Karnataka news paper

ವಿಹಾರಿ ಔಟ್‌, ಅಯ್ಯರ್‌ ಇನ್‌! ಮೊದಲನೇ ಟೆಸ್ಟ್‌ಗೆ ಭಾರತ ಪ್ಲೇಯಿಂಗ್‌ XI ಆರಿಸಿದ ಜಾಫರ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ವಾಸೀಮ್‌ ಜಾಫರ್‌.
  • ಡಿ.26 ಭಾನುವಾರದಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌.

ಹೊಸದಿಲ್ಲಿ:ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ (ಭಾನುವಾರ) ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಆಯ್ಕೆ ಮಾಡಿದ ಮಾಜಿ ಕ್ರಿಕೆಟಿಗ ವಾಸೀಮ್‌ ಜಾಫರ್‌, ಅತ್ಯುತ್ತಮ ಫಾರ್ಮ್‌ನಲ್ಲಿರುವ ಹನುಮ ವಿಹಾರಿ ಅವರನ್ನು ಕೈಬಿಟ್ಟು ಶ್ರೇಯಸ್‌ ಅಯ್ಯರ್‌ಗೆ ಅವಕಾಶ ಕಲ್ಪಿಸಿದ್ದಾರೆ.

ಇತ್ತೀಚೆಗೆ ಫಾರ್ಮ್‌ ಕಳೆದುಕೊಂಡಿರುವ ಹಾಗೂ ಉಪ ನಾಯಕತ್ವದಿಂದ ಕೆಳಗಿಳಿದಿರುವ ಅಜಿಂಕ್ಯ ರಹಾನೆ ಅವರನ್ನು 5ನೇ ಕ್ರಮಾಂಕಕ್ಕೆ ಉಳಿಸಿಕೊಂಡಿರುವ ಮಾಜಿ ಆರಂಭಿಕ, ಕಾನ್ಪುರ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್‌ ಅವರನ್ನು ಪ್ಲೇಯಿಂಗ್‌ XIನಲ್ಲಿ ಮುಂದುವರಿಸಿದ್ದಾರೆ.

ನಿರೀಕ್ಷೆಯಂತೆ ಇನಿಂಗ್ಸ್‌ ಆರಂಭಿಸಲು ಮಯಾಂಕ್‌ ಅಗರ್ವಾಲ್‌ ಹಾಗೂ ಕೆ.ಎಲ್‌ ರಾಹುಲ್ ಅವರನ್ನು ವಾಸೀಮ್‌ ಜಾಫರ್‌ ಆಯ್ಕೆ ಮಾಡಿದ್ದಾರೆ. ಎಂದಿನಂತೆ ಮೂರನೇ ಕ್ರಮಾಂಕಕ್ಕೆ ಚೇತೇಶ್ವರ್‌ ಪೂಜಾರ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿಗೆ ಚಾನ್ಸ್‌ ನೀಡಿದ್ದಾರೆ. ಕೊನೆಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 53.20 ರ ಸರಾಸರಿಯಲ್ಲಿ ರನ್‌ ಗಳಿಸಿದ್ದ ಅಜಿಂಕ್ಯ ರಹಾನೆಯನ್ನು ಉಳಿಸಿಕೊಂಡು, ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಹನುಮ ವಿಹಾರಿ ಬದಲು ಶ್ರೇಯಸ್‌ ಅಯ್ಯರ್‌ಗೆ ಅವಕಾಶ ಕಲ್ಪಿಸಿದ್ದಾರೆ.

IND vs SA: ಬಾಕ್ಸಿಂಗ್ ಡೇ ಟೆಸ್ಟ್‌ಗೆ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ಇಂತಿದೆ..

