Karnataka news paper

ಸಿನಿಮಾ ವಿಮರ್ಶೆ: ‘ಪ್ರೇಮಂ ಪೂಜ್ಯಂ ಸಮಯಂ ಅಧಿಕಂ’


‘ಪ್ರೇಮಂ ಪೂಜ್ಯಂ’. ಶೀರ್ಷಿಕೆಯೇ ಹೇಳುವಂತೆ ಪ್ರೀತಿಯನ್ನು ಅತಿಯಾಗಿ ಪೂಜಿಸುವ ನಾಯಕ. ಸುದೀರ್ಘವಾದ ಪ್ರೇಮಕಥೆಯಾದರೂ ನಾಯಕಿಯನ್ನೂ ಅಂಬಾರಿ ಒಳಗಿರೋ ದೇವತೆಯಂತೆ ಮುಟ್ಟದೇ ಆರಾಧಿಸುವ ಕಾಯಕ. ವೃತ್ತಿಯಲ್ಲಿ ವೈದ್ಯರಾಗಿರುವ ಚಿತ್ರದ ನಿರ್ದೇಶಕ ರಾಘವೇಂದ್ರ ಬಿ.ಎಸ್‌. ಈ ರೀತಿಯ ವಿಭಿನ್ನ ಪ್ರೀತಿಯನ್ನು ಹಾಸ್ಯ–ಭಾವನೆ ಮಿಶ್ರಿತ ಕಥೆಯೊಂದಿಗೆ ಹೆಣೆದು ಪ್ರೇಕ್ಷಕರ ಹೃದಯ ಬಡಿತವನ್ನು ಚಿತ್ರದ ಮೊದಲಾರ್ಧದಲ್ಲಿ ಏರಿಳಿಸಿದರೂ, ದ್ವಿತಿಯಾರ್ಧದಲ್ಲಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿ ಕೊಂಚ ಎಡವಿದ್ದಾರೆ. ಒಂದು ರೀತಿಯಲ್ಲಿ ‘ಆಪರೇಷನ್‌ ಸಕ್ಸಸ್‌. ಬಟ್‌ ಪೇಶೆಂಟ್‌ ಡೆಡ್‌’ ಎನ್ನುವಂತಾಗಿದೆ ಚಿತ್ರ ನೋಡಿದ ಪ್ರೇಕ್ಷಕನ ಸ್ಥಿತಿ.

ಮಂಡ್ಯದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ನಾಯಕ ಶ್ರೀಹರಿ ವೈದ್ಯನಾಗುವ ಕನಸು ಹೊತ್ತು ನಗರಕ್ಕೆ ಬರುತ್ತಾನೆ. ಎಲ್ಲ ಕಾಲೇಜು ಸ್ಟೋರಿಯಲ್ಲಿ ಇರುವಂತೆ ಆರಂಭದಲ್ಲಿ ಹಾಸ್ಟೆಲ್‌ ಜೀವನ. ಹಿರಿಯ ವಿದ್ಯಾರ್ಥಿಗಳ ರ್‍ಯಾಗಿಂಗ್‌ ನಡುವೆಯೇ ತರಗತಿಗೆ ಪ್ರವೇಶಿಸುವ ನಾಯಕನಿಗೆ ನಾಯಕಿ ‘ಶರ್ಲಿನ್‌’ ನೋಡಿದಾಕ್ಷಣ ಆಕೆಯಲ್ಲಿ ‘ಏಂಜಲ್‌’ ಕಾಣಿಸುತ್ತಾಳೆ. ಅಯ್ಯೋ ಇದೆಲ್ಲ ಚಿತ್ರದಲ್ಲೂ ನಾಯಕನಿಗೆ ಆಗುವ ಶಾಕ್‌ ಎಂದು ಪ್ರೇಕ್ಷಕರು ಯೋಚಿಸುವಾಗ ನಿರ್ದೇಶಕರು ಮತ್ತೊಂದು ಶಾಕ್‌ ನೀಡುತ್ತಾರೆ. ನಾಯಕಿಯ ಕೈಕುಲುಕಲೂ ನಾಯಕ ಹಿಂದೇಟು ಹಾಕುತ್ತಾನೆ. ಅಲ್ಲಿಂದಲೇ ಪ್ರೀತಿಯನ್ನು, ನಾಯಕಿಯನ್ನು ಆರಾಧಿಸುವ ನಾಯಕನ ಕಾಯಕ ಆರಂಭ. ಕ್ರಿಶ್ಚಿಯನ್‌ ಆಗಿರುವ ನಾಯಕಿ ತನಗೆ ಸಿಗುವುದಿಲ್ಲ ಎಂದಿದ್ದರೂ ಶ್ರೀಹರಿ ಆಕೆಯನ್ನು ಹೃದಯದಲ್ಲೇ ಪೂಜಿಸುತ್ತಾನೆ. ಇಬ್ಬರ ಪ್ರೀತಿಗೂ ಸಮ್ಮತಿ ನೀಡುವ ನಾಯಕಿಯ ತಂದೆಯ ನಿಧನ ಈ ಪ್ರೀತಿಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದು ಇನ್ನುಳಿದ ಕಥೆ.     

