ಕಾಲ ಸರಿದಂತೆ ಮನಸು ಬೇರೆ ತರಹ ಯೋಚಿಸಲು ಶುರು ಮಾಡಿದಾಗ ಅವಳಿಗೆ ಕಸಿವಿಸಿ ಶುರು ಆಯ್ತು. ಮೊದಲನೆಯದಾಗಿ ಶೇಖರ ತಾನು ತಿಳಿದಷ್ಟು ಸಿರಿವಂತನಲ್ಲ, ವ್ಯವಹಾರ ಜ್ಞಾನವೂ ಕಡಿಮೆ. ಜನಪ್ರಿಯತೆ ಹೆಚ್ಚಿದ್ದರೂ ಅದನ್ನು ಬಳಸಿಕೊಳ್ಳುವ ಚಾಕಚಕ್ಯತೆ ಇರಲಿಲ್ಲ. ಜತೆಗೆ ತನ್ನ ಗೆಳತಿಯರೆಲ್ಲ ಓದಿ, ಒಳ್ಳೆಯ ಕೆಲಸಗಳಲ್ಲಿ ಕೈ ತುಂಬಾ ಸಂಬಳ ಪಡೆದುಕೊಳ್ಳುತ್ತಿದ್ದಾರೆ, ತಾನು ಮಾತ್ರ ಇವನ ಸಂಬಳಕ್ಕೆ ಕಾದು ಕೂರುವ ಗೃಹಿಣಿ ಆಗಿಬಿಟ್ಟೆ ಅನ್ನುವ ಕೊರಗು ಕಾಡಲು ಮೊದಲಾಯಿತು.
+
ಮೊದಲೇ ಚಂಚಲ ಮನಸ್ಸಿನ ಹೆಣ್ಣು ಅವಳು. ಚಿಕ್ಕ ವಯಸ್ಸಿನಲ್ಲೇ ಪ್ರೀತಿ, ಪ್ರೇಮದಲ್ಲಿ ಬಿದ್ದು ಮದುವೆಯಾದಾಗ ಸಾರ್ಥಕತೆ ಮೂಡಿತ್ತು. ಅದರೆ ದಿನ ಕಳೆದಂತೆ ಬದುಕು ಹಳಸಲು ಪ್ರಾರಂಭವಾಗಿತ್ತು. ಜತೆಗೆ ಶೇಖರ ಯಾವಾಗಲೂ ಬ್ಯುಸಿ. ಒಬ್ಬಳೇ ಮನೆಯಲ್ಲಿ ಇದ್ದು ಸಾಕಾಗಿ ಹೋಗಿತ್ತು. ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ. ಮುಂದೆ ಓದಲು, ಅವನ ಜತೆ ಶೂಟಿಂಗ್ ನೋಡಲು ಹೋಗುವುದು ಅಥವಾ ಅವನ ಕೆಲಸದಲ್ಲಿ ತಾನೂ ಸಹ ಭಾಗಿಯಾಗುವುದು ಕೂಡ ಅವಳಿಗೆ ಇಷ್ಟ ಇರಲಿಲ್ಲ. ಹೀಗಿರುವಾಗ ಅವಳ ಬದುಕಿನಲ್ಲಿ ಮತ್ತೆ ಎಂಟ್ರಿ ಕೊಟ್ಟ ಶ್ಯಾಮ್.
ತನ್ನ ಹದಿಹರೆಯದ, ಸ್ವಾತಂತ್ರದ ದಿನಗಳು, ಯಾವುದೇ ಯೋಚನೆ, ಹೋಣೆಯಿಲ್ಲದೆ ಇಲ್ಲದೆ ಕಳೆಯುತ್ತಿದ್ದ ನಿರಾತಂಕ ದಿನಗಳನ್ನು ನೆನಪಿಸಿತು ಅವನ ಬರುವಿಕೆ. ಮನಸು ಬಂಧನಗಳನ್ನು ಕಳಚಿ ಆಕಾಶದಲ್ಲಿ ವಿಹರಿಸಲು ರೆಡಿ ಆಯಿತು. ಇಬ್ಬರೂ ಜತೆಗೂಡಿದ ಕ್ಷಣಗಳು ಮನಸ್ಸಿಗೆ ಆತಂಕ ತಂದರೂ ಆಮೇಲೆ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳಲು ಕಲಿತುಕೊಂಡಲು. ಗಂಡನಿಗೆ ಸಮಯವಿಲ್ಲ, ಪ್ರೀತಿಇದ್ದರೂ ತೋರಿಸಲು ವ್ಯವಧಾನವಿಲ್ಲ, ಶ್ಯಾಮ್ ತನ್ನ ಬದುಕಿನಲ್ಲಿ ತಂಗಾಳಿಯಂತೆ ಬಂದಿರುವ. ಒಬ್ಬ ಇನಿಯ, ಗೆಳೆಯ ಅವಳಿಗೆ ಆಪ್ತನಾಗಿದ್ದ ಪ್ರಿಯತಮನಾಗಿ ಬಂದ ಶ್ಯಾಮ್ ಅವಳಿಗೆ ಅತ್ಯಂತ ಸನಿಹಕ್ಕೆ ಬಂದದ್ದು ತನ್ನ ಬಾಳಿಗೆ ಮುಳುವಾಗುತ್ತದೆ ಎಂದು ಅರಿವಿರಲಿಲ್ಲ. ಅವನಿಂದ ತನ್ನ ಬಾಳಿಗೆ ಹೊಸ ಲವಲವಿಕೆ, ಉತ್ಸಾಹ ತುಂಬಿದೆ, ಬರಡುಬಾಳು ಚಿಗುರಿದೆ ಎಂದೇ ಭಾವಿಸಿದ್ದಳು. ಹೊಸ ಮಿಂಚು ತನ್ನ ಬದುಕನ್ನೇ ಸುಟ್ಟು ಹಾಕುತ್ತೆ ಎಂದು ಅವಳ ಅರಿವಿಗೆ ಬಾರದಿದ್ದದ್ದು ವಿಪರ್ಯಾಸ.
(ಮುಂದುವರಿಯುವುದು)
ಧಾರಾವಾಹಿ ಕಥೆ : ಸಹನಾ ಪ್ರಸಾದ್