“ಕೆ.ಎಲ್ ಹಾಗೂ ಮಯಾಂಕ್ ಓಪನಿಂಗ್ ಮಾಡಲಿದ್ದಾರೆ. ಮೂರನೇ ಕ್ರಮಾಂಕಕ್ಕೆ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ. ಅಜಿಂಕ್ಯ ರಹಾನೆ ಅವರನ್ನು ನಾನು ಐದನೇ ಕ್ರಮಾಂಕದಲ್ಲಿ ಆಡಿಸುತ್ತೇನೆ. ಮೊದಲನೇ ಟೆಸ್ಟ್‌ಗೆ ನಾನು ರಹಾನೆ ಅವರನ್ನು ಸಿದ್ದಗೊಳಿಸುತ್ತೇನೆ, ಏಕೆಂದರೆ ಅವರ ಅನುಭವ ಹಾಗೂ ಕೌಶಲ ಇಲ್ಲಿ ಮುಖ್ಯವಾಗುತ್ತದೆ. ಇತ್ತೀಚೆಗೆ ಅವರು ಫಾರ್ಮ್‌ ಕಳೆದುಕೊಂಡಿರುವುದು ನಿಜ ಆದರೆ, ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ರನ್‌ ಗಳಿಸಿದ್ದಾರೆ ಮತ್ತು ಇಲ್ಲಿನ ಕಂಡೀಷನ್‌ ಅವರಿಗೆ ಚೆನ್ನಾಗಿ ಗೊತ್ತಿದೆ,” ಎಂದು ಹೇಳಿದ್ದಾರೆ.

IND vs SA: ಭಾರತ ಪ್ಲೇಯಿಂಗ್‌ XIಗೆ 7+4 ಫಾರ್ಮುಲಾ ಹೇಳಿಕೊಟ್ಟ ಜಾಫರ್!

ಭಾರತ ‘ಎ’ ತಂಡದ ಪರ ಹನುಮ ವಿಹಾರಿ ಇತ್ತೀಚಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ರನ್‌ ಗಳಿಸಿದ್ದರೂ ವಾಸೀಮ್‌ ಜಾಫರ್‌ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಿದ್ದಾರೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಿಷಭ್‌ ಪಂತ್, ಒಬ್ಬರು ಸ್ಪಿನ್ನರ್‌ ಹಾಗೂ ಮೂವರು ವೇಗಿಗಳನ್ನು ಅವರು ಆರಿಸಿದ್ದಾರೆ.

‘ಇದು ಅತ್ಯಂತ ಕಠಿಣ ನಿರ್ಧಾರ’ 5ನೇ ಕ್ರಮಾಂಕದ ಬಗ್ಗೆ ರಾಹುಲ್‌ ಮಾತು!

“ಬ್ಯಾಟಿಂಗ್ ಆರನೇ ಕ್ರಮಾಂಕಕ್ಕೆ ನಾನು ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡುತ್ತೇನೆ, ಏಕೆಂದರೆ ಇತ್ತೀಚಿಗೆ ನ್ಯೂಜಿಲೆಂಡ್‌ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಹಾಗಾಗಿ ವಿಹಾರಿ ಬದಲು ಅವರನ್ನು ಆಯ್ಕೆ ಮಾಡಿದ್ದೇನೆ. ಹೌದು ವಿಹಾರಿ ಭಾರತ ‘ಎ’ ತಂಡದಲ್ಲಿ ರನ್‌ ಗಳಿಸಿದ್ದಾರೆ. ಆದರೆ ಇದು ಟೆಸ್ಟ್‌ ಪಂದ್ಯವಲ್ಲ. ಹಾಗಾಗಿ ಟೆಸ್ಟ್‌ನಲ್ಲಿ ರನ್‌ ಗಳಿಸಿರುವ ಆಟಗಾರನನ್ನು ಆಯ್ಕೆ ಮಾಡುತ್ತೇನೆ. ಏಳನೇ ಕ್ರಮಾಂಕಕ್ಕೆ ರಿಷಭ್‌ ಪಂತ್‌, 8ನೇ ಕ್ರಮಾಂಕದಲ್ಲಿ ಸ್ಪಿನ್ನರ್‌ ಅಶ್ವಿನ್‌, ನಂತರ ಕ್ರಮವಾಗಿ ಬುಮ್ರಾ, ಶಮಿ ಹಾಗೂ ಸಿರಾಜ್‌ ಆಡಲಿದ್ದಾರೆ,” ಎಂದು ಜಾಫರ್‌ ಹೇಳಿದ್ದಾರೆ.



Read more