ತಮ್ಮ 25ನೇ ಚಿತ್ರದಲ್ಲೂ ‘ನೆನಪಿರಲಿ’ ಪ್ರೇಮ್‌ನಂತೆಯೇ, ‘ಲವ್ಲಿ’ಯಾಗಿ ಚಿರಯುವಕನಾಗಿ ಏಳು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರೇಮ್‌ ಯಶಸ್ವಿಯಾಗಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿರುವ ನಟಿ ಬೃಂದಾ ಆಚಾರ್ಯ ‘ಏಂಜೆಲ್‌’ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರೀಹರಿ ಸಹಪಾಠಿಯಾಗಿ ತೆರೆ ಪ್ರವೇಶಿಸುವ ಮಾಸ್ಟರ್‌ ಆನಂದ್‌ ತಮ್ಮ ಡೈಲಾಗ್‌ ಕಚಗುಳಿ, ಭಾವನಾತ್ಮಕ ಸ್ನೇಹದ ಮೂಲಕ ಪ್ರೇಕ್ಷಕನಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ವಾರ್ಡನ್‌ ಪ್ರಾಯದ ಸೂಪರ್‌ ಸೂಪರ್‌ ಸೀನಿಯರ್‌ ‘ತಲೈವಾ’ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಸಾಧುಕೋಕಿಲ ತಮ್ಮ ಎಂದಿನ ನಟನೆಯ ಮೂಲಕ ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಚಿತ್ರದಲ್ಲಿ ಒಟ್ಟು 12 ಹಾಡುಗಳಿದ್ದು, ದ್ವಿತಿಯಾರ್ಧದ ಸಿನಿಮಾವನ್ನು ಇದೇ ಹಳಿತಪ್ಪಿಸಿದಂತಿದೆ. ಪ್ರತಿ ದೃಶ್ಯದ ಬಳಿಕ ‘ಓ ಈಗ ಇನ್ನೊಂದು ಹಾಡು’ ಎಂದು ಪ್ರೇಕ್ಷಕನೇ ಹೇಳುವಂತಾಗಿಸಿದೆ. ಹಾಡುಗಳ ಹಿನ್ನೆಲೆ ಸಂಗೀತ ಅದ್ಭುತವಾಗಿದ್ದರೂ, ಸಾಹಿತ್ಯ ಬಾಲಿಷವಾಗಿದೆ. ಚಿತ್ರೀಕರಣಕ್ಕೆ ಆಯ್ಕೆ ಮಾಡಿದ ಸ್ಥಳ ಹಾಗೂ ಛಾಯಾಗ್ರಹಣದ ಕೈಚಳಕದಿಂದ ಮೂಡಿಬಂದ ಅದ್ಭುತವಾದ ದೃಶ್ಯವೈಭವ ಇವೆಲ್ಲವನ್ನೂ ಮರೆಮಾಚುತ್ತದೆ ಎನ್ನುವುದು ಬೇರೆ ವಿಷಯ. ಔಷಧಿ ಚೀಟಿಯಲ್ಲಿನ ವೈದ್ಯರ ಕೈಬರಹದಂತೆ, ಅರ್ಥವಿಲ್ಲದ ಐಂದ್ರಿತಾ ರೇ ಪಾತ್ರವೇಕೆ ಎನ್ನುವ ಪ್ರಶ್ನೆ ಉಳಿದುಬಿಡುತ್ತದೆ. ‘ವೈದ್ಯೊ ನಾರಾಯಣ ಹರಿಃ’ ಎನ್ನುತ್ತಾ ವೈದ್ಯರೇ ಸೇರಿ ಮಾಡಿರುವ 173 ನಿಮಿಷಗಳ (ಮಧ್ಯಂತರ ಹೊರತುಪಡಿಸಿ) ಆಪರೇಷನ್‌ ಬಳಿಕ ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’ನೊಂದಿಗೆ ಪ್ರೇಕ್ಷಕ ಹೊರಬರುತ್ತಾನೆ. ‘ಶರ್ಲಿನ್‌ ಪತಿಯ ಪಾತ್ರದಲ್ಲಿ ವ್ಯಕ್ತಿಯೊಬ್ಬ ಕಾಣಸಿಕೊಂಡರೂ ಆ ಪಾತ್ರದ ಮುಖವನ್ನೇಕೆ ತೆರೆಯ ಮೇಲೆ ತೋರಿಸಲಿಲ್ಲ’ ಎನ್ನುವ ಪ್ರಶ್ನೆ ಕೊನೆಯವರೆಗೂ ಉಳಿದುಬಿಡುತ್ತದೆ. 



Read More…Source link