್ಲ. ಮೊದಲ ಬಾರಿಗೆ ಅಮ್ಮಂದಿರಾಗುತ್ತಿರುವವರು ಇದರ ಪ್ರಯೋಜನ ಪಡೆಯಬಹುದು. ಅರ್ಥಾತ್‌ ಒಮ್ಮೆ ಮಾತ್ರ ಈ ಸಹಾಯಧನ ಪಡೆಯಲು ಸಾಧ್ಯ. ಆನ್‌ಲೈನ್‌ ಅಥವಾ ಅಂಗನವಾಡಿಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ದಾಖಲೆಗಳನ್ನು ಪರಿಶೀಲಿಸಿ 150 ದಿನದೊಳಗೆ ಮೊದಲ ಕಂತಿನಲ್ಲಿ 1 ಸಾವಿರ ರೂ., ಎರಡನೇ ಕಂತಿನ 2 ಸಾವಿರ ರೂ. ಹಣವನ್ನು ಗರ್ಭಧಾರಣೆ ಆರು ತಿಂಗಳ ನಂತರ ಪಾವತಿಸಲಾಗುತ್ತದೆ. ಮೂರನೇ ಕಂತಿನ 2 ಸಾವಿರ ರೂ. ಹಣವನ್ನು ಮಗುವಿನ ಜನನ ಅಧಿಕೃತವಾಗಿ ನೋಂದಾಯಿಸಿದ ಬಳಿಕ ಮತ್ತು ಮಗುವಿಗೆ ಮೊದಲ ಸುತ್ತಿನ ಬಿಸಿಜಿ, ಡಿಪಿಟಿ ಹೆಪಟೈಟಿಸ್‌ ಹಾಕಿಸಿದ ನಂತರ ಪಾವತಿಸಲಾಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲೆಯಲ್ಲಿ 3475 ಮಂದಿಗೆ ಪ್ರಯೋಜನ ದೊರಕಿದ್ದು, ಶೇ.92 ರಷ್ಟು ಸಾಧನೆ ಮಾಡಲಾಗಿದೆ. ಮತ್ತಷ್ಟು ಮಂದಿಗೆ ಯೋಜನೆ ಪ್ರಯೋಜನ ದೊರಕಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ.

ಗೀತಾಲಕ್ಷ್ಮೀ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಾ.ನಗರ



Read